ಶೈಕ್ಷಣಿಕ ಕಾಶಿ ಹೆಸರು ಬರಲು ಹೆಗ್ಗಡೆ ಅವರದ್ದು ಸಿಂಹಪಾಲು

| Published : Oct 19 2025, 01:00 AM IST

ಸಾರಾಂಶ

ಸ್ವಾತಂತ್ರ್ಯ ಹೋರಾಟಗಾರ ಹುಕ್ಕೇರಿಕರ್ ರಾಮರಾಯರಿಂದ ಸ್ಥಾಪಿತವಾದ ಸಂಸ್ಥೆ ನೂತನ ಆಡಳಿತ ಮಂಡಳಿ ವಹಿಸಿಕೊಂಡು ಇದೀಗ 53ನೇ ವರ್ಷಕ್ಕೆ ಪಾದರ್ಪಣೆ ಮಾಡುತ್ತಿದ್ದು, ವೀರೇಂದ್ರ ಹೆಗ್ಗಡೆ ಅವರಿಗೆ ಧರ್ಮಸ್ಥಳ ಧರ್ಮಭೂಮಿಯಾದರೆ, ಧಾರವಾಡ ಅವರ ಕರ್ಮಭೂಮಿ.

ಧಾರವಾಡ:

ಡಾ. ವೀರೇಂದ್ರ ಹೆಗ್ಗಡೆ ಅವರು ವಿದ್ಯಾಗಿರಿಯ ಜೆಎಸ್‌ಎಸ್‌ ಜವಾಬ್ದಾರಿ ತೆಗೆದುಕೊಳ್ಳದೆ ಹೋದಲ್ಲಿ ಉತ್ತರ ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಮೌಲ್ಯಯುತ ಶಿಕ್ಷಣದಿಂದ ವಂಚಿತರಾಗುತ್ತಿದ್ದರು ಎಂದು ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.

ಜೆಎಸ್‌ಎಸ್‌ ನೂತನ ಆಡಳಿತ ಮಂಡಳಿಯ 53ನೇ ವರ್ಷಕ್ಕೆ ಪಾದಾರ್ಪಣೆ ಹಿನ್ನೆಲೆಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಅವರು, 1973ರಲ್ಲಿ ಈ ಜನತಾ ಶಿಕ್ಷಣ ಸಮಿತಿಯನ್ನು ವಹಿಸಿಕೊಂಡಾಗ ಆರ್ಥಿಕವಾಗಿ ಸಂಕಷ್ಟದಲ್ಲಿತ್ತು. ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಸಂಸ್ಥೆಯನ್ನು ಪುನರುಜ್ಜೀವನಗೊಳಿಸಿದರು. ಪ್ರೊ. ನ. ವಜ್ರಕುಮಾರ ಅವರನ್ನು ಕಾರ್ಯದರ್ಶಿಗಳನ್ನಾಗಿ ನೇಮಿಸಿ ಈ ಸಂಸ್ಥೆಯ ಬಲವರ್ಧನೆಯ ಕಾರ್ಯ ಪ್ರಾರಂಭಿಸಿದರು ಎಂದರು.

ಸ್ವಾತಂತ್ರ್ಯ ಹೋರಾಟಗಾರ ಹುಕ್ಕೇರಿಕರ್ ರಾಮರಾಯರಿಂದ ಸ್ಥಾಪಿತವಾದ ಸಂಸ್ಥೆ ನೂತನ ಆಡಳಿತ ಮಂಡಳಿ ವಹಿಸಿಕೊಂಡು ಇದೀಗ 53ನೇ ವರ್ಷಕ್ಕೆ ಪಾದರ್ಪಣೆ ಮಾಡುತ್ತಿದ್ದು, ಹೆಗ್ಗಡೆ ಅವರಿಗೆ ಧರ್ಮಸ್ಥಳ ಧರ್ಮಭೂಮಿಯಾದರೆ, ಧಾರವಾಡ ಅವರ ಕರ್ಮಭೂಮಿ. ಕೇವಲ ಎರಡು ಸಂಸ್ಥೆಗಳಿಂದ ಇದೀಗ ಜೆಎಸ್ಸೆಸ್‌ ಸಂಸ್ಥೆಯ ಅಡಿಯಲ್ಲಿ 25 ಸಂಸ್ಥೆಗಳಿವೆ. 22 ಸಾವಿರ ವಿದ್ಯಾರ್ಥಿಗಳು, 1300 ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ. ಧಾರವಾಡಕ್ಕೆ ಶೈಕ್ಷಣಿಕ ಕಾಶಿ ಹೆಸರು ಬರುವಲ್ಲಿ ಹೆಗ್ಗಡೆಯವರದು ಸಿಂಹಪಾಲಿದೆ ಎಂದರು.

ಜೆಎಸ್ಸೆಸ್‌ ಸಂಸ್ಥೆಯಲ್ಲಿ ಸುದೀರ್ಘ 52 ವರ್ಷ ಸೇವೆಗಾಗಿ, ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದ್ದಕ್ಕಾಗಿ ಡಾ. ಅಜಿತ ಪ್ರಸಾದ ಅವರನ್ನು ಸನ್ಮಾನಿಸಲಾಯಿತು. ಮಹಾವೀರ ಉಪಾದ್ಯೆ ನಿರೂಪಿಸಿದರು. ದೀಪಾ ಕುಲಕರ್ಣಿ ಪ್ರಾರ್ಥಿಸಿದರು, ಡಾ. ಸೂರಜ್ ಜೈನ್ ವಂದಿಸಿದರು. ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿ ಇದ್ದರು.