ಹೆಗ್ಗುಳ ಗ್ರಾಮ ತಿರುಮಲ ದೇಗುಲ ಗದ್ದೆ ಸಾಮೂಹಿಕ ನಾಟಿ ಕಾರ್ಯ ಸಂಪನ್ನ

| Published : Aug 21 2024, 12:40 AM IST

ಸಾರಾಂಶ

ತಾಲೂಕಿನ ಹೆಗ್ಗುಳ ಗ್ರಾಮದ ಗ್ರಾಮಸ್ಥರು ಶ್ರೀ ತಿರುಮಲ ದೇವಸ್ಥಾನಕ್ಕೆ ಸೇರಿದ ಗದ್ದೆಯಲ್ಲಿ ಸಾಮೂಹಿಕ ನಾಟಿ ಕಾರ್ಯವನ್ನು ಮಂಗಳವಾರ ನಡೆಸಿದರು. 3.25 ಎಕರೆ ಗದ್ದೆಯಲ್ಲಿ ಬಂದ ಲಾಭವನ್ನು ಗ್ರಾಮದ ದೇವರ ಹರಿಸೇವೆ, ಅರ್ಚಕರ ಸಂಬಳ ಸೇರಿದಂತೆ ವರ್ಷದ ಖರ್ಚು ಭರಿಸಲಾಗುವುದು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ತಾಲೂಕಿನ ಹೆಗ್ಗುಳ ಗ್ರಾಮದ ಗ್ರಾಮಸ್ಥರು ಶ್ರೀ ತಿರುಮಲ ದೇವಸ್ಥಾನಕ್ಕೆ ಸೇರಿದ ಗದ್ದೆಯಲ್ಲಿ ಸಾಮೂಹಿಕ ನಾಟಿ ಕಾರ್ಯವನ್ನು ಮಂಗಳವಾರ ನಡೆಸಿದರು.

ಮೊದಲ ದಿನ ಮನೆಗೆ ಒಬ್ಬರಂತೆ ಹಾಗೂ ಎರಡನೇ ದಿನ ಮನೆಗೆ ಇಬ್ಬರಂತೆ ಗದ್ದೆಗೆ ಆಗಮಿಸಿ ನಾಟಿ ಕಾರ್ಯದಲ್ಲಿ ಪಾಲ್ಗೊಂಡು ಮಾಡಲಾಗುತ್ತದೆ. 3.25 ಎಕರೆ ಗದ್ದೆಯಲ್ಲಿ ಬಂದ ಲಾಭವನ್ನು ಗ್ರಾಮದ ದೇವರ ಹರಿಸೇವೆ, ಅರ್ಚಕರ ಸಂಬಳ ಸೇರಿದಂತೆ ವರ್ಷದ ಖರ್ಚು ಭರಿಸಲಾಗುವುದು ಎಂದು ಗ್ರಾಮದ ಅಧ್ಯಕ್ಷ ಎಚ್.ಎ. ಯತೀಶ ಹೇಳಿದರು. ಎಲ್ಲರೂ ಸಮಯಕ್ಕೆ ಆಗಮಿಸಿ, ಸಾಮೂಹಿಕ ನಾಟಿ ಕಾರ್ಯದಲ್ಲಿ ಪಾಲ್ಗೊಳ್ಳುವ ಗ್ರಾಮಸ್ಥರು, ಒಟ್ಟಾಗಿ ಸೇರಿ ಊಟವನ್ನು ಮಾಡುವ ವ್ಯವಸ್ಥೆ ಮಾಡುವುದರೊಂದಿಗೆ ಗ್ರಾಮದಲ್ಲಿ ಒಗ್ಗಟ್ಟನ್ನು ಕಾಪಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಗ್ರಾಮಸ್ಥ ತಮ್ಮೇಗೌಡ ಮಾತನಾಡಿ, ಕಳೆದ 25 ವರ್ಷಗಳಿಂದ ಗ್ರಾಮಸ್ಥರು ಸೇರಿ ಗದ್ದೆಯಲ್ಲಿ ನಾಟಿ ಕಾರ್ಯ ಮಾಡುತ್ತಿದ್ದೇವೆ. ಎಲ್ಲ ಕೆಲಸವನ್ನು ನಾವೇ ಮಾಡಿ ಅದಕ್ಕೆ ತಗಲುವ ಖರ್ಚನ್ನು ಗ್ರಾಮಸ್ಥರೇ ಭರಿಸಲಾಗುತ್ತದೆ. ದೇವಾಲಯಕ್ಕೆ ಬೇರೆ ಆದಾಯದ ಮೂಲ ಇಲ್ಲದಿರುವುದರಿಂದ ನಾವುಗಳು ಒಂದಾಗಿ ಕೆಲಸ ಮಾಡಿ, ದೇವಾಲಯದ ವೆಚ್ಚಕ್ಕೆ, ಈ ಗದ್ದೆಯಲ್ಲಿ ಸಿಗುವ ಭತ್ತವನ್ನು ಮಾರಿದ ಸಂದರ್ಭ ಸುಮಾರು ರು. 1.50 ಲಕ್ಷ ಹಣ ಬರುತ್ತದೆ. ಆ ಹಣವನ್ನು ಬಳಸಿ, ದೇವಾಲಯದ ಅಭಿವೃದ್ಧಿ ಮತ್ತು ಖರ್ಚಿಗೆ ಬಳಸುತ್ತೇವೆ ಎಂದು ತಿಳಿಸಿದರು.

ನಾಟಿ ಸಂದರ್ಭ ಗ್ರಾಮ ಸಮಿತಿ ಉಪಾಧ್ಯಕ್ಷ ಪುಟ್ಟಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಚ್.ಎಚ್. ನವೀನ, ಸಹಕಾರ್ಯದರ್ಶಿ ಎಚ್.ಪಿ. ನಿಂಗರಾಜು, ಖಜಾಂಚಿ ಎಚ್.ಎಸ್. ಚಂದ್ರಶೇಖರ್ ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.