ಹೆಳವರ ಬದುಕು ಜಟಾಕ ಬಂಡಿ

| Published : Sep 10 2024, 01:42 AM IST

ಸಾರಾಂಶ

ಈಗ ಬದುಕಿರುವುದು ಅವರ ಎಷ್ಟನೇ ತಲೆಮಾರು? ಮುಂತಾದ ವಿಚಾರಣೆಗಳೆಲ್ಲ ಫಟಾಫಟ್ ಹೇಳಿ ಎಲ್ಲರ ಮನೆತನದ ಗತಕಾಲ ನೆನಪಿಸುತ್ತಿದ್ದ ಹೆಳವರ ಬದುಕೀಗ ಬಿಗಡಾಯಿಸಿದೆ.

ಎಲ್ಲೂ ನೆಲೆಯೂರದ ಜನರು

ಶಿವಮೂರ್ತಿ ಇಟಗಿ

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಮನೆಯ ಪೂರ್ವಜರ ಇತಿಹಾಸವನ್ನು ವಿವರವಾಗಿ ಹೇಳಿ, ಹೊಗಳಿ, ತಂದೆ, ಅಜ್ಜ, ಅಜ್ಜನ ತಂದೆ ಅವರ ತಂದೆ, ಹೆತ್ತವರ ತಂದೆ ಅವರು ಎಲ್ಲಿಂದ ಬಂದಿದ್ದು? ಈಗ ಬದುಕಿರುವುದು ಅವರ ಎಷ್ಟನೇ ತಲೆಮಾರು? ಮುಂತಾದ ವಿಚಾರಣೆಗಳೆಲ್ಲ ಫಟಾಫಟ್ ಹೇಳಿ ಎಲ್ಲರ ಮನೆತನದ ಗತಕಾಲ ನೆನಪಿಸುತ್ತಿದ್ದ ಹೆಳವರ ಬದುಕೀಗ ಬಿಗಡಾಯಿಸಿದೆ.

ಸದಾ ಒಂದು ಕೆಂಪು ಶಾಲು, ತಲೆ ಮೇಲೆ ಟೋಪಿ, ಹೆಗಲ ಮೇಲೆ ಹೊತ್ತಿಗೆ ಹಾಕಿಕೊಂಡು ಸುಗ್ಗಿಯ ಸಮಯದಲ್ಲಿ ಕೊಲ್ಲಾರಿ ಬಂಡಿ ಹೊಡಿದುಕೊಂಡು ಸುಮಾರು ೩೦ರಿಂದ ೪೦ ಕುಟುಂಬಗಳು ಸಂಸಾರ ಸಮೇತ ಬಂದು ಗ್ರಾಮಗಳ ಹೊರಹೊಲಯದಲ್ಲಿ ಬಿಡಾರ ಹೊಡೆಯುವ ಈ ಹೆಳವ ಜನಾಂಗ ಅಜ್ಜ, ಮುತ್ತಜ್ಜರ ಇತಿಹಾಸವನ್ನು ಕೇವಲ ಒಂದೇ ದೊಡ್ಡ ಹೊತ್ತಿಗೆಯಲ್ಲಿ ಬರೆದಿಟ್ಟುಕೊಂಡು ಎಲ್ಲ ಹೇಳುತ್ತಾರೆ. ಕೇವಲ ರಟ್ಟಿನ ಹಾಳೆಯ ದಪ್ಪನೆಯ ಖಾತೆಯೊಂದೆ ಸಾಕು. ಒಂದು ಕುಟುಂಬದ ನೂರಾರು ವರ್ಷಗಳ ಹಿಂದೆ ಬದುಕಿದ್ದವರ ಹೆಸರನ್ನು ಅವರ ಹುಟ್ಟಿರುವ ಮಕ್ಕಳ, ಮೊಮ್ಮಕ್ಕಳ ಜತೆಗೆ ಅವರ ಪೂರ್ವಜರ ಇತಿಹಾಸ ಹೊಗಳಿ, ಅವರಿಂದ ದವಸ-ಧಾನ್ಯ ಪಡೆಯುತ್ತಾ ಜೀವನ ಸಾಗಿಸುತ್ತಿರುವುದು ಬಲು ಕಷ್ಟದಾಯಕ.

ಬಂಡಿಯಲ್ಲೇ ಸಂಸಾರ:

ಹೆಳವರಿಗೆ ಬಂಡಿಯೇ ಅರಮನೆ, ಅದರಲ್ಲಿಯೇ ಇವರ ಸಂಸಾರ, ಊರೂರು ತಿರುಗಿ ಜೀವನ ನಡೆಸುವುದೇ ಇವರ ಪಾರಂಪರಿಕ ಕಾಯಕ. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಹೊಸವಾಟಾಳ ಅತೀ ಹೆಚ್ಚು ಹೆಳವರ ಜನಾಂಗ ಹೊಂದಿರುವ ಗ್ರಾಮ. ಇಲ್ಲಿನ ಕುಟುಂಬಗಳು ವರ್ಷಕ್ಕೊಮ್ಮೆ ನಾಡಿನ ಒಂದು ಭಾಗದ ಹತ್ತೆಂಟು ಜಿಲ್ಲೆಗಳಿಗೆ ಬಂಡಿಯಲ್ಲೇ ಇಡೀ ಸಂಸಾರ ತುಂಬಿಕೊಂಡು ಅಲೆಯುತ್ತ ಕುಟುಂಬದ ಇತಿಹಾಸ ತಿಳಿಸುತ್ತಾರೆ. ಹೀಗೆ ತೆರಳುವಾಗ ಮಕ್ಕಳನ್ನು ಜತೆಗೆ ಕರೆದುಕೊಂಡು ಹೋಗುತ್ತಿದ್ದು, ಈ ಮಕ್ಕಳಿಗೆ ಅಕ್ಷರ ಪರಿಚಯವೇ ಇಲ್ಲವಾಗಿವೆ.

ಗುಡಿಸಲುಗಳೇ ಅರಮನೆ:

ಈ ಚಿಕ್ಕದಾದ ಗುಡಿಸಲುಗಳಲ್ಲಿ ಮಕ್ಕಳೊಂದಿಗೆ ಐದಾರು ಜನರು ವಾಸವಾಗಿರುತ್ತಾರೆ. ಆಕಳು, ಕುದುರೆ, ಎತ್ತುಗಳನ್ನು ಬಂಡಿ ಹೊಡಿಕೊಂಡು ಸಂಚಾರ ಬೆಳೆಸುತ್ತಾರೆ. ಯಾವ ಸರ್ಕಾರ ಅಧಿಕಾರಕ್ಕೆ ಬಂದರೂ ನಮಗೆ ನಯಾಪೈಸೆ ಅನುಕೂಲ ಮಾಡಿಲ್ಲ. ಹೀಗಾಗಿ ನಾವು ಊರೂರು ಅಲೆದು ಬಂದು ಪುಡಿಗಾಸಿನಿಂದ ನಿತ್ಯ ಜೀವನ ಸಾಗಿಸಬೇಕಾಗಿದೆ. ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ ಅಂತಾ ಹೇಳ್ತಾರ್ರಿ, ನಮಗೆ ಇದುವರೆಗೊ ವೃದ್ಧಾಪ್ಯ ವೇತನವಾಗಲಿ, ಸಂಧ್ಯಾ ಸುರಕ್ಷಾ ಯೋಜನೆಯಾಗಲಿ, ಆಶ್ರಯ ಮನೆಗಳಾಗಲಿ ಯಾವುದೂ ನೀಡಿಲ್ಲ ಎನ್ನುತ್ತಾರೆ ಹೆಳವರಾದ ಮಹಾದೇವ, ಮಲ್ಲಪ್ಪ, ದುರಗಪ್ಪ.

ಸೌಲಭ್ಯ ಕಲ್ಪಿಸಲು ಆಗ್ರಹ:

ಸರ್ಕಾರದ ಎಲ್ಲ ಸೌಲಭ್ಯಗಳಿಂದ ವಂಚಿತರಾಗಿ ಊರೂರು ಅಲೆಯುವ ಹೆಳವರ ಬದುಕಿಗೆ ಶಾಶ್ವತ ನೆಲೆ ಇಲ್ಲದಿರುವುದು ವಿಪರ್ಯಾಸ. ಸರ್ಕಾರ ಈ ಜನಾಂಗದ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು. ಹೆಳವರಿಗೂ ಮಾಸಾಶಾನ ಮುಂತಾದ ಸೌಲಭ್ಯ ನೀಡಬೇಕೆಂದು ಸಮಾಜದ ಮುಖಂಡರಾದ ದ್ಯಾಮಣ್ಣ, ಫಕೀರಪ್ಪ, ಮಹಾದೇವ ಮತ್ತಿತರರು ಆಗ್ರಹಿಸಿದ್ದಾರೆ.