ಉತ್ತರ ಕನ್ನಡ ಜಿಲ್ಲಾಡಳಿತದಿಂದ ನಡೆಯುತ್ತಿರುವ ಕರಾವಳಿ ಉತ್ಸವ 2025ರ ಅಂಗವಾಗಿ ಆಯೋಜಿಸಲಾದ ಹೆಲಿಕಾಪ್ಟರ್ ಜಾಯ್ ರೈಡ್‌ಗೆ ಬುಧವಾರ ಚಾಲನೆ ಸಿಕ್ಕಿದೆ. ಮುಂದಿನ 4 ದಿನಗಳ ಕಾಲ ಇದು ನಡೆಯಲಿದೆ.

ಕಿವುಡ, ಮೂಕ ಶಾಲೆಯ ವಿದ್ಯಾರ್ಥಿಗಳು, ಪೌರಕಾರ್ಮಿಕರಿಗೆ ಉಚಿತ ಸವಾರಿ

ಕನ್ನಡಪ್ರಭ ವಾರ್ತೆ ಕಾರವಾರ

ಉತ್ತರ ಕನ್ನಡ ಜಿಲ್ಲಾಡಳಿತದಿಂದ ನಡೆಯುತ್ತಿರುವ ಕರಾವಳಿ ಉತ್ಸವ 2025ರ ಅಂಗವಾಗಿ ಆಯೋಜಿಸಲಾದ ಹೆಲಿಕಾಪ್ಟರ್ ಜಾಯ್ ರೈಡ್‌ಗೆ ಬುಧವಾರ ಚಾಲನೆ ಸಿಕ್ಕಿದೆ. ಮುಂದಿನ 4 ದಿನಗಳ ಕಾಲ ಇದು ನಡೆಯಲಿದೆ.

ನಗರದ ಲಂಡನ್ ಬ್ರಿಡ್ಜ್ ಬಳಿ ಕಡಲತೀರ ಪ್ರದೇಶದಲ್ಲಿ ಹೆಲಿಪ್ಯಾಡ್ ವ್ಯವಸ್ಥೆ ಮಾಡಲಾಗಿದ್ದು, ಹೆಲಿಕಾಪ್ಟರ್ ರೈಡ್ ಕಾರ್ಯಕ್ರಮವನ್ನು ಗಣ್ಯವ್ಯಕ್ತಿಗಳ ಬದಲಿಗೆ ಕಿವುಡ ಮತ್ತು ಮೂಕ ಮಕ್ಕಳ ಕೈಯಿಂದ ಉದ್ಘಾಟಿಸಲಾಯಿತು. ಆರಂಭದಲ್ಲಿ 30ಕ್ಕೂ ಹೆಚ್ಚು ವಿಶೇಷ ಚೇತನ ಮಕ್ಕಳಿಗೆ ಹಾಗೂ ನಾಲ್ವರು ಪೌರಕಾರ್ಮಿಕ ಮಹಿಳೆಯರಿಗೆ ಉಚಿತವಾಗಿ ಆಕಾಶದಲ್ಲಿ ಹಾರಾಟದ ಅವಕಾಶ ಕಲ್ಪಿಸಲಾಯಿತು.ಕಾರವಾರ-ಅಂಕೋಲಾ ಶಾಸಕ ಸತೀಶ್ ಸೈಲ್ ಅವರ ಪುತ್ರಿ ಸಾಚಿ ಸೈಲ್, ತಮ್ಮ ತಂದೆಯ ಹುಟ್ಟುಹಬ್ಬದ ಅಂಗವಾಗಿ ನಗರದ ಶಾಂತಿನಿಕೇತನ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯ ವಿದ್ಯಾರ್ಥಿಗಳಿಗೆ ಈ ವಿನೂತನ ಕೊಡುಗೆ ನೀಡಿದ್ದಾರೆ. ತಮ್ಮ ಸ್ವಂತ ಹಣದಲ್ಲಿ ವಿಶೇಷ ಚೇತನ ಮಕ್ಕಳಿಗೆ ಹಾಗೂ ನಾಲ್ವರು ಪೌರಕಾರ್ಮಿಕ ಮಹಿಳೆಯರಿಗೆ ಉಚಿತವಾಗಿ ಹೆಲಿಕಾಪ್ಟರ್ ರೈಡ್ ವ್ಯವಸ್ಥೆ ಮಾಡಿದ್ದಾರೆ.

ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ನಗರದ ಸ್ವಚ್ಛತೆಗೆ ಶ್ರಮಿಸುವ ಪೌರ ಕಾರ್ಮಿಕರೊಂದಿಗೆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿ ಮಾನವೀಯತೆ ಮೆರೆದರು. ಮೊದಲ ಬಾರಿಗೆ ಹೆಲಿಕಾಪ್ಟರ್‌ನಲ್ಲಿ ತೆರಳಿದ್ದಕ್ಕೆ ಪೌರಕಾರ್ಮಿಕರು ಸಂತಸ ವ್ಯಕ್ತಪಡಿಸಿದ್ದು, ಸ್ವಂತ ಹಣವನ್ನು ಖರ್ಚು ಮಾಡಿ ಈ ರೀತಿ ಹೆಲಿಕಾಪ್ಟರ್ ಆಗಲೀ, ವಿಮಾನವನ್ನಾಗಲೀ ಏರುವುದು ಸಾಧ್ಯವಾಗುತ್ತಿರಲಿಲ್ಲ. ಆದರೆ ಉಚಿತವಾಗಿ ಇಂತಹ ಅವಕಾಶವನ್ನು ನೀಡಿದ್ದಕ್ಕೆ ಶಾಸಕ ಸತೀಶ್ ಸೈಲ್ ಹಾಗೂ ಜಿಲ್ಲಾಧಿಕಾರಿಗೆ ಪೌರಕಾರ್ಮಿಕರು ಧನ್ಯವಾದ ಅರ್ಪಿಸಿದರು.

ಈ ವೇಳೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಕರಾವಳಿ ಉತ್ಸವದ ಅಂಗವಾಗಿ ಇಂದಿನಿಂದ ಡಿ.28ರ ವರೆಗೆ ಹೆಲಿಕಾಪ್ಟರ್ ರೈಡ್‌ನ್ನು ಆರಂಭಿಸುತ್ತಿದ್ದೇವೆ. ತುಂಬೆ ಎವಿಯೇಶನ್ಸ್ ಏಜೆನ್ಸಿ ರೈಡ್ ಕೈಗೊಳ್ಳಲಿದ್ದು, ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಹೆಲಿಕಾಪ್ಟರ್ ಹಾರಾಟಕ್ಕೆ ಅವಕಾಶ ಇರಲಿದೆ. ಸುಮಾರು 6-8 ನಿಮಿಷಗಳ ಕಾಲ ಈ ರೈಡ್ ಇರಲಿದ್ದು, ನಗರದ ಟ್ಯಾಗೋರ್ ಕಡಲತೀರ, ಕಾಳಿ ನದಿ ಸೇತುವೆ ಹಾಗೂ ಕೂರ್ಮಗಡ ದ್ವೀಪದವರೆಗೆ ಅರಬ್ಬೀ ಸಮುದ್ರ ಸುತ್ತಾಡಿಸಿಕೊಂಡು ಬರುವುದರಿಂದ ನಗರದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಅವಕಾಶ ಇರಲಿದೆ. ಸಾಕಷ್ಟು ಪ್ರಯತ್ನಪಟ್ಟು ದರವನ್ನು ಒಬ್ಬರಿಗೆ ₹3,900ರಂತೆ ಇಳಿಸಿದ್ದು, ಸಾರ್ವಜನಿಕರು ಇದರ ಆನಂದವನ್ನು ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು.ತುಂಬೆ ಏವಿಯೇಶನ್ಸ್ ಸಾರ್ವಜನಿಕರಿಗೆ ಹೆಲಿಕಾಪ್ಟರ್ ಸವಾರಿಯ ಆನಂದವನ್ನು ಒದಗಿಸುವ ಕಾರ್ಯ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಹೆಲಿ ಟ್ಯೂರಿಸಂ‌ನ್ನು ಉತ್ತೇಜಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದೆ. ಈ ಮೂಲಕ ಕರ್ನಾಟಕದ ಪ್ರವಾಸೋದ್ಯಮ ಅಭಿವೃದ್ಧಿಗೆ ತನ್ನದೇ ಆದ ರೀತಿಯಲ್ಲಿ ಕೊಡುಗೆಯನ್ನು ನೀಡುತ್ತಿದೆ ಎಂದು ಹೆಲಿ ರೈಡ್ ನಿರ್ವಾಹಕರು ತಿಳಿಸಿದರು.

ಸಿಇಒ ಡಾ. ದಿಲೀಶ್ ಶಶಿ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕಿ ಮಂಗಳಗೌರಿ ಭಟ್, ಇವೆಂಟ್ ಮ್ಯಾನೇಜರ್ ಧ್ರುವ ಇದ್ದರು.