ಹೆಲ್ಮೆಟ್ ಕಡ್ಡಾಯ ಜಾರಿ; ಸಮಸ್ಯೆ ತರಾವರಿ

| Published : Nov 04 2024, 12:27 AM IST

ಸಾರಾಂಶ

Helmet Mandatory Enforcement; Solve the problem

ಹೆಲ್ಮೆಟ್ ಖರೀದಿಗೆ ಮುಗಿಬಿದ್ದ ಮಂದಿ । ಪೊಲೀಸ್‌ರಿಂದ ತೀವ್ರ ತಪಾಸಣೆ, ದಂಡದ ಬಿಸಿ

----

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ರಸ್ತೆ ಅಪಘಾತ ಸಂಖ್ಯೆ ಜಾಸ್ತಿಯಾಗಿ ಸಾವು-ನೋವು ಹೆಚ್ಚಾದ ಹಿನ್ನೆಲೆ ನ.1ರಿಂದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್‌ ಕಡ್ಡಾಯ ಧರಿಸಬೇಕು ಎಂದು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್‌ ಇಲಾಖೆ ಕಟ್ಟುನಿಟ್ಟಿನ ಆದೇಶ ನೀಡಿದ್ದು, ಜನಸಾಮಾನ್ಯರು ಹಲವಾರು ಪರಿಣಾಮ ಎದುರಿಸುವಂತಾಗಿದೆ.

ರಾಯಚೂರು ನಗರ ಸೇರಿ ಎಲ್ಲ ತಾಲೂಕು, ಹೋಬಳಿ ಹಾಗೂ ಗ್ರಾಮೀಣ ಭಾಗದಲ್ಲಿ ಹೆಲ್ಮೆಟ್‌ ಕಡ್ಡಾಯಗೊಳಿಸಿದ್ದರಿಂದ ಇಷ್ಟು ದಿನ ಜಾಲಿಯಾಗಿ ಓಡಾಡುತ್ತಿದ್ದ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಕಡ್ಡಾಯಕ್ಕೆ ಒಗ್ಗಿಕೊಳ್ಳಲು ಪರದಾಡುತ್ತಿದ್ದಾರೆ.

ಹಬ್ಬದ ಸಂಭ್ರಮಕ್ಕೆ ಹೊಡೆತ:

ನ.1ರಿಂದ ಹೆಲ್ಮೆಟ್‌ ಕಡ್ಡಾಯ ನಿಯಮ ಜಾರಿಗೊಳಿಸಿದ್ದರಿಂದ ಪೊಲೀಸರು ಪರಿಶೀಲನೆ ನಡೆಸಿ ಹೆಲ್ಮೆಟ್‌ ಧರಿಸದವರ ಮೇಲೆ ಪ್ರಕರಣ ದಾಖಲಿಸಿ ದಂಡ ಬಿಸಿ ಮುಟ್ಟಿಸುತ್ತಿದ್ದಾರೆ. ಇದರಿಂದಾಗಿ ಕನ್ನಡ ರಾಜ್ಯೋತ್ಸವ, ಬೆಳಕಿನ ಹಬ್ಬ ದೀಪಾವಳಿ ಆಚರಣೆ ಸಂಭ್ರಮದಲ್ಲಿರುವ ಸಾರ್ವಜನಿಕರಿಗೆ ಅಯೋಮಯ ಎನಿಸುವಂತಾಗಿದೆ.

ರಾಯಚೂರು ಜಿಲ್ಲೆ ಪೊಲೀಸ್‌ ಇಲಾಖೆಯ ಮೂರು ಉಪವಿಭಾಗಗಳಾದ ರಾಯಚೂರು, ಸಿಂಧನೂರು ಮತ್ತು ಲಿಂಗಸುಗೂರಿನ ವ್ಯಾಪ್ತಿಗೆ ಬರುವ ಎಲ್ಲ ಪೊಲೀಸ್‌ ಠಾಣೆಗಳ ಅಧಿಕಾರಿ, ಸಿಬ್ಬಂದಿ ಹೆಲ್ಮೆಟ್ ಧರಿಸದವರಿಗೆ ಅಡ್ಡಹಾಕಿ ದಂಡದ ಬಿಸಿ ಮುಟ್ಟಿಸುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಸುಮಾರು ಹತ್ತು ಲಕ್ಷ ಕ್ಕು ಅಧಿಕ ರು. ದಂಡ ವಸೂಲಿ ಮಾಡಲಾಗಿದೆ.

ಮುಗಿಬಿದ್ದು ಹೆಲ್ಮೆಟ್ ಖರೀದಿ:

ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಖರೀದಿಗೆ ಮುಗಿಬಿದ್ದಿದ್ದಾರೆ. ಜಿಲ್ಲೆಯಾದ್ಯಂತ ಬೈಕ್ ಶೋರೂಮ್‌ಗಳು, ಆಟೋ ಮೊಬೈಲ್ಸ್ ಹಾಗೂ ವಾಹನ ಬಿಡಿ ಭಾಗಗಳ ಸಗಟು ವ್ಯಾಪಾರದ ಅಂಗಡಿಗಳಲ್ಲಿ ಹೆಲ್ಮೆಟ್‌ ಖರೀದಿ ಭರ್ಜರಿಯಾಗಿ ನಡೆಯುತ್ತಿದೆ.

ಸ್ಥಳೀಯ, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಹದಗೆಟ್ಟಿದ್ದು ವಾಹನಗಳ ಸಂಚಾರಕ್ಕೆ ಭಾರಿ ಸಮಸ್ಯೆಯಾಗಿರುವ ಸಮಯದಲ್ಲಿ, 40 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿ ಬಿಸಿಲ ತಾಪವನ್ನು ಅನುಭವಿಸುವ ಜಿಲ್ಲೆಯ ಜನರಿಗೆ ಹೆಲ್ಮೆಟ್‌ ಕಡ್ಡಾಯ ಬಿಸಿತುಪ್ಪವಾಗಿ ಪರಿಣಮಿಸಿದೆ. ಜಿಲ್ಲಾಡಳಿತ, ಪೊಲೀಸ್‌ ಇಲಾಖೆಯ ಈ ತೀರ್ಮಾನದ ವಿರುದ್ಧ ಜನಸಾಮಾನ್ಯರು ಒಳಗೊಳಗೆ ಆಕ್ರೋಶ ಹೊರಹಾಕುತ್ತಿದ್ದರೂ ಸಂಚಾರ ನಿಯಮ ಪಾಲನೆಗೆ ಮುಂದಾಗಬೇಕು ಎನ್ನುವ ಸಂದೇಶವನ್ನು ಜನಪ್ರತಿನಿಧಿಗಳು, ಅಧಿಕಾರಿ ವರ್ಗ ರವಾನಿಸುತ್ತಿರುವುದು ಜನರನ್ನು ಕಟ್ಟಿ ಹಾಕಿದೆ.

-------------------

.....ಕೋಟ್.....

ಹೆಲ್ಮೆಟ್ ಧರಿಸುವುದರಿಂದ ಪ್ರಾಣ ರಕ್ಷಣೆ ಆಗುತ್ತದೆ. ಇತ್ತೀಚಿನ ದಿನಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇದರಿಂದ ಜಿಲ್ಲೆಯಲ್ಲಿ ಹೆಲ್ಮೆಟ್‌ ಕಡ್ಡಾಯದ ತೀರ್ಮಾನಕ್ಕೆ ಬರಲಾಗಿದೆ. ಅದ್ದರಿಂದ ಬೈಕ್‌ ಸವಾರರು ಹೆಲ್ಮೆಟ್ ಕಡ್ಡಾಯ ಧರಿಸಬೇಕು. ಇಲ್ಲವಾದಲ್ಲಿ ದಂಡ ವಿಧಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ.

-ಡಾ.ಶರಣಪ್ರಕಾಶ ಪಾಟೀಲ್‌, ಜಿಲ್ಲಾ ಉಸ್ತುವಾರಿ ಸಚಿವರು

---------....ಕೋಟ್‌......

ವಿಪರೀತ ರಸ್ತೆ ಅಪಘಾತಗಳಿಂದಾಗಿ ಮೃತಪಟ್ಟರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಹೆಲ್ಮೆಟ್‌ ಕಡ್ಡಾಯಗೊಳಿಸಲಾಗಿದೆ. ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಿಂದ ಹೆಲ್ಮೆಟ್ ಕಡ್ಡಾಯ ಇರುವುದಿಲ್ಲ. ಜಿಲ್ಲಾಡಳಿತದ ಈ ತೀರ್ಮಾನಕ್ಕೆ ಜನರು ಸಹರಿಸಬೇಕು, ಗುಣಮಟ್ಟದ ಹೆಲ್ಮೆಟ್ಗಳನ್ನು ಧರಿಸಿ ವಾಹನಗಳನ್ನು ಚಲಾಯಿಸಬೇಕು.

-ಎಂ. ಪುಟ್ಟಮಾದಯ್ಯ, ಎಸ್ಪಿ

----------------

03ಕೆಪಿಆರ್‌ಸಿಆರ್ 01:

ರಾಯಚೂರು ನಗರದ ಕ್ರೀಡಾಂಗಣದ ಮುಂದೆ ಸಂಚಾರ ಪೊಲೀಸರು ಹೆಲ್ಮೆಟ್‌ ಧರಿಸದ ಬೈಕ್‌ ಸವಾರರನ್ನು ಹಿಡಿದು ದಂಡ ವಸೂಲಿ ಮಾಡುತ್ತಿರುವುದು.

03ಕೆಪಿಆರ್‌ಸಿಆರ್ 02:

ರಾಯಚೂರು ಜಿಲ್ಲೆಯಲ್ಲಿ ಹೆಲ್ಮೆಟ್‌ ಕಡ್ಡಾಯಗೊಳಿಸಿದ್ದರಿಮದ ಬೈಕ್‌ ಸವಾರರು ಹೆಲ್ಮೆಟ್‌ ಖರೀದಿಗೆ ಮುಗಿಬಿದ್ದಿರುವುದು.