ರಾಜ್ಯದಲ್ಲಿ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ಇಷ್ಟು ದಿನ ಹಳ್ಳಿಗಳಿಗೆ ರಿಯಾಯಿತಿ ಇತ್ತು, ಆದರೆ ಇನ್ನು ಮುಂದೆ ಅದು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಲೇಬೇಕು. ಇತ್ತೀಚೆಗೆ ಬಾಗೇಪಲ್ಲಿಯಲ್ಲಿ ದ್ವಿಚಕ್ರ ವಾಹನದಿಂದ ಬಿದ್ದು ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಮರುಕಳಿಸಬಾರದು.

ಕನ್ನಡಪ್ರಭ ವಾರ್ತೆ ಚೇಳೂರು ತಾಲೂಕಿನ ಭೈರಪ್ಪನಹಳ್ಳಿ ಗ್ರಾಮದಲ್ಲಿ ದೀರ್ಘಕಾಲದ ಸಮಸ್ಯೆಯಾಗಿದ್ದ ರಸ್ತೆ ಅಭಿವೃದ್ಧಿಗೆ ಸುಮಾರು 1.50 ಕೋಟಿ ರುಪಾಯಿ ವೆಚ್ಚದ ಕಾಮಗಾರಿಗಳಿಗೆ ಶನಿವಾರ ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರು, ಈ ಭಾಗದ ರಸ್ತೆಗಳು ಹದಗೆಟ್ಟಿದ್ದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಇದನ್ನು ಪರಿಹರಿಸಲು 60 ಲಕ್ಷ ರು., ಮತ್ತೊಂದು ಯೋಜನೆಯಡಿ 40 ಲಕ್ಷ ರೂ. ಹಾಗೂ ಇನ್ನೊಂದು ಯೋಜನೆಯಡಿ 40 ಲಕ್ಷ ರೂ. ಸೇರಿದಂತೆ ಒಟ್ಟು ಅಂದಾಜು 1 ಕೋಟಿ 50 ಲಕ್ಷ ರೂ. ಅನುದಾನದಲ್ಲಿ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.ಹೆಲ್ಮೆಟ್ ಕಡ್ಡಾಯ:

ಇದೇ ಸಂದರ್ಭದಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಮಾತನಾಡಿದ ಶಾಸಕರು, ರಾಜ್ಯದಲ್ಲಿ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ಇಷ್ಟು ದಿನ ಹಳ್ಳಿಗಳಿಗೆ ರಿಯಾಯಿತಿ ಇತ್ತು, ಆದರೆ ಇನ್ನು ಮುಂದೆ ಅದು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಲೇಬೇಕು. ಇತ್ತೀಚೆಗೆ ಬಾಗೇಪಲ್ಲಿಯಲ್ಲಿ ದ್ವಿಚಕ್ರ ವಾಹನದಿಂದ ಬಿದ್ದು ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆಯನ್ನು ಸ್ಮರಿಸಿದ ಶಾಸಕರು, ದ್ವಿಚಕ್ರ ಸವಾರರು ಹೆಲ್ಮೆಟ್‌ ಧರಿಸುವಂತೆ ಮನವಿ ಮಾಡಿದರು.ವಾಹನಕ್ಕೆ ವಿಮೆ ಕಡ್ಡಾಯ:

ಅನೇಕರು ವಾಹನಗಳಿಗೆ ಇನ್ಶೂರೆನ್ಸ್ (ವಿಮೆ) ಇಲ್ಲದೆ ಓಡಿಸುತ್ತಾರೆ. ದಯವಿಟ್ಟು ಎಲ್ಲಾ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಿ. ವಿಮೆ ಇದ್ದರೆ, ಅನಿರೀಕ್ಷಿತವಾಗಿ ಏನಾದರೂ ಹೆಚ್ಚು ಕಡಿಮೆಯಾದಲ್ಲಿ ನಿಮ್ಮ ಕುಟುಂಬಕ್ಕೆ ಆರ್ಥಿಕ ಆಸರೆಯಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಶ್ವೇತ ಬಿ.ಕೆ., ಕಂದಾಯ ನಿರೀಕ್ಷಕ (ಆರ್.ಐ) ಈಶ್ವರ್, ಶಿರಸ್ತೆದಾರ್ ಸತೀಶ್, ಡಿಎಸ್ಎಸ್ ಜಿಲ್ಲಾ ಸಂಚಾಲಕ ಕಡ್ಡಿಲು ವೆಂಕಟರವಣಪ್ಪ, ಸಹದೇವ ರೆಡ್ಡಿ, ಜೆ.ಎನ್. ಜಾಲರಿ, ಸುರೇಂದ್ರ, ಗಂಗಾಧರ, ದಲಿತ ಮುಖಂಡ ರಾಮಚಂದ್ರ, ಗ್ರಾಮ ಲೆಕ್ಕಿಗ ವೆಂಕಟೇಶ್, ಪಿಎಸ್ಐ ಹರೀಶ್ ಹಾಗೂ ಗ್ರಾಮಸ್ಥರು ಹಾಜರಿದ್ದರು.