ಡಿ. 12ರಂದು ಹೆಲ್ಮೆಟ್ ಧರಿಸುವ ಬಗ್ಗೆ ಪ್ರಚಾರ ಮಾಡಿ, ಕಡ್ಡಾಯ ಮಾಡಲಾಗುವುದು. ನಂತರ ಹೆಲ್ಮೆಟ್ ಧರಿಸದ ಹಾಗೂ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಗೊಪಾಲ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಬಿ. ಅವರ ಆದೇಶದ ಮೇರೆಗೆ ಡಿಸೆಂಬರ್ 12ರಿಂದ ತಾಲೂಕಿನಾದ್ಯಂತ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂಬ ಆದೇಶವನ್ನು ಜಾರಿಗೆ ತರಲಾಗಿದೆ. ಈ ಹಿನ್ನೆಲೆ ಇಲ್ಲಿನ ಮುಖ್ಯರಸ್ತೆಯಲ್ಲಿ ಹೆಲ್ಮೆಟ್ ಧರಿಸದೆ ಬೈಕ್ ಚಾಲನೆ ಮಾಡಿ, ಸಂಚಾರ ನಿಯಮ ಉಲ್ಲಂಘಿಸಿದವರನ್ನು ಪೊಲೀಸ್ ಇನ್ಸ್ಪೆಕ್ಟರ್ ಗೊಪಾಲ್ ತಡೆದು ಎಚ್ಚರಿಕೆ ಕೊಟ್ಟು ಕಳುಹಿಸಿದರು.ಗೌರಿಬಿದನೂರು ನಗರದ ಪೊಲೀಸ್ ಠಾಣೆ ಮುಂಭಾಗದಲ್ಲಿ ಇನ್ಸ್ಪೆಕ್ಟರ್ ಗೋಪಾಲ್ ರವರ ನೇತೃತ್ವದಲ್ಲಿ ಬೈಕ್ಗಳನ್ನು ತಡೆದು ಹೆಲ್ಮೆಟ್ ಧರಿಸದೆ ಚಾಲನೆ ಮಾಡುತ್ತಿದ್ದ ಸವಾರರಿಗೆ ತಮ್ಮ ಪ್ರಾಣ ಹಾನಿ ತಪ್ಪಿಸುವ ಸಲುವಾಗಿ ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ ಬೈಕ್ ಚಾಲನೆ ಮಾಡಬೇಕು. ಹೆಲ್ಮೆಟ್ ಧರಿಸದ ಸವಾರರು ಹೆಲ್ಮೆಟ್ ತಂದು ತೋರಿಸಿ ತಮ್ಮ ವಾಹನದ ದಾಖಲಾತಿಗಳನ್ನು ತೋರಿಸುವ ಮೂಲಕ ತಮ್ಮ ಬೈಕ್ ಗಳನ್ನು ತೆಗೆದುಕೊಂಡು ಹೋಗಬಹುದಾಗಿದೆ, ಪ್ರತಿಯೊಬ್ಬ ಬೈಕ್ ಸವಾರರು ಕಡ್ಡಾಯವಾಗಿ ತಪ್ಪದೇ ಹೆಲ್ಮೆಟ್ ಧರಿಸಿ ತಮ್ಮ ಜೀವವನ್ನು ಕಾಪಾಡಿಕೊಳ್ಳುವಂತೆ ತಿಳಿಹೇಳಿದರು.
ಡಿ. 12ರಂದು ಹೆಲ್ಮೆಟ್ ಧರಿಸುವ ಬಗ್ಗೆ ಪ್ರಚಾರ ಮಾಡಿ, ಕಡ್ಡಾಯ ಮಾಡಲಾಗುವುದು. ನಂತರ ಹೆಲ್ಮೆಟ್ ಧರಿಸದ ಹಾಗೂ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಗೊಪಾಲ್ ತಿಳಿಸಿದರು.ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ:
ಒಂಬತ್ತು ತಿಂಗಳಿನಿಂದ ನಾಲ್ಕು ವರ್ಷದೊಳಗಿನ ಮಕ್ಕಳನ್ನು ಹಿಂಬದಿ ಸವಾರರನ್ನಾಗಿ ಕರೆದುಕೊಂಡು ಹೋಗುವಾಗ ಮಕ್ಕಳೂ ಹೆಲ್ಮೆಟ್ ಧರಿಸಿರಬೇಕು ಮತ್ತು ಅಗತ್ಯ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ಸಂಬಂಧ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಮುಂದುವರಿಸಬೇಕೆಂದು ತಿಳಿಸಿದರು.ಸುರಕ್ಷತಾ ಸಲಕರಣೆಗಳ ಜೊತೆಗೆ, ನಾಲ್ಕು ವರ್ಷದ ಮಕ್ಕಳನ್ನು ಹಿಂಬದಿ ಸವಾರರನ್ನಾಗಿ ಕರೆದೊಯ್ಯುವಾಗ ಮೋಟಾರ್ ಸೈಕಲ್ ವೇಗವು ಗಂಟೆಗೆ 40 ಕಿ.ಮೀ ಗಿಂತ ಹೆಚ್ಚಿರಬಾರದು ಎಂದು ಕೇಂದ್ರದ ಮೋಟಾರು ಸಾರಿಗೆಯ ಹೊಸ ನಿಯಮದಲ್ಲಿ ತಿಳಿಸಲಾಗಿದೆ ಎಂದು ಹೇಳಿದರು.
ಅಪ್ರಾಪ್ತ ಮಕ್ಕಳು ವಾಹನ ಚಲಾಯಿಸಿದರೆ ಕ್ರಮ:ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಬೈಕ್ ಹಾಗೂ ಕಾರು ಚಲಾಯಿಸಲು ಕೊಡುವ ಪೋಷಕರು ದುಬಾರಿ ದಂಡ ತೆರುವುದರ ಜೊತೆಗೆ ಜೈಲು ಶಿಕ್ಷೆಯನ್ನೂ ಅನುಭವಿಸಬೇಕಾಗಬಹುದು, ಸ್ನೇಹಿತರ ಮನೆಗೆ ಹೋಗಲು, ಶಾಲಾ ಕಾಲೇಜುಗಳಿಗೆ ತೆರಳಲು ಅಥವಾ ಮಾರುಕಟ್ಟೆಯಲ್ಲಿ ದಿನಸಿ ವಸ್ತುಗಳನ್ನು ಖರೀದಿಸಿ ತರಲು, ಮಕ್ಕಳಿಗೆ ವಾಹನ ಕೊಟ್ಟು ಆಕಸ್ಮಿಕವಾಗಿ ಅಪಘಾತ ಸಂಭವಿಸಿದರೆ ಅದರ ಸಂಪೂರ್ಣ ಹೊಣೆಯನ್ನು ಬೈಕ್ ಮಾಲೀಕರೇ ಹೊರಬೇಕು. ಅಂದರೆ, ಮಕ್ಕಳಿಗೆ ವಾಹನ ಕೊಟ್ಟ ತಪ್ಪಿಗೆ ಪೋಷಕರು ಶಿಕ್ಷೆ ಅನುಭವಿಸಬೇಕು. ಅಪ್ರಾಪ್ತರು ಅಪಘಾತ ಮಾಡಿದರೆ ವಾಹನ ಮಾಲೀಕರ ಮೇಲೆ ಪ್ರಕರಣ ದಾಖಲಾಗುತ್ತದೆ. ಅಪಘಾತದಲ್ಲಿ ಜೀವಹಾನಿ ಸಂಭವಿಸಿದರೆ ಜೈಲುಶಿಕ್ಷೆ ಅನುಭವಿಸುವುದರ ಜತೆಗೆ ದೊಡ್ಡ ಮೊತ್ತದ ಪರಿಹಾರವನ್ನು ಮೃತರ ಕುಟುಂಬಕ್ಕೆ ಪಾವತಿಸಬೇಕಾಗಿ ಬರುತ್ತದೆ ಎಂದು ಅರಿವು ಮೂಡಿಸಿದರು.
ನಗರದ ಮಹಾತ್ಮ ಗಾಂಧಿ ವೃತ್ತ, ಎನ್.ಸಿ.ನಾಗಯ್ಯರೆಡ್ಡಿ ವೃತ್ತದಲ್ಲಿ ಮತ್ತು ಕೆಲವು ಸರ್ಕಾರಿ ಮತ್ತು ಖಾಸಗಿ ಶಾಲಾ-ಕಾಲೇಜುಗಳಲ್ಲಿ ಬೋಧಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಹಾಗೂ ಕಚೇರಿಗಳಲ್ಲಿ, ಸಬ್ ಇನ್‌ಸ್ಪೆಕ್ಟರ್ ಗೋಪಾಲ್, ಪೊಲೀಸ್ ಕಾನ್‌ಸ್ಟೆಬಲ್ ತಿಪ್ಪೇಶ್. ಎಚ್.ಸಿ, ಬಾಬು, ಶ್ರೀಕಾಂತ್ ವಾಹನ ಸವಾರರಲ್ಲಿ ಹೆಲ್ಮೆಟ್ ಬಗ್ಗೆ ಜಾಗೃತಿ ಮೂಡಿಸಿದರು.ಪಟ್ಟಣದ ಮುಖ್ಯರಸ್ತೆಯ ತಾಲೂಕು ಕಚೇರಿಯ ಮುಂದೆ ಹೆಲ್ಮೆಟ್ ಧರಿಸದ ಹಾಗೂ ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆ, ದ್ವಿಚಕ್ರ ವಾಹನದಲ್ಲಿ ತ್ರಿಬಲ್ ರೈಡಿಂಗ್ ಸೇರಿದಂತೆ ಇನ್ನಿತರ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರನ್ನು ತಡೆದ ಪೊಲೀಸರು, ಯಾರೂ ಸಹ ಕಾನೂನು ಉಲ್ಲಂಘಿಸಬಾರದೆಂದು ತಿಳಿಹೇಳಿ ಕಳುಹಿಸಿದರು.