ಹೂವಿನಹಡಗಲಿ: ವ್ಯಸನ ಮುಕ್ತ ಸಮಾಜವನ್ನು ನಿರ್ಮಾಣಕ್ಕೆ ಎಲ್ಲರೂ ಸಹಕರಿಸಬೇಕು. ಇದಕ್ಕೆ ದಾಸರಾದ ಯುವ ಜನಾಂಗವು ತಮ್ಮ ಭವಿಷ್ಯತ್ತಿನ ಬದುಕನ್ನು ಹಾಳು ಮಾಡುತ್ತದೆ. ಎಚ್ಚರಿಕೆ ವಹಿಸುವುದು ಅಗತ್ಯವಿದೆ ಎಂದು ಸಿಪಿಐ ಮಲ್ಲಪ್ಪ ಹೂಗಾರ ಹೇಳಿದರು.

ಅಂತರಾಷ್ಟ್ರೀಯ ಮಾದಕ ದ್ರವ್ಯ ವ್ಯಸನ ವಿರೋಧಿ ದಿನಾಚರಣೆ ಪ್ರಯುಕ್ತ ಪಟ್ಟಣದಲ್ಲಿ ಆಯೋಜಿಸಿದ್ದ ಪೊಲೀಸ್ ಮ್ಯಾರಥಾನ್‌ನಲ್ಲಿ ಭಾಗವಹಿಸಿ ಮಾತನಾಡಿ, ಇಂದು ಯುವ ಜನತೆಯು ಶೋಕಿಗಾಗಿ ಮಾದಕ ದ್ರವ್ಯ ಹಾಗೂ ಮಾದಕ ವಸ್ತುಗಳನ್ನು ಸೇವನೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ನಾಡಿನಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡುವ ಶಕ್ತಿ ಯುವ ಜನತೆಯಲ್ಲಿ ಮಾತ್ರ ಇದೆ. ಶಾಲಾ, ಕಾಲೇಜು ಆವರಣಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಮತ್ತು ಬರಿಸುವ ವಸ್ತುಗಳನ್ನು ಸೇವಿಸುತ್ತಿದ್ದಾರೆ. ಇದು ಕ್ರಮೇಣ ಅವರ ಬದುಕನ್ನು ನಾಶಕ್ಕೆ ಹಾದಿ ಮಾಡುತ್ತದೆ. ಪಾಲಕರು ಮಕ್ಕಳ ಭವಿಷ್ಯದ ಮೇಲೆ ಹಿಡಿತ ತರಲು ಅನೇಕ ನಿಯಮಗಳನ್ನು ಹಾಕುತ್ತಿದ್ದಾರೆ. ಮಕ್ಕಳನ್ನು ಅಂಕಗಳ ಹಿಂದೆ ಓಡುವಂತೆ ಒತ್ತಡ ಹಾಕದೇ ಉತ್ತಮ ಸಂಸ್ಕಾರವನ್ನು ಕಲಿಸಬೇಕಾಗಿದೆ ಎಂದರು.

ಪಟ್ಟಣದ ಸರ್ಕಾರಿ ಬಾಲಕಿಯರ ಪಪೂ ಕಾಲೇಜು, ಬಿಜಿಆರ್ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ವ್ಯಸನದ ಕುರಿತು ಜಾಗೃತಿ ಮೂಡಿಸಲಾಯಿತು.

ಪಿಎಸ್‌ಐಗಳಾದ ಮಣಿಕಂಠ, ಜೆ.ಕೆ. ಅಬ್ಬಾಸ್, ಅಶೋಕ ಬೇವೂರು, ಶ್ರೀನಿವಾಸ, ವಾಸು, ಎಎಸ್‌ಐ ಜಯಪ್ರಕಾಶ್, ಸಿದ್ದಪ್ಪ, ಸಿಬ್ಬಂದಿ ರಾಜುನಾಯ್ಕ, ವೀರೇಶ್, ಪರಶುರಾಮ ಇದ್ದರು.