ಕನ್ನಡಪ್ರಭ ವಾರ್ತೆ ಮಡಿಕೇರಿ

ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಯೋಜನಾ ಸಮನ್ವಯ ಅಧಿಕಾರಿಯಾಗಿ ಜಿಲ್ಲೆಯಲ್ಲಿ ಸುಮಾರು 33 ವರ್ಷಗಳ ಕಾಲ ಸುದೀರ್ಘ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಎಸ್.ಹೊನ್ನೇಗೌಡ ಅವರಿಗೆ ವಿವಿಧ ಇಲಾಖೆ ವತಿಯಿಂದ ಆತ್ಮೀಯವಾಗಿ ಬೀಳ್ಕೊಡುಗೆ ನೀಡಲಾಯಿತು.ನಗರದ ಮೈತ್ರಿ ಹಾಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊನ್ನೇಗೌಡ ಅವರಿಗೆ ಶಾಲೂ ಹೊದಿಸಿ, ಫಲ ತಾಂಬೂಲ ಹಾಗೂ ವಿಶೇಷ ಉಡುಗೊರೆ ನೀಡಿ ಸನ್ಮಾನಿಸಿ, ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಅಧಿಕಾರಿ ಎಸ್.ಹೊನ್ನೇಗೌಡ ಅವರು, ಜಿಲ್ಲೆಯಲ್ಲಿ ಉತ್ತಮ ಅನುಭವ ಆಗಿದೆ. ಜೊತೆಗೆ ಆತ್ಮತೃಪ್ತಿಯೂ ಇದೆ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸಿಇಒ ಆನಂದ್ ಪ್ರಕಾಶ್ ಮೀನಾ ಅವರು, ಹೊನ್ನೇಗೌಡ ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದು, ತಮ್ಮ ಸೇವಾ ಅವಧಿಯಲ್ಲಿ ವಾಲ್ಮೀಕಿ ವಸತಿ ಶಾಲೆ, ಹಾಡಿಗಳಿಗೆ ಭೇಟಿ ನೀಡಿ ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ ಎಂದರು.ನ್ಯೂಕ್ಲಿಯರ್ ಮೆಡಿಸಿನ್ ರೇಡಿಯಾಲಜಿಸ್ಟ್ ಡಾ.ಸಿದ್ಧಲಿಂಗದೇವರು, ಹುಣಸೂರು ತಾಲೂಕು ಪರಿಶಿಷ್ಟ ಕಲ್ಯಾಣಾಧಿಕಾರಿ ಗಂಗಾಧರ್, ಎಸ್.ಹೊನ್ನೇಗೌಡ ಅವರ ತಂದೆ ಶ್ರೀನಿವಾಸಯ್ಯ, ತಾಯಿ ಪುಟ್ಟಚನ್ನಮ್ಮ, ಪತ್ನಿ ಶಶಿಕಲಾ ಹೊನ್ನೇಗೌಡ ಮತ್ತಿತರರಿದ್ದರು.ಮಹಾತ್ಮಗಾಂಧಿ ನರೇಗ ಯೋಜನೆಯ ಟಿಇಸಿ ಸಂಯೋಜಕ ಪವನ್‌ಕುಮಾರ್ ನಿರೂಪಿಸಿದರು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಬಾಲಕೃಷ್ಣ ರೈ ಸ್ವಾಗತಿಸಿದರು. ಕವಿತ ಮತ್ತು ತಂಡ ಪ್ರಾರ್ಥಿಸಿದರು.ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ಹೊನ್ನೇಗೌಡರ ಪತ್ನಿ ಶಶಿಕಲಾ ಹೊನ್ನೇಗೌಡರು ರಚಿಸಿ ಜ್ಞಾನಧಾರೆಗಳು ಪುಸ್ತಕ ಬಿಡುಗಡೆ ಮಾಡಲಾಯಿತು.