ಕುರುಗೋಡು: ತಾಲೂಕಿನಲ್ಲಿ ಇಂದಿನಿಂದ ಆರಂಭಗೊಂಡ ಮತದಾರರ ವಿಶೆಷ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಗೆ ಕಂಪ್ಲಿ ವಿಧಾನಸಭಾಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ದೇವೇಂದ್ರಪ್ಪ ಚಾಲನೆ ನೀಡಿದರು.

ಪಟ್ಟಣದ ೨೨ನೇ ವಾರ್ಡ್‌ನಲ್ಲಿರುವ ಪುರಸಭೆ ಅಧ್ಯಕ್ಷ ಜಿ.ಮಂಜುನಾಥ ಅವರ ಮನೆಯಲ್ಲಿನ ಮತದಾರರಿಗೆ ಎಸ್ಐಆರ್ ಫಾರಂ ನೀಡಿ ಪ್ರಕ್ರಿಯೆಗೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ನೇಮಕಗೊಂಡಿರುವ ಬೂತ್ ಮಟ್ಟದ ಅಧಿಕಾರಿಗಳು ಮನೆಗಳಿಗೆ ಭೇಟಿ ನೀಡಿ ಎಸ್ಐಆರ್ ಫಾರಂ ನೀಡಲಿದ್ದಾರೆ. ಮತದಾರರೇ ಭರ್ತಿ ಮಾಡಿದ ಫಾರಂಗಳನ್ನು ಒಂದು ಬಾರಿ ಪರಿಶೀಲಿಸಿ ಸ್ವೀಕೃತಿ ಪಡೆದು ಬಿಎಲ್ಒಗಳಿಗೆ ನೀಡಬೇಕು ಎಂದು ತಿಳಿಸಿದರು.

ತಹಶೀಲ್ದಾರ್ ನರಸಪ್ಪ ಮಾತನಾಡಿ, ಮತದಾರರ ವಿಶೆಷ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಜೂನ್ ೩೦ರಿಂದ ಜುಲೈ ೨೯ರ ವರೆಗೆ ಚಾಲನೆಯಲ್ಲಿರುತ್ತದೆ. ಯಾವುದೇ ಕಾರಣಕ್ಕೂ ಅರ್ಹ ಮತದಾರರ ಹೆಸರು ಪಟ್ಟಿಯಿಂದ ಹೊರಗುಳಿಯಬಾರದು ಮತ್ತು ಅನರ್ಹರ ಹೆಸರು ಪಟ್ಟಿಯಲ್ಲಿ ಸೇರಬಾರದು ಎನ್ನುವ ಚುನಾವಣಾ ಆಯೋಗದ ಮುಖ್ಯ ಉದ್ದೇಶ ಈಡೇರಿಸಲು ಸಿಬ್ಬಂದಿ ಶ್ರದ್ಧೆಯಿಂದ ಕಾರ್ಯ ನಿರ್ವಹಿಸಬೇಕು. ಮನೆಗಳಿಗೆ ಭೇಟಿ ನೀಡುವ ಸಿಬ್ಬಂದಿಗೆ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.

ತಾಲೂಕಿನ ಗೆಣಿಕೆಹಾಳು, ಯಲ್ಲಾಪುರ, ಬಾನಹಟ್ಟಿ, ವದ್ದಟ್ಟಿ, ಕಲ್ಲುಕಂಭ ಗ್ರಾಮಗಳಲ್ಲಿ ಅಧಿಕಾರಿಗಳ ತಂಡ ಭೇಟಿ ನೀಡಿ ಪ್ರಕ್ರಿಯೆಗೆ ಚಾಲನೆ ನೀಡಿದರು.


ಗ್ರೇಡ್-೨ ತಹಶೀಲ್ದಾರ್ ಮಲ್ಲೇಶಪ್ಪ, ಪುರಸಭೆ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ಕಂದಾಯಾಧಿಕಾರಿ ನಾಗರಾಜ, ಉಪ ತಹಶೀಲ್ದಾರ್ ರವೀಂದ್ರ ಬಾಬು ಮತ್ತು ರಾಜಶೇಖರ, ಬಿಎಲ್ಒ ವನಜಾಕ್ಷಿ ಇದ್ದರು.

ಕುರುಗೋಡಿನಲ್ಲಿ ಸಹಾಯಕ ಚುನಾವಣಾಧಿಕಾರಿ ದೇವೇಂದ್ರಪ್ಪ ಮತದಾರರ ವಿಶೆಷ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಗೆ ಮಂಗಳವಾರ ಚಾಲನೆ ನೀಡಿದರು.