ಹೊನ್ನಾಳಿ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್, ಜಗಜ್ಯೋತಿ ಬಸವಣ್ಣ, ಕಿತ್ತೂರು ರಾಣಿ ಚನ್ನಮ್ಮ, ಮಹರ್ಷಿ ವಾಲ್ಮೀಕಿ, ಸಂತ ಸೇವಾಲಾಲ, ಅಂಬಿಗರ ಚೌಡಯ್ಯ ಅವರ ಪ್ರತಿಮೆಗಳನ್ನು ಸ್ಥಾಪಿಸಲಾಗುವುದು ಎಂದು ರಾಜ್ಯ ಬಯಲುಸೀಮೆ ಪ್ರದೇಶಾಭಿವೃದ್ಧಿ ನಿಗಮ ಅಧ್ಯಕ್ಷ ಎಚ್.ಬಿ. ಮಂಜಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್, ಜಗಜ್ಯೋತಿ ಬಸವಣ್ಣ, ಕಿತ್ತೂರು ರಾಣಿ ಚನ್ನಮ್ಮ, ಮಹರ್ಷಿ ವಾಲ್ಮೀಕಿ, ಸಂತ ಸೇವಾಲಾಲ, ಅಂಬಿಗರ ಚೌಡಯ್ಯ ಅವರ ಪ್ರತಿಮೆಗಳನ್ನು ಸ್ಥಾಪಿಸಲಾಗುವುದು ಎಂದು ರಾಜ್ಯ ಬಯಲುಸೀಮೆ ಪ್ರದೇಶಾಭಿವೃದ್ಧಿ ನಿಗಮ ಅಧ್ಯಕ್ಷ ಎಚ್.ಬಿ. ಮಂಜಪ್ಪ ಹೇಳಿದರು.

ಶನಿವಾರ ಕನಕದಾಸ ರಂಗಮಂದಿರದಲ್ಲಿ ಸರ್ವಧರ್ಮ ಮಹಾಸಭಾ ವತಿಯಿಂದ ಕರೆಯಲಾಗಿದ್ದ ನಾಯಕರ ಪ್ರತಿಮೆಗಳ ಸ್ಥಾಪನೆ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪಟ್ಟಣದಲ್ಲಿ ಈಗಾಗಲೇ ಸಂಗೊಳ್ಳಿ ರಾಯಣ್ಣ ಪ್ರತಿಮೆ, ದೇವನಾಯಕನಹಳ್ಳಿಯಲ್ಲಿ ಕನಕದಾಸರ ಪ್ರತಿಮೆ ಸ್ಥಾಪನೆ ಮಾಡಲಾಗಿದೆ. ಹೀಗಾಗಿ ಉಳಿದ ಅನೇಕ ಮಹಾನ್ ನಾಯಕರ ಪ್ರತಿಮೆಗಳನ್ನು ಸ್ಥಾಪನೆ ಮಾಡುವ ಸಂಬಂಧ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕಿನ ಸರ್ವಧರ್ಮಗಳ ಮುಖಂಡರ ಸಭೆಯನ್ನು ಕರೆಯಲಾಗಿದೆ. ಅವರ ಸಲಹೆ- ಸೂಚನೆಗಳಂತೆ ಪುರಸಭೆಯಲ್ಲಿ ಠರಾವು ಮಾಡಿಸಿ ಆಯ ಕಟ್ಟಿನ ಜಾಗಗಳಲ್ಲಿ ಪ್ರತಿಮೆಗಳನ್ನು ಸ್ಥಾಪನೆ ಮಾಡಲಾಗುವುದು ಎಂದರು.

ಪ್ರತಿಮೆಗಳ ಸ್ಥಾಪನೆಗೆ ಬೇಕಾದ ಆರ್ಥಿಕ ಸಂಪನ್ಮೂಲಗಳನ್ನು ಕ್ರೋಢೀಕರಿಸಬೇಕಾಗಿದೆ. ಈ ಜಗತ್ತು ಕೇವಲ ಒಂದು ಜಾತಿ, ಜನಾಂಗ ಅಥವಾ ಸಮುದಾಯದಿಂದ ನಿರ್ಮಾಣವಾಗಿಲ್ಲ. ಪ್ರತಿ ಜಾತಿ, ಜನಾಂಗದಲ್ಲಿಯೂ ಮಹಾನ್ ನಾಯಕರ ಉಗಮವಾಗಿದೆ. ಅವರೆಲ್ಲರೂ ತಮ್ಮದೇಯಾದ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ಕೊಟ್ಟಿದ್ದಾರೆ. ಹೀಗಾಗಿ, ಅವರೆಲ್ಲರ ಪ್ರತಿಮೆ ಸ್ಥಾಪನೆ ಮೂಲಕ ಅವರ ಕೊಡುಗೆಗಳನ್ನು ಮುಂದಿನ ಪೀಳಿಗೆಗೆ ತಿಳಿಸಬೇಕಾಗಿದೆ. ಈ ಉದ್ದೇಶಕ್ಕಾಗಿ ಕೋಟಿಗಟ್ಟಲೇ ಹಣದ ಅವಶ್ಯಕತೆ ಇದ್ದು, ತಾವೆಲ್ಲರೂ ತನುಮನಧನದ ಸಹಾಯ ಮಾಡಬೇಕು ಎಂದು ಮನವಿ ಮಾಡಿದರು.

ವಾಲ್ಮೀಕಿ ಸಮಾಜದ ಅಧ್ಯಕ್ಷ ನಾಗೇಂದ್ರಪ್ಪ, ಮಾಜಿ ಛೇರ್ಮನ್ ನಾಗಪ್ಪ, ಟಿ.ಶಿವಾನಂದಪ್ಪ, ಪಂಚಮಸಾಲಿ ಯುವ ಘಟಕದ ಮುಖಂಡ ಹಾಲೇಶಪ್ಪ, ಮುಖಂಡ ಜಯಣ್ಣ ಮಾತನಾಡಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಜಿಪಂ ಮಾಜಿ ಅಧ್ಯಕ್ಷ ಆರ್.ನಾಗಪ್ಪ, ದಲಿತ ಸಮಾಜ ಮುಖಂಡರಾದ ದಿಡಗೂರು ತಮ್ಮಣ್ಣ, ಕೊಡತಾಳ್ ರುದ್ರೇಶ್ ಮಾತನಾಡಿ, ತಾಲೂಕು ಕಚೇರಿ ಮುಂಭಾಗದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿದರು.

ಆದಿ ದ್ರಾವಿಡ ವಿದ್ಯಾಸಂಸ್ಥೆ ಕಾರ್ಯದರ್ಶಿ ಸಾಸ್ವೇಹಳ್ಳಿ ಎಸ್.ಎಚ್. ಕೃಷ್ಣಮೂರ್ತಿ, ಭೋವಿ ಸಮಾಜದ ಮಂಜು, ಲಿಂಗಾಯತ ಸಮಾಜದ ಮಧುಗೌಡ, ಬಿ.ಜಿ. ಶಿವಮೂರ್ತಿಗೌಡ, ನೊಳಂಬ ಸಮಾಜದ ಹಿರೇಗೋಣಿಗೆರೆ ಸೋಮಣ್ಣ, ಬಣಜಾರ್ ಸಮಾಜದ ಅಂಜುನಾಯ್ಕ, ನ್ಯಾಮತಿ ಘಟಕದ ಅಧ್ಯಕ್ಷ ಪ್ರಕಾಶ್‌ನಾಯ್ಕ, ಜಿ.ಪಂ. ಮಾಜಿ ಸದಸ್ಯ ಶಿವರಾಂ ನಾಯ್ಕ, ಕುರುಬ ಸಮಾಜದ ಅಧ್ಯಕ್ಷ ನಲೆಹೊನ್ನೆ ಮೋಹನ್, ಗೌ ಅಧ್ಯಕ್ಷ ಧರ್ಮಪ್ಪ ಸರ್ವಧರ್ಮ ಮಹಾಸಭಾ ತೀರ್ಮಾನಕ್ಕೆ ಬದ್ಧ ಎಂದು ತಿಳಿಸಿದರು.

ಸಭೆಯಲ್ಲಿ ಚೀಲೂರು ವಾಜೀದ್‌ ಸಾಬ್, ರಾಜೇಂದ್ರಕುಮಾರ್, ಪುರಸಭೆ ಮಾಜಿ ಅಧ್ಯಕ್ಷ ಮೈಲಪ್ಪ, ಯಂಕ್ಯಾ ನಾಯ್ಕ, ನೊಳಂಬ ಸಮಾಜದ ಚನ್ನವೀರಪ್ಪ ಗೌಡ, ಕುಂಬಳೂರು ವಾಗೀಶ್, ಆರುಂಡಿ ಪ್ರಕಾಶ್, ಎಚ್.ಡಿ. ವಿಜೇಂದ್ರಪ್ಪ, ಗ್ರಾಮಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದರು.

- - -

-7ಎಚ್.ಎಲ್.ಐ4.ಜೆಪಿಜಿ:

ಪೂರ್ವಭಾವಿ ಸಭೆಯಲ್ಲಿ ಎಚ್.ಬಿ.ಮಂಜಪ್ಪ ಮಾತನಾಡಿದರು.