ಬ್ರಾಹ್ಮಣ ಸಮಾಜದ ಅಭಿವೃದ್ಧಿಗೆ ನೆರವು: ಗುಂಡೂರಾವ್‌ ಭರವಸೆ

| Published : Dec 19 2023, 01:45 AM IST

ಸಾರಾಂಶ

ಕುಶಾಲನಗರದ ಬ್ರಾಹ್ಮಣ ಸಮಾಜ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸನ್ಮಾನ

ಕನ್ನಡಪ್ರಭ ವಾರ್ತೆ ಕುಶಾಲನಗರಕುಶಾಲನಗರ ಬ್ರಾಹ್ಮಣ ಸಮಾಜದ ಅಭಿವೃದ್ಧಿಗೆ ತಾನು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ ವ್ಯಕ್ತಪಡಿಸಿದ್ದಾರೆ.ಕುಶಾಲನಗರದ ಬ್ರಾಹ್ಮಣ ಸಮಾಜ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸೋಮವಾರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ತಂದೆಯ ಆಶೀರ್ವಾದದೊಂದಿಗೆ ತಾನು ಉನ್ನತ ಸ್ಥಾನ ಅಲಂಕರಿಸುವ ಮೂಲಕ ರಾಜ್ಯದ ಜನರ ಸೇವೆ ಸಲ್ಲಿಸುವ ಅವಕಾಶ ಪಡೆದಿದ್ದೇನೆ. ಚಿಕ್ಕ ವಯಸ್ಸಿನಲ್ಲಿ ಓಡಾಡಿದ ತನ್ನ ಮನೆಗೆ ಭೇಟಿ ನೀಡಿ ಭಾವನಾತ್ಮಕ ಸಂಬಂಧಗಳನ್ನು ನೆನಪಿಸಿ ಕೊಳ್ಳುವ ಅವಕಾಶ ಲಭಿಸಿದೆ ಎಂದರು.

ಊರಿನ ಆರೋಗ್ಯ ಕೇಂದ್ರದ ಮೇಲ್ದರ್ಜೆಗೆ ಎಲ್ಲ ರೀತಿಯ ಯೋಜನೆ ರೂಪಿಸಿ ಅನುಷ್ಠಾನ ಮಾಡಲಾಗುವುದು. ರಥ ಬೀದಿಯಲ್ಲಿರುವ ಬ್ರಾಹ್ಮಣ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಸಹಾಯ ಹಸ್ತ ಒದಗಿಸಲಾಗುವುದು ಎಂದರು. ಕುಶಾಲನಗರ ತಾಲೂಕು ಆಸ್ಪತ್ರೆಗೆ 100 ಬೆಡ್ ಕಲ್ಪಿಸಿ ಮೇಲ್ದರ್ಜೆಗೆ ಏರಿಸಲಾಗುವುದು ಜೊತೆಗೆ ಡಯಾಲಿಸಿಸ್ ಕೇಂದ್ರ ಮುಂದಿನ ತಿಂಗಳು ಸೇವೆಗೆ ಲಭ್ಯವಾಗಲಿದೆ ಎಂದರು.ನೂತನ ತಾಲೂಕಿನಲ್ಲಿ ನೆನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಶಾಸಕರ ಮೂಲಕ ಅನುಷ್ಠಾನ ಗೊಳಿಸುವುದಾಗಿ ಅವರು ತಿಳಿಸಿದರು.

ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಮಿನಿ ವಿಮಾನ ನಿಲ್ದಾಣ ರೈಲ್ವೆ ಯೋಜನೆಗಳ ಬಗ್ಗೆ ಸರ್ಕಾರದಲ್ಲಿ ಚರ್ಚಿಸಿ ಎಲ್ಲಾ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಮಡಿಕೇರಿ ಶಾಸಕ ಡಾ.ಮಂತರ್‌ ಗೌಡ ಮಾತನಾಡಿ, ಗುಂಡೂರಾಯರ ಹಳೆಯ ನಿವಾಸ ಪ್ರಸಕ್ತ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಕಚೇರಿಯಾಗಿದ್ದು ಭವ್ಯ ಭವನ ನಿರ್ಮಾಣಕ್ಕೆ ತನ್ನ ಪಾಲಿನ ಅನುದಾನ ನೀಡುವುದಾಗಿ ಭರವಸೆ ನೀಡಿದರು. ಪುರಸಭೆ ವಾಣಿಜ್ಯ ಕಟ್ಟಡ ವ್ಯಾಪ್ತಿಯಲ್ಲಿ ರಾಯರ ಪ್ರತಿಮೆ ನಿರ್ಮಾಣಕ್ಕೆ ಚಿಂತನೆ ಹರಿಸಲಾಗಿದೆ. ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲೂಕು ಆಸ್ಪತ್ರೆಯನ್ನಾಗಿ ಮೇಲದ ಏರಿಸಲು ಈಗಾಗಲೇ ಸಚಿವರ ಗಮನಕ್ಕೆ ತರಲಾಗಿದೆ ಎಂದರು.

ಕುಶಾಲನಗರ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಕೆ.ಎಸ್‌. ರಾಜಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಿರಿಯ ವಕೀಲ ಆರ್.ಕೆ. ನಾಗೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ ಕುಶಾಲನಗರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಕೂಡಿಗೆ ಭಾಗದಲ್ಲಿ ಕೃಷಿ ಕಾಲೇಜು ಸೇರಿದಂತೆ ಬ್ರಾಹ್ಮಣ ಸಮಾಜಕ್ಕೆ ಕುಶಾಲನಗರದಲ್ಲಿ ಸುಸಜ್ಜಿತ ಸಭಾಂಗಣ ನಿರ್ಮಿಸಲು ಸಹಕರಿಸುವಂತೆ ಸಚಿವರಿಗೆ ಮನವಿ ಮಾಡಿದರು.

ಬ್ರಾಹ್ಮಣ ಮುಖಂಡರಿಗೆ ಸರ್ಕಾರದ ಮಟ್ಟದಲ್ಲಿ ಉತ್ತಮ ಸ್ಥಾನಮಾನ ನೀಡುವಂತೆ ಗುಂಡರಾವ್ ಅವರ ಮೂಲಕ ಕೋರಿದರು. ಸಭೆಯಲ್ಲಿ ದಿನೇಶ್ ಗುಂಡರಾವ್ ಮತ್ತು ಕ್ಷೇತ್ರ ಶಾಸಕ ಮಂತರ್ ಗೌಡ ಅವರನ್ನು ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಸಚಿವರು ಮತ್ತು ಶಾಸಕರು ಕುಶಾಲನಗರ ರಥ ಬೀದಿಯ ಶ್ರೀ ಆಂಜನೇಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಪ್ರಮುಖರಾದ ಡಾ. ರಾಧಾಕೃಷ್ಣ, ಮಂಜುನಾಥ ಗುಂಡುರಾವ್, ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು, ಸದಸ್ಯರು ಇದ್ದರು.