ಕುಂದಾಪುರ: ರಾಷ್ಟ್ರೀಕೃತ ಬ್ಯಾಂಕ್‌ಗಳು ವಿಲೀನಗೊಳ್ಳುತ್ತಿದ್ದು, ಭಾಷೆ ಬಾರದವರನ್ನು, ಸಂಸ್ಕೃತಿ ತಿಳಿಯದವರನ್ನು ಬ್ಯಾಂಕ್ ಸಿಬ್ಬಂದಿಗಳಾಗಿ ನಿಯೋಜಿಸುತ್ತಿದ್ದಾರೆ. ಆದರೆ ನಮ್ಮ ಬ್ಯಾಂಕ್‌ಗಳಲ್ಲಿ ನಿಮ್ಮದೇ ಊರಿನವರನ್ನು ಸಿಬ್ಬಂದಿಗಳಾಗಿ ನಿಯೋಜಿಸಿದ್ದೇವೆ. ನಾವು ರೈತರಿಗೆ, ಬಡ ಮಹಿಳೆಯರಿಗೆ ಸಾಲ ನೀಡಿ ಅವರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡುತ್ತಿದೆ ಎಂದು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್ ರಾಜೇಂದ್ರ ಕುಮಾರ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಅಂಪಾರು ಸಹಕಾರಿ ವ್ಯವಸಾಯಿಕ ಸಂಘದ ನೂತನ ಸುಸಜ್ಜಿತ ಕಟ್ಟಡ ‘ರೈತ ಸೌಧ’ ವನ್ನು ಶನಿವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.ಸುಸಜ್ಜಿತವಾಗಿ ಭವಿಷ್ಯದ ದೃಷ್ಟಿ ಇಟ್ಟುಕೊಂಡು ಅಂಪಾರು ಸಹಕಾರಿ ವ್ಯವಸಾಯಿಕ ಸಂಘದ ನೂತನ ಕಟ್ಟಡ ರೈತ ಸೌಧ ನಿರ್ಮಿಸಲಾಗಿದೆ. ಯಾವುದೇ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿಲ್ಲದ ವ್ಯವಸ್ಥೆಯನ್ನು ಇಲ್ಲಿ ಅಳವಡಿಸಲಾಗಿದ್ದು, ಗ್ರಾಮೀಣ ಭಾಗದಲ್ಲಿ ಸಂಪೂರ್ಣ ಹವಾನಿಯಂತ್ರಿತ, ಲಿಫ್ಟ್ ಹಾಗೂ ಗಣಕೀಕೃತ ವ್ಯವಸ್ಥೆ ಅಳವಡಿಸಿರುವುದು ಖುಷಿ ಕೊಟ್ಟಿದೆ. ನೂತನ ಕಟ್ಟಡಕ್ಕೆ ಡಿಸಿಸಿ ಬ್ಯಾಂಕ್ ನಿಂದ 10 ಲಕ್ಷ ರು. ನೀಡುತ್ತೇನೆ ಎಂದು ಘೋಷಿಸಿದರು.
ಕೇವಲ ಒಂದೇ ಗ್ರಾಮಕ್ಕೆ ಸೀಮಿತವಾದ ಸಂಸ್ಥೆಯಾದರೂ ಕೂಡ ಇಂದು ಬಲಾಡ್ಯ ಸಂಸ್ಥೆಯಾಗಿ ಅಂಪಾರು ಸಹಕಾರಿ ವ್ಯವಸಾಯಿಕ ಸಂಘ ಬೆಳೆದು ನಿಂತಿರುವುದು ನಮ್ಮೆಲ್ಲರ ಹೆಮ್ಮೆ. ಇಂತಹ ಸಂಸ್ಥೆಗಳು ಇನ್ನೂ ಹೆಚ್ಚಿನ ಮಟ್ಟದಲ್ಲಿ ಬೆಳೆಯಬೇಕು. ರೈತರಿಗೆ ಸಾಲ ನೀಡಲು ಸಹಾಯ ಬೇಕಿದ್ದರೆ ಸಂಪೂರ್ಣ ಸಾಲದ ವ್ಯವಸ್ಥೆ ಮಾಡುತ್ತೇವೆ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಪಾರು ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಪ್ರದೀಪ್ ಶೆಟ್ಟಿ ಗುಡಿಬೆಟ್ಟು, ಅಂಪಾರು ಸಹಕಾರಿ ವ್ಯವಸಾಯಿಕ ಸಂಘವು ಹಿಂದೆ ನಷ್ಟ ಹೊಂದಿ ಶಂಕರನಾರಾಯಣ ಶಾಖೆಯೊಂದಿಗೆ ವಿಲೀನಗೊಂಡಿತ್ತು. ನಂತರ ಪ್ರತ್ಯೇಕ ಸಂಘವಾಗಿ ಅಂಪಾರಿನಲ್ಲಿ ಮರು ಸ್ಥಾಪನೆಗೊಂಡಿತು. ಅಂದಿನಿಂದ ಇಲ್ಲಿಯ ತನಕ ಅನೇಕ ಸಹಕಾರಿಗಳ ಅವಿರತ ಶ್ರಮದಿಂದಾಗಿ ಸಂಸ್ಥೆ ಬೆಳೆದಿದೆ ಎಂದು ವಿವರಿಸಿದರು.
ಸಂಸ್ಥೆಯು 55.87 ಕೋಟಿ ರು. ಠೇವಣಾತಿ ಹೊಂದಿದ್ದು, 55.78 ಕೋಟಿ ರು. ಸಾಲ ನೀಡಿದೆ. 12.51 ಕೋಟಿ ರು. ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ ನೀಡಿದೆ. 3608 ಎ ಶ್ರೇಣಿಯ ಸದಸ್ಯರಿದ್ದು, 2.10 ಕೋಟಿ ರು. ಪಾಲು ಬಂಡವಾಳವನ್ನು ಹೊಂದಿದ್ದೇವೆ ಎಂದರು.
113 ಡಿಸಿಸಿ ಬ್ಯಾಂಕ್ ಶಾಖೆ, 420 ಕ್ಕೂ ಅಧಿಕ ಕೃಷಿ ಪತ್ತಿನ ಸಹಕಾರಿ ಸಂಘಗಳನ್ನು ಮಾದರಿ ಸಂಸ್ಥೆಯಾಗಿ ಬೆಳೆಸುವಲ್ಲಿ ಡಾ. ಎಂ.ಎನ್ ರಾಜೇಂದ್ರ ಕುಮಾರ್ ಅವರ ಪಾತ್ರ ವಿಶೇಷವಾದುದು ಎಂದು ಶ್ಲಾಘಿಸಿದರು.ಡಾ. ಎಂ.ಎನ್ ರಾಜೇಂದ್ರ ಕುಮಾರ್ ಸಭಾಂಗಣ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಡಿಸಿಸಿ ಬ್ಯಾಂಕ್ ಇದ್ದರೂ ಅವಿಭಜಿತ ದ.ಕ ಜಿಲ್ಲೆಯ ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷರನ್ನು ಸರ್ಕಾರ ಗುರುತಿಸುತ್ತಿರುವುದು ನಮ್ಮ ಜಿಲ್ಲೆಗೆ ಹೆಮ್ಮೆ ಎಂದರು.
ಭದ್ರತಾ ಕೊಠಡಿ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಬಿಎಂ ಸುಕುಮಾರ್ ಶೆಟ್ಟಿ, ಅಂಪಾರು ವ್ಯವಸಾಯಿಕ ಸಹಕಾರಿ ಸಂಘ ಇಂದು ಈ ಮಟ್ಟಕ್ಕೆ ಬೆಳೆದು ನಿಲ್ಲಲು ಹಿಂದಿನ ಕಾರ್ಯನಿರ್ವಹಣಾಧಿಕಾರಿ ಜಗನ್ನಾಥ ಶೆಟ್ಟಿ ಅವರ ಕೊಡುಗೆ ಅಪಾರ ಎಂದರು.ಗೋದಾಮನ್ನು ದೇವಿಪ್ರಸಾದ್ ಶೆಟ್ಟಿ ಬೆಳಪು, ಮೊಳಹಳ್ಳಿ ಶಿವರಾವ್ ಸಭಾಂಗಣವನ್ನು ಮೊಳಹಳ್ಳಿ ಮಹೇಶ್ ಹೆಗ್ಡೆ, ಸಾಮಾನ್ಯ ಸೇವಾ ಕೇಂದ್ರವನ್ನು ಜಯಕರ ಶೆಟ್ಟಿ ಇಂದ್ರಾಳಿ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕಿ ಲಾವಣ್ಯ ಕೆ.ಆರ್, ನವೋದಯ ಸದಸ್ಯೆ ರೋಶನಿ ಶೆಟ್ಟಿ ಮಾತನಾಡಿದರು.ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್ ರಾಜೇಂದ್ರ ಕುಮಾರ್, ಕಟ್ಟಡ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಪುನೀತ್ ಕುಮಾರ್ ಶೆಟ್ಟಿ ಅವರ ಪರವಾಗಿ ಉಮೇಶ್ ಕೊಠಾರಿ, ಮರ ವಿನ್ಯಾಸಕಾರ ಸತೀಶ್ ನಾಯ್ಕ್ ಅವರನ್ನು ಸನ್ಮಾನಿಸಲಾಯಿತು.
ಕುಂದಾಪುರ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಸುಧೀರ್ ಕುಮಾರ್ ಜೆ. ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಮಲ್ಯಾಡಿ ಶಿವರಾಮ್ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಪ್ರವೀಣ ಕುಮಾರ್ ಶೆಟ್ಟಿ, ನಿರ್ದೇಶಕರುಗಳಾದ ಮೋಹನ್ ವೈದ್ಯ, ಕಿರಣ ಹೆಗ್ಡೆ ಅಂಪಾರು, ಅರುಣ ಕುಮಾರ್ ಶೆಟ್ಟಿ, ಮನೋಹರ ಶೆಟ್ಟಿ, ಜಯರಾಮ ಶೆಟ್ಟಿ, ಉಮೇಶ್ ಕೊಠಾರಿ, ಅಜಿತ್ ಕುಮಾರ್, ಜ್ಯೋತಿ ಉದಯ ಕುಮಾರ್ ಶೆಟ್ಟಿ, ಭಾರತಿ ಬಾಲಕೃಷ್ಣ ಶೇಟ್, ಮಂಜುನಾಥ್ ನಾಯ್ಕ್, ಸುನಿಲ್, ವಲಯ ಮೇಲ್ವಿಚಾರಕ ಚಂದ್ರಶೇಖರ ಶೆಟ್ಟಿ ಇದ್ದರು.ಉಪಾಧ್ಯಕ್ಷ ನವೀನ್ ಶೆಟ್ಟಿ ಶಾನ್ಕಟ್ಟು ಸ್ವಾಗತಿಸಿದರು. ಸಿಬ್ಬಂದಿ ರವಿಕಲಾ ಜೋಗಿ ಪ್ರಾರ್ಥಿಸಿದರು. ಉದಯ ಕುಮಾರ್ ಶೆಟ್ಟಿ ಸಂಗಡಿಗರು ರೈತ ಗೀತೆ ಹಾಡಿದರು. ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ನಿರೂಪಿಸಿದರು.
ಮಹಿಳೆಯರಿಗಾಗಿ ಡ್ರೆಸ್ಸಿಂಗ್ ರೂಂ ರಚಿಸಲು ಸಲಹೆ!: ಲಾಕರ್ ನಲ್ಲಿ ಚಿನ್ನಾಭರಣ ಇಡಲು ಬರುವ ಮಹಿಳೆಯರಿಗಾಗಿ ವಿಶೇಷವಾಗಿ ಡ್ರೆಸ್ಸಿಂಗ್ ರೂಮ್ ನಿರ್ಮಾಣ ಮಾಡುವಂತೆ ಸಲಹೆ ನೀಡಿದ ಡಾ. ಎಂ.ಎನ್ ಆರ್, ಸಭಾಂಗಣಕ್ಕೆ ಬೇಕಾದ ಪೀಠೋಪಕರಣ ವ್ಯವಸ್ಥೆಗೆ ಸಹಾಯ ನೀಡುವುದಾಗಿ ಭರವಸೆ ನೀಡಿದರು.