ಶಾಲೆಯಿಂದ ಮನೆಗೆ ಹೋದ ಮಕ್ಕಳು ಮನೆಯಲ್ಲಿ ಓದುತ್ತಿದ್ದಾರೆಯೇ ಎಂಬುದನ್ನು ಶಿಕ್ಷಕರು ಪರಿಶೀಲಿಸಲು ಮನೆ ಭೇಟಿ ಕಾರ್ಯಕ್ರಮ ಹೆಚ್ಚು ಪರಿಣಾಮಕಾರಿ ಎಂದರು.
ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮ ಪಡಿಸುವುದನ್ನು ಸವಾಲಾಗಿ ಸ್ವೀಕರಿಸಿರುವ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಅಲ್ಮಾಸ್ ಫರ್ವೀನ್ ತಾಜ್, ಕಳೆದ ರಾತ್ರಿ ಶಾಲೆಗೆ ಗೈರಾಗುವ ಮಕ್ಕಳ ಮನೆಗಳಿಗೆ ಇತರೆ ಅಧಿಕಾರಿಗಳೊಂದಿಗೆ ದಿಢೀರ್ ಭೇಟಿ ನೀಡಿ, ಕಲಿಕೆಗೆ ಪ್ರೋತ್ಸಾಹ ನೀಡುವಂತೆ ಪೋಷಕರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದರು.ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿಗೆ ದಾಖಲಾಗಿದ್ದು, ಶಾಲೆಗೆ ಗೈರಾಗುವ, ನಿಧಾನ ಕಲಿಕೆ, ಕಲಿಕೆಯಲ್ಲಿ ಹಿಂದುಳಿದಿರುವಿಕೆಯ ಇಲ್ಲಿನ ರಹಮತ್ ನಗರ ವ್ಯಾಪ್ತಿಯ ಹಲವು ಮಕ್ಕಳ ಮನೆಗಳಿಗೆ ಭೇಟಿ ನೀಡಿದ ಅವರು, ಮಕ್ಕಳೊಂದಿಗೆ ಕುಳಿತು ಅವರ ಕಲಿಕೆ ಮಟ್ಟ ಪರಿಶೀಲನೆ ನಡೆಸಿದರು.ಶಾಲೆಯಿಂದ ಮನೆಗೆ ಹೋದ ಮಕ್ಕಳು ಮನೆಯಲ್ಲಿ ಓದುತ್ತಿದ್ದಾರೆಯೇ ಎಂಬುದನ್ನು ಶಿಕ್ಷಕರು ಪರಿಶೀಲಿಸಲು ಮನೆ ಭೇಟಿ ಕಾರ್ಯಕ್ರಮ ಹೆಚ್ಚು ಪರಿಣಾಮಕಾರಿ ಎಂದ ಅವರು, ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸುವ ನಿಟ್ಟಿನಲ್ಲಿ ಮತ್ತಷ್ಟು ಪ್ರಯತ್ನಗಳನ್ನು ಇಲಾಖೆ ನಡೆಸಲಿದೆ ಎಂದರು.ಡಿಡಿಪಿಐ ಅವರು ಪ್ರತಿ ಮನೆಯಲ್ಲೂ ಮಕ್ಕಳೊಂದಿಗೆ ನೆಲದಲ್ಲೇ ಕುಳಿತು ಅವರೊಂದಿಗೆ ಮಾತನಾಡಿ, ನೀವು ಕಲಿಕೆಯಿಂದ ದೂರವಾಗಿ ನಿಮ್ಮ ಜೀವನ ಹಾಳು ಮಾಡಿಕೊಳ್ಳದಿರಿ, ಶಾಲೆಯಲ್ಲಿ ಬಿಸಿಯೂಟ, ಮೊಟ್ಟೆ, ಹಾಲು, ಉಚಿತ ಪುಸ್ತಕ ಎಲ್ಲಾ ಸೌಲಭ್ಯಗಳು ಇವೆ ಅವುಗಳ ಸದುಪಯೋಗ ಪಡೆಯಿರಿ ಎಂದರು.
ಯಾವುದೇ ಮಗು ಶಾಲೆಗೆ ಗೈರಾದರೆ ಶಾಲೆಯ ಮೊದಲ ಅವಧಿ ಮುಗಿಯುತ್ತಿದ್ದಂತೆ ಅವರ ಪೋಷಕರಿಗೆ ತರಗತಿ ಶಿಕ್ಷಕರು ದೂರವಾಣಿ ಕರೆ ಮಾಡಿ ಕಾರಣ ತಿಳಿದುಕೊಳ್ಳಬೇಕು, ಮಗುವನ್ನು ಶಾಲೆಗೆ ಕಳುಹಿಸಲು ಒತ್ತಡ ಹಾಕಬೇಕು ಎಂದು ಕಿವಿಮಾತು ಹೇಳಿದರು.ಮಕ್ಕಳ ಮನೆಭೇಟಿ ಜಿಲ್ಲಾದ್ಯಂತ ವಿಸ್ತರಣೆ:
ಶಾಲೆಗೆ ಗೈರಾಗುವ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಮನೆಗಳಿಗೆ ಶಿಕ್ಷಕರು ಭೇಟಿ ನೀಡಿ ಪೋಷಕರಿಗೆ ಮಾರ್ಗದರ್ಶನ ನೀಡುವ ಕಾರ್ಯಕ್ಕೆ ಚಾಲನೆ ನೀಡುತ್ತಿದ್ದು, ಈ ಕಾರ್ಯ ಇಡೀ ಜಿಲ್ಲಾದ್ಯಂತ ವಿಸ್ತರಣೆಯಾಗಲಿದೆ ಎಂದ ಅವರು, ಇದು ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸುವ ಪ್ರಯತ್ನ ಮಾತ್ರವಲ್ಲ, ಶಾಲೆಯಿಂದ ದೂರವುಳಿಯುವುದನ್ನು ತಪ್ಪಿಸುವ ಸದುದ್ದೇಶವೂ ಆಗಿದೆ ಎಂದರು.ಮನೆ ಭೇಟಿ ಸಂದರ್ಭದಲ್ಲಿ ಡಿಡಿಪಿಐ ಅವರೊಂದಿಗೆ ಶಿಕ್ಷಣಾಧಿಕಾರಿ ವೀಣಾ, ಡಿವೈಪಿಸಿ ರಾಜೇಶ್ವರಿ, ಪ್ರಭಾರ ಕ್ಷೇತ್ರ ಸಮನ್ವಯಾಧಿಕಾರಿ ಹಾಗೂ ಉಪಪ್ರಾಂಶುಪಾಲೆ ರಾಧಮ್ಮ, ವಿಷಯ ಪರಿವೀಕ್ಷಕರಾದ ಶಂಕರೇಗೌಡ, ಸಮೀವುಲ್ಲಾ, ಕಚೇರಿಯ ತಾಂತ್ರಜ್ಞ ಶರಣಪ್ಪಜಮಾದಾರ್, ಸಿಆರ್‌ಪಿ ಮುಜಾಹಿದ್ ಪಾಷಾ ಹಾಜರಿದ್ದರು.