ನಗರದ ಸ್ವಚ್ಛತೆ ಕಾಪಾಡಲು ಸಹಕರಿಸಿ

| Published : Jul 18 2024, 01:30 AM IST

ಸಾರಾಂಶ

ಕೋಲಾರ ಜಿಲ್ಲೆಯಲ್ಲೇ ಬಂಗಾರಪೇಟೆ ಸ್ವಚ್ಛ ನಗರ ಹಾಗೂ ಅಭಿವೃದ್ಧಿ ನಗರ ಎಂದು ಹೆಸರು ಪಡೆದುಕೊಂಡಿದೆ. ಕಸ ಸಂಗ್ರಹ ಮಾಡುವ ಒಂದು ಯೂನಿಟ್ ಅನ್ನು ಜಿಲ್ಲೆಯಲ್ಲಿ ಮೊದಲ ಬಾರಿಗೆ ಬಂಗಾರಪೇಟೆ ಪುರಸಭೆ ಪಡೆದಿದೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಕೋಲಾರ ಜಿಲ್ಲೆಯಲ್ಲಿಯೇ ಮೊದಲನೇ ಬಾರಿಗೆ ಸ್ವಯಂ ಚಾಲಿತ ಕಸ ತುಂಬಿಸಿಕೊಳ್ಳುವ ವಾಹನವನ್ನು ಹಾಗೂ ಜೆಸಿಬಿ,ಕಸ ಸಂಗ್ರಹ ಮಾಡುವ ಟಿಪ್ಪರ್ ಗಳನ್ನು ಖರೀದಿ ಮಾಡಲಾಗಿದೆ ಇದರಿಂದ ಇನ್ನು ಮುಂದೆ ಕಸ ಸಂಗ್ರಹಣೆಗೆ ಸಮಸ್ಯೆಯಾಗುವುದಿಲ್ಲ ಎಂದು ಶಾಸಕ ಎಸ್ಎನ್ ನಾರಾಯಣಸ್ವಾಮಿ ಹೇಳಿದರು.ಪಟ್ಟಣದ ಪುರಸಭೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿವಿಧ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದ ಅ‍ವರು, ಪುರಸಭೆ ಇತಿಹಾಸದಲ್ಲಿ ಇದೊಂದು ಹೊಸ ಮೈಲುಗಲ್ಲು. ಕೋಲಾರ ಜಿಲ್ಲೆಯಲ್ಲೇ ಬಂಗಾರಪೇಟೆ ಸ್ವಚ್ಛ ನಗರ ಹಾಗೂ ಅಭಿವೃದ್ಧಿ ನಗರ ಎಂದು ಹೆಸರು ಪಡೆದುಕೊಂಡಿದೆ. ಕಸ ಸಂಗ್ರಹ ಮಾಡುವ ಒಂದು ಯೂನಿಟ್ ಅನ್ನ ಜಿಲ್ಲೆಯಲ್ಲಿ ಮೊದಲ ಬಾರಿಗೆ ಮಾಡಿದವರು ನಾವು ಎಂದು ಹೇಳಿದರು.

₹2 ಕೋಟಿ ವೆಚ್ಚದಲ್ಲಿ ಖರೀದಿ

ಜೆಸಿಬಿ, ಕಸ ತುಂಬಿಸಿಕೊಳ್ಳುವ ವಾಹನ, 6 ಟಿಪ್ಪರ್‌ಗಳು, ಟ್ರ್ಯಾಕ್ಟರ್ ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ಖರೀದಿ ಮಾಡಲಾಗಿದೆ. ನಗರವನ್ನು ಸ್ವಚ್ಛವಾಗಿಡಲು ಹಾಗೂ ನಗರವನ್ನು ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡಲು ಈ ಎಲ್ಲಾ ವಾಹನಗಳನ್ನು ಖರೀದಿ ಮಾಡಿ ಜನರ ಉಪಯೋಗಕ್ಕಾಗಿ ಬಳಕೆ ಮಾಡಲಾಗುವುದು. ಈಗಾಗಲೇ ಕೆಯುಡಿಎಫ್‌ಸಿಯಿಂದ ನಗರವನ್ನು ಅಭಿವೃದ್ಧಿ ಮಾಡಲು ಕ್ರಿಯಾ ಯೋಜನೆ ಮಾಡಲಾಗಿದೆ ಎಂದು ಹೇಳಿದರು. ಮಂಗಳವಾರ ನಡೆದ ಸಂಸದರ ಅಭಿನಂದನಾ ಸಭೆಯಲ್ಲಿ ಮಾಜಿ ಶಾಸಕರಾದ ಎಂ. ನಾರಾಯಣಸ್ವಾಮಿ ನನ್ನ ಬಗ್ಗೆ ಹಗುರವಾಗಿ ಮಾತನಾಡಿರುವುದು ಅವರ ಘನತೆಗೆ ಗೌರವ ತರುವುದಲ್ಲ, ಸಂಪಾದನೆ ಮಾಡಿರುವಂತಹ ಸ್ವಂತ ಆಸ್ತಿ ಮಾರಿ ಸಮಾಜ ಸೇವೆ ಮಾಡಿ ಮೊದಲನೇ ಬಾರಿಗೆ ಎಂಎಲ್ಎ ಆದೆ. ತದನಂತರ ಎರಡು ಚುನಾವಣೆಗಳಲ್ಲಿ ನನ್ನ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ನೋಡಿ ಜನ ಮತ ಹಾಕಿದ್ದಾರೆ. ಎಂದರು.

ಮಾಜಿ ಶಾಸಕರ ಆಸ್ತಿ

ತಾವು ಯಾವುದೇ ಜನರ ಹಣದಲ್ಲಿ ಹಬ್ಬ ಮಾಡಿಕೊಂಡಿಲ್ಲ ಬದಲಾಗಿ ಅವರೇ 2008ರಲ್ಲಿ ಕಾಂಗ್ರೆಸ್‌ನಿಂದ ಶಾಸಕನಾಗಿ ಗೆದ್ದು ನಂತರ ಬಿಜೆಪಿಗೆ ಹೋದರು. ನಂತರ ಬೆಂಗಳೂರಿನಲ್ಲಿ ಕೋಟ್ಯತರ ಮೌಲ್ಯದ ಕಾಂಪ್ಲೆಕ್ಸ್, ಯಲಂಕದಲ್ಲಿ ಆಸ್ತಿ, ಹೆಬ್ಬಾಳದಲ್ಲಿ ಆಸ್ತಿ, ಬಿಡಿಎ ಸೈಟ್‌ ಇವೆಲ್ಲವೂ ಯಾವ ಹಣದಿಂದ ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯ ಅಧಿಕಾರಿ ಸತ್ಯನಾರಾಯಣ, ಪುರಸಭೆ ಸದಸ್ಯರಾದ ಷಂಶುಧೀನ್ ಬಾಬು, ಫರ್ಜಾನ ಸುಹೇಲ್,ಗಂಗಮ್ಮ ರಂಗರಾಮಯ್ಯ,ಅರುಣಾಚಲಂ ಮಣಿ, ಪ್ರಭಾಕರ್, ಶಫಿ, ಪೊನ್ನಿ ರಮೇಶ್ ,ರತ್ನಮ್ಮ,ವಿಜಯಲಕ್ಷ್ಮಿ,ಶಾರದಾ ವಿವೇಕಾನಂದ, ಆಜಾಮ್, ಬಾಬುಲಾಲ್, ಆರೋಕ್ಯ ರಾಜನ್, ರಾಕೇಶ್ ಗೌಡ,ಇತರರು ಇದ್ದರು.