ಸಾರಾಂಶ
ನಗರದ ಪ್ರತಿಯೊಂದು ವಾರ್ಡ್ ನಲ್ಲಿ ಪ್ರಾಣಿ ಮತ್ತು ಪಕ್ಷಿಗಳಿಗೆ ನೀರಿನ ತೊಟ್ಟಿ ಹಾಗೂ ಮರಗಳಿಗೆ ನೀರಿನ ತಟ್ಟೆ ಹಾಗೂ ಆಹಾರದ ತಟ್ಟೆ ಇರಿಸಲಾಗುವುದು. ಹಾಗೆಯೇ ಸುತ್ತಮುತ್ತ ಇರುವವರಿಗೆ ಪ್ರತಿನಿತ್ಯ ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡುವಂತೆ ಜಾಗೃತಿ ಮೂಡಿಸಲಾಗುವುದು.
ಕನ್ನಡಪ್ರಭ ವಾರ್ತೆ ಮೈಸೂರು
ಮನುಷ್ಯನ ಒಡನಾಡಿಯಾಗಿರುವ ಪ್ರಾಣಿ ಪಕ್ಷಿಗಳ ಜೀವ ಸಂಕುಲವನ್ನು ಉಳಿಸಲು ಸಮಾಜದಲ್ಲಿರುವ ಸಹೃದಯಿ ನಾಗರಿಕರು ಮುಂದಾಗಬೇಕು ಎಂದಮು ಚಲನಚಿತ್ರ ನಟ ಪ್ರಜ್ವಲ್ ದೇವರಾಜ್ ಕರೆ ನೀಡಿದರು. ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಕಚೇರಿಯಲ್ಲಿ ಮೂಕ ಸ್ಪಂದನ ಅಭಿಯಾನದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಬೇಸಿಗೆಯ ರಣಬಿಸಿಲಿನ ತಾಪಮಾನದ ತೀವ್ರತೆಯಿಂದಾಗಿ ಪ್ರಾಣಿ ಪಕ್ಷಿಸಂಕುಲ ಬಳಲುತ್ತವೆ. ಕುಡಿಯುವ ನೀರು ಆಹಾರಕ್ಕಾಗಿ ಪರಿತಪಿಸುತ್ತವೆ. ಹೀಗಾಗಿ, ಪರಿಸರ ರಕ್ಷತಿ ರಕ್ಷಿತಃ ಪರಿಸರ ಸ್ನೇಹಿ ತಂಡ ಹಾಗೂ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ 2 ತಿಂಗಳ ಕಾಲ ಮೂಕ ಸ್ಪಂದನೆ ಎಂಬ ನೀರುಣಿಸಿ- ಜೀವವನ್ನುಳಿಸಿ ಅಭಿಯೋಜನೆಯನ್ನು ನಗರದ ಸುತ್ತಮುತ್ತ ಪ್ರದೇಶಗಳಲ್ಲಿ ರೂಪಿಸುತ್ತಿರುವುದು ಅತ್ಯುತ್ತಮವಾದ ಕೆಲಸ ಎಂದು ಶ್ಲಾಘಿಸಿದರು.ಬೇಸಿಗೆಯ ದಿನ ಇನ್ನೇನು ಆರಂಭಗೊಂಡಿದ್ದು, ಪ್ರಾಣಿ ಪಕ್ಷಿಗಳು ತಮ್ಮ ಅಸ್ಥಿತ್ವಕ್ಕಾಗಿ ಹೋರಾಟ ನಡೆಸುವ ಹಾದಿಯಲ್ಲಿರುತ್ತವೆ. ಪ್ರಾಣಿಪಕ್ಷಿ ಸಂಕುಲಕ್ಕಿಂದು ತಿನ್ನಲು ಆಹಾರ ಮತ್ತು ಕುಡಿಯಲು ನೀರಿಗಾಗಿ ಪರಿತಪಿಸುವ ಕಾಲ ಇದಾಗಿದ್ದು, ಮಾನವೀಯ ದೃಷ್ಟಿಯಿಂದ ಅವುಗಳ ಬಗ್ಗೆ ಕಾಳಜಿವಹಿಸಬೇಕು ಎಂದು ಅವರು ತಿಳಿಸಿದರು.ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ್ ಅಯ್ಯಂಗಾರ್ ಮಾತನಾಡಿ, ನಗರದ ಪ್ರತಿಯೊಂದು ವಾರ್ಡ್ ನಲ್ಲಿ ಪ್ರಾಣಿ ಮತ್ತು ಪಕ್ಷಿಗಳಿಗೆ ನೀರಿನ ತೊಟ್ಟಿ ಹಾಗೂ ಮರಗಳಿಗೆ ನೀರಿನ ತಟ್ಟೆ ಹಾಗೂ ಆಹಾರದ ತಟ್ಟೆ ಇರಿಸಲಾಗುವುದು. ಹಾಗೆಯೇ ಸುತ್ತಮುತ್ತ ಇರುವವರಿಗೆ ಪ್ರತಿನಿತ್ಯ ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡುವಂತೆ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.ಎಲ್ಲರೂ ಅವರವರ ಮನೆಗಳ ಮೇಲಿನ ತಾರಸಿಯ ಮೇಲೆ, ಮರಗಳ ಕೆಳಗೆ, ಮನೆಯ ಮುಂದಿನ ರಸ್ತೆಯ ಇಕೆಲಗಳಲ್ಲಿ ಪ್ರಾಣಿ ಪಕ್ಷಿಗಳ ಬಾಯಿಗೆ ಎಟುಕುವಂತೆ ಮಣ್ಣಿನ ಬಟ್ಟಲು ಅಥವಾ ಸಣ್ಣ ಸಿಮೆಂಟ್ ತೊಟ್ಟಿಗಳನ್ನಿಟ್ಟು, ಅದರಲ್ಲಿ ಶುದ್ಧ ನೀರನ್ನು ತುಂಬಿಡಬೇಕು. ಆಹಾರ ಧಾನ್ಯ ಮಿತವಾಗಿಟ್ಟು ಅವುಗಳನ್ನು ಸಲುಹಬೇಕು ಎಂದು ಮನವಿ ಮಾಡಿದರು. ಮುಖಂಡರಾದ ಪ್ರದೀಪ್ ಗೌಡ, ಅಮಿತ್ ಕುಮಾರ್, ಮಹಾನ್ ಶ್ರೇಯಸ್, ಸಚಿನ್ ನಾಯಕ್ ಮೊದಲಾದವರು ಇದ್ದರು.