ಬಡವರಿಗೆ ಆಸರೆಯಾಗೋ ಅಭಿಯಾನ ಯಶಸ್ವಿಗೊಳಿಸಿ

| Published : Feb 20 2025, 12:45 AM IST

ಸಾರಾಂಶ

ಅನಧಿಕೃತ, ರೆವಿನ್ಯೂ ಬಡಾವಣೆ. ಗ್ರಾಮ ಠಾಣಾ ವಸತಿ ಪ್ರದೇಶಗಳಿಗೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಬಿ- ಖಾತಾ ಅಭಿಯಾನ ಯಶಸ್ವಿಯಾಗುವಲ್ಲಿ ನಗರಸಭೆ ಸದಸ್ಯರು, ಆಯುಕ್ತರು ಮತ್ತು ಸಿಬ್ಬಂದಿಯ ಪಾತ್ರ ಪ್ರಮುಖವಾಗಿದೆ. ಬಡವರ ಬದುಕಿಗೆ ಆಸರೆಯಾಗುವ ಈ ಅಭಿಯಾನವನ್ನು ಯಜ್ಞದ ರೀತಿ ಭಾವಿಸಿ ಪಕ್ಷಾತೀತವಾಗಿ, ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಮಾಡಬೇಕಿದೆ ಎಂದು ನಗರಸಭೆ ಅಧ್ಯಕ್ಷ ಎ.ಗಜೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಅನಧಿಕೃತ, ರೆವಿನ್ಯೂ ಬಡಾವಣೆ. ಗ್ರಾಮ ಠಾಣಾ ವಸತಿ ಪ್ರದೇಶಗಳಿಗೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಬಿ- ಖಾತಾ ಅಭಿಯಾನ ಯಶಸ್ವಿಯಾಗುವಲ್ಲಿ ನಗರಸಭೆ ಸದಸ್ಯರು, ಆಯುಕ್ತರು ಮತ್ತು ಸಿಬ್ಬಂದಿಯ ಪಾತ್ರ ಪ್ರಮುಖವಾಗಿದೆ. ಬಡವರ ಬದುಕಿಗೆ ಆಸರೆಯಾಗುವ ಈ ಅಭಿಯಾನವನ್ನು ಯಜ್ಞದ ರೀತಿ ಭಾವಿಸಿ ಪಕ್ಷಾತೀತವಾಗಿ, ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಮಾಡಬೇಕಿದೆ ಎಂದು ನಗರಸಭೆ ಅಧ್ಯಕ್ಷ ಎ.ಗಜೇಂದ್ರ ಹೇಳಿದರು.

ನಗರಸಭೆಯ ಸರ್.ಎಂ.ವಿ. ಸಭಾಂಗಣದಲ್ಲಿ ಬುಧವಾರ ಇ-ಖಾತಾ ನೀಡುವ ಕಾರ್ಯವಿಧಾನ ಕುರಿತು ನಡೆದ ಸಭೆಯಲ್ಲಿ ಮಾತನಾಡಿದರು.90 ದಿನಗಳ ಕಾಲ ನಡೆಯುವ ಬಿ-ಖಾತಾ ಅಭಿಯಾನವನ್ನು ಬಹಳ ಯಶಸ್ವಿಯಾಗಿ ಮುಗಿಸುವ ಗುರುತರ ಜವಾಬ್ದಾರಿ ನಗರಸಭೆ ಅಧ್ಯಕ್ಷನಾಗಿ ನನ್ನನ್ನೂ ಸೇರಿದಂತೆ ನಗರಸಭೆಯ ಎಲ್ಲಾ 31 ವಾರ್ಡ್ ಸದಸ್ಯ, ನಗರಾಡಳಿತ, ಪೌರಾಯುಕ್ತರು, ಈ ಕಾರ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿ ಮೇಲಿದೆ. ನಾವೆಲ್ಲಾ ನಮ್ಮ ಕೆಲಸವನ್ನು ಬದ್ಧತೆಯಿಂದ ಮಾಡಿದಲ್ಲಿ ಬಡವರ ಮನೆಯಲ್ಲಿ ನಂದಾದೀಪ ಬೆಳಗಲಿದೆ. ಅದರ ಶ್ರೇಯಸ್ಸು ನಮಗೂ ಸಿಗಲಿದೆ. ಫೆ. 21, 22, 23 ರಂದು ನಗರದ ಎಲ್ಲಾ 31 ವಾರ್ಡ್‌ಗಳಲ್ಲಿ ಬೆಳಗ್ಗೆ 8ರಿಂದ ಸಂಜೆ 4.30ರವರೆಗೆ ಏಕಕಾಲಕ್ಕೆ ನಡೆಯುವ ಬಿ-ಖಾತಾ ಅಭಿಯಾನದಲ್ಲಿ ನಗರ ಸಭೆಯ ಸಿಬ್ಬಂದಿ ಮತ್ತು ಆಯಾ ವಾರ್ಡ್ ಸದಸ್ಯರು ನಿಗಧಿಪಡಿಸಿದ ಸ್ಥಳದಲ್ಲಿಯೇ ಇದ್ದು, ಅಲ್ಲಿಗೆ ಬರುವ ನಿವಾಸಿಗಳಿಂದ ಸರ್ಕಾರ ಮತ್ತು ಪೌರಾಡಳಿತ ನಿರ್ದೇಶನಾಲಯ ನಿಗದಿಪಡಿಸಿರುವ ಸೀಮಿತ ದಾಖಲಾತಿ ಪಡೆದು ಕೆಲಸ ಮಾಡಬೇಕು.

ಅವರಿಂದ ಸರ್ಕಾರಿ ತೆರಿಗೆ ಬಿಟ್ಟು ಬೇರೇನೂ ಪಡೆಯುವಂತಿಲ್ಲ. ಖಾತೆ ಬಯಸಿ ಬರುವ ನಿವಾಸಿಗಳಿಗೆ ಅನಗತ್ಯ ಕಿರುಕುಳ, ದಲ್ಲಾಳಿಗಳ, ಮದ್ಯವರ್ತಿಗಳ ಕಾಟ ಇರುವುದಿಲ್ಲ. ನಗರ ನಿವಾಸಿಗಳು ಈ ಸದಾವಕಾಶವನ್ನು ಬಳಸಿಕೊಂಡು ಆಸ್ತಿಗಳಿಗೆ ಖಾತಾ ಪಡಯಬೇಕು ಎಂದು ಮನವಿ ಮಾಡಿದರು.

ಬಿ-ಖಾತಾ ಅಭಿಯಾನದಲ್ಲಿ ಭಾಗಿಯಾಗಿರುವ ಸಿಬ್ಬಂದಿ ಯಾವುದೇ ದೂರುಗಳಿಗೆ ಆಸ್ಪದ ನೀಡದೆ ದಕ್ಷತೆ ಕಾಪಾಡಿಕೊಳ್ಳುವುದು ಮುಖ್ಯವಾಗುತ್ತದೆ. ಮೂರು ದಿನಗಳ ಅವಧಿಯಲಿ ಹೆಚ್ಚಿನ ಪ್ರಮಾಣದಲ್ಲಿ ಖಾತೆ ಮಾಡಿಕೊಡಲು ನೆರವಾದ ಸಿಬ್ಬಂದಿಗೆ ಶಾಸಕರು ಸನ್ಮಾನ ಮಾಡಿ ಪ್ರಶಂಸಾ ಪತ್ರ ನೀಡಲಾಗುವುದು. ನಗರಸಭೆ ಸಿಬ್ಬಂದಿ ಮೇಲೆ ಅಪಾರವಾದ ನಂಬಿಕೆಯಿದೆ. ನಿಮ್ಮ ಬಳಿ ಬರುವ ನಾಗರಿಕರ ಬಳಿ ನಯವಾಗಿ ಮಾತನಾಡಿ ಖಾತೆದಾರರಲ್ಲದ ಮೂರನೇ ವ್ಯಕ್ತಿ ತರುವ ಅರ್ಜಿ ಸ್ವೀಕರಿಸಬೇಡಿ. ಖುದ್ಧಾಗಿ ಬರುವವರ ಕೆಲಸ ವಿಳಂಭವಿಲ್ಲದೆ ಮಾಡಿಕೊಡಿ ಎಂದರು.

ಉಪಾಧ್ಯಕ್ಷ ಎ.ನಾಗರಾಜ್ ಮಾತನಾಡಿ, ಖಾತೆ ವಿಚಾರದಲ್ಲಿ ದಲ್ಲಾಳಿಗಳ ಹಾವಳಿ, ಭ್ರಷ್ಟಾಚಾರ ಇರಬಾರದು, ಪಾರದರ್ಶಕವಾಗಿ ಇರಬೇಕು ಎಂಬುದೇ ಎಲ್ಲರ ಅಭಿಲಾಷೆಯಾಗಿದೆ. ಒಂದು ಬಾರಿ ಪರಿಹಾರ ಅಡಿಯಲ್ಲಿ 90 ದಿನಗಳ ಒಳಗೆ ಬಿ- ಖಾತಾ ಮಾಡಿಕೊಳ್ಳಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ.

ಈ ಅವಧಿ ಹೊರತುಪಡಿಸಿದರೆ ಮತ್ತೆ ಎಂದೂ ಕೂಡ ಅನಧಿಕೃತ, ರೆವಿನ್ಯೂ ಬಡಾವಣೆ. ಗ್ರಾಮ ಠಾಣಾ ವಸತಿ ಪ್ರದೇಶಗಳಿಗೆ ಖಾತೆ ಮಾಡಿಕೊಳ್ಳಲು ಅನುಮತಿ ನೀಡುವುದಿಲ್ಲ. ಹೀಗಾಗಿಯೇ ಈ ಸುವರ್ಣಾವಕಾಶವನ್ನು ತಪ್ಪಿಸಿಕೊಳ್ಳದಂತೆ ಮನೆ ಮನೆಗೆ ಬಿ- ಖಾತಾ ಅಂದೋಲನದ ಕರಪತ್ರಗಳನ್ನು ನಗರದ ಪ್ರತಿಯೊಂದು ಮನೆಗೂ ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಇರುವ ಸಮಯದಲ್ಲಿಯೇ ಎಲ್ಲ ಖಾತೆ ಮಾಡಬೇಕು ಅಂತ ನಗರಸಭೆ ಆಡಳಿತ ಮಂಡಳಿ ಶ್ರಮಿಸುತ್ತಿದೆ. ಸ್ವತ್ತಿನ ಮಾಲೀಕರೇ ಸ್ಥಳಕ್ಕೆ ಬಂದು ಅರ್ಜಿ ಸಲ್ಲಿಸಬೇಕು ಅಂತ ಸರ್ಕಾರದ ಆದೇಶದಲ್ಲಿ ಇಲ್ಲ, ಅವರು ಬರಲು ಸಾಧ್ಯವಾಗದಿದ್ದರೆ ಸಂಬಂಧಿಕರು ಬಂದು ಅರ್ಜಿ ಸಲ್ಲಿಸಲು ಅವಕಾಶವಿದೆ. ಪ್ರತಿ ವಾರ್ಡಿನ ನಿಗಧಿತ ಸ್ಥಳದಲ್ಲಿ ನಾಳೆಯಿಂದ ಅರ್ಜಿ ಸ್ವೀಕರಿಸಲಾಗುವುದು ಎಂದರು.

ಪೌರಾಯುಕ್ತ ಮನ್ಸೂರ್ ಅಲಿ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ 22771 ಒಟ್ಟು ಖಾತೆಗಳಿದ್ದು ,ಅದರಲ್ಲಿ 22937 ಡಿಜಿಟಲ್‌ಗೆ ಬಂದಿವೆ. 8062ಕ್ಕೆ ಇ ಖಾತೆಗಳಾಗಿವೆ. ಇದೂವರೆಗೆ 81 ಪ್ರಗತಿಯಲಿವೆ. ಬಾಕಿಯಿರುವ ಖಾತೆಗಳು 14648 ಇವೆ. 19 ವರ್ಷದಿಂದ ತೆರಿಗೆ ಪಾವತಿ ಮಾಡದಿದ್ದರೂ ಪರವಾಗಿಲ್ಲ, ಈ ವರ್ಷದ ತೆರಿಗೆಯ ಡಬಲ್ ಪಾವತಿ ಮಾಡಿದರೆ ಸಾಕು ಅವರಿಗೆ ಬಿ-ಖಾತೆ ಕೊಡುತ್ತೇವೆ ಎಂದರು.

ನಗರಸಭಾ ಸದಸ್ಯರಾದ ಆನಂದಬಾಬು(ರೆಡ್ಡಿ), ಕಣಿತಹಳ್ಳಿ ವೆಂಕಟೇಶ್, ಸುಭ್ರಮಣ್ಯಾಚಾರಿ, ಎಸ್.ಎಂ.ರಫೀಕ್, ಯತೀಶ್, ನರಸಿಂಹಮೂರ್ತಿ, ಭಾರತಿದೇವಿ ಇದ್ದರು. ಇ- ಖಾತಾ ಪಡೆಯಲು ಯಾವ್ಯಾವ ದಾಖಲೆ ಬೇಕು: ಆಸ್ತಿಗೆ ಸಂಬಂಧಿಸಿದ ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ ದಾಖಲಾತಿ, ನೋಂದಾಯಿತವಾದ ದಾನ ಪತ್ರ, ಮಾರಾಟ ಪತ್ರ, ವಿಭಾಗ ಪತ್ರ, ಹಕ್ಕು ಖುಲಾಸೆ ಪತ್ರಗಳು, ಪ್ರಸಕ್ತ ಸಾಲಿನ ಋಣಭಾರ ಪತ್ರ, ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಸೀತಿ, ಮಾಲೀಕರ ಪೋಟೋ, ಸ್ವತ್ತಿನ ಪೋಟೋ, ಮಾಲೀಕರ ಗುರುತಿನ ದಾಖಲೆ ಪ್ರತಿ, ಸರ್ಕಾರ ನಿಗಧಿ ಮಾಡಿದ ತೆರಿಗೆ ಪಾವತಿಸಿ ಬಿ-ಖಾತೆ ಪಡೆಯಬಹುದು ಎಂದು ಪೌರಾಯುಕ್ತ ಮನ್ಸೂರ್ ಅಲಿ ಮಾಹಿತಿ ನೀಡಿದರು.