ಕನ್ನಡಪ್ರಭ ವಾರ್ತೆ ಮಂಡ್ಯ

ವೈದ್ಯಕೀಯ ಕ್ಷೇತ್ರದಲ್ಲಿ ನಡೆಯುತ್ತಿರುವ ಹೊಸ ಆವಿಷ್ಕಾರಗಳನ್ನು ಗರ್ಭಿಣಿ ಮತ್ತು ಸ್ತ್ರೀರೋಗ ವಿಭಾಗದಲ್ಲಿ ಪೂರಕವಾಗಿ ಅಳವಡಿಸಿಕೊಂಡು ಜನರಿಗೆ ಉತ್ತಮ ಚಿಕಿತ್ಸೆ ನೀಡುವುದಕ್ಕೆ ಸಮ್ಮೇಳನಗಳು ಸಹಕಾರಿಯಾಗಿವೆ ಎಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಹೇಳಿದರು.

ನಗರದಲ್ಲಿರುವ ಮಿಮ್ಸ್ ಸರ್ ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ ಮಹಿಳಾ ಆರೋಗ್ಯ-ಸಮಾಜದ ಶಕ್ತಿ ಘೋಷವಾಕ್ಯದ ೬ನೇ ಯುವ ಕಸೊಗ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ತಜ್ಞ ವೈದ್ಯರೆಲ್ಲರೂ ಒಂದೆಡೆ ಸೇರಿದಾಗ ವಿಷಯಗಳು ಪರಸ್ಪರ ವಿನಿಮಯವಾಗುತ್ತವೆ. ಹೊಸ ವಿದ್ಯಾರ್ಥಿಗಳ ಅಧ್ಯಯನಕ್ಕೆ ನೆರವಾಗಲಿವೆ. ಹೊಸ ಆವಿಷ್ಕಾರಗಳನ್ನು ಕಲಿತು ವೃತ್ತಿಯಲ್ಲಿ ಅಳವಡಿಸಿಕೊಳ್ಳುವುದಕ್ಕೆ ಅನುಕೂಲವಾಗುತ್ತದೆ. ಹೊಸ ಹೊಸ ಸಂಶೋಧನಾ ವರದಿಗಳನ್ನು ಮಂಡಿಸುವುದಕ್ಕೆ ಸಮ್ಮೇಳನಗಳು ಪ್ರೇರಣೆ ನೀಡಲಿವೆ ಎಂದರು.

ವೈದ್ಯರೆಲ್ಲರೂ ಒಂದೆಡೆ ಸೇರಿದಾಗ ಅಧ್ಯಯನ, ಸಂಶೋಧನೆಗೆ ಸಂಬಂಧಿಸಿದಂತೆ ಹಲವಾರು ಮಹತ್ವದ ವಿಷಯಗಳು ಚರ್ಚೆಯಾಗುತ್ತವೆ. ವಿಷಯಗಳನ್ನು ಅರಿತು ವೃತ್ತಿಯಲ್ಲಿ ಅಳವಡಿಸಿಕೊಂಡಾಗ ಕೌಶಲ್ಯ ಹೆಚ್ಚುತ್ತದೆ. ಗರ್ಭಿಣಿ ಮತ್ತು ಸ್ತ್ರೀರೋಗ ವಿಭಾಗದಲ್ಲಿ ಇನ್ನಷ್ಟು ಪರಿಣತಿ ಸಾಧಿಸುವಂತೆ ಪ್ರೇರಣೆ ಸಿಗುತ್ತದೆ. ವೃತ್ತಿ ಸಾಮರ್ಥ್ಯ, ಪ್ರೌಢಿಮೆ ಉತ್ತಮಗೊಳಿಸಿಕೊಳ್ಳಲು ಅನುಕೂಲಕರವಾದ ವಾತಾವರಣವನ್ನು ಸಮ್ಮೇಳನ ನೀಡುವುದಾಗಿ ತಿಳಿಸಿದರು.


ಮಹಿಳೆಯರು ಸದಾ ಕಾಲ ಆರೋಗ್ಯವಾಗಿರಬೇಕು. ಅದು ಸಮಾಜಕ್ಕೆ ಶಕ್ತಿ ತುಂಬುತ್ತದೆ. ಮಹಿಳೆಯರ ಆರೋಗ್ಯವನ್ನು ಉತ್ತಮವಾಗಿ ಸಂರಕ್ಷಣೆ ಮಾಡುವುದು ವೈದ್ಯರ ಕರ್ತವ್ಯವಾಗಿದೆ. ತಾಯಿ-ಮಗುವಿನ ಆರೋಗ್ಯವನ್ನು ಕಾಪಾಡುವುದರೊಂದಿಗೆ ತಾಯಿ-ಮಗುವಿನ ಮರಣ ಸಂಭವಿಸದಂತೆ ತಡೆಯಬೇಕಿದೆ. ತಾಯಿ ಒಬ್ಬಳು ಆರೋಗ್ಯವಾಗಿದ್ದರೆ ಇಡೀ ಕುಟುಂಬದ ಆರೋಗ್ಯ ಉತ್ತಮವಾಗಿರುತ್ತದೆ ಎಂದರು.

ಶ್ರೀಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶೀರ್ವಚನದಲ್ಲಿ ತಿಳಿಸಿದ ವಿಚಾರಗಳು ನಮ್ಮೆಲ್ಲಾ ವೈದ್ಯರಿಗೆ ನೀತಿ ಬೋಧನೆಯಾಗಿದೆ. ಮುಂದಿನ ದಿನಗಳಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸಮಾಜಕ್ಕೆ ಉತ್ತಮ ವೈದ್ಯಸೇವೆ ನೀಡಲು ಮುಂದಾಗುವಂತೆ ತಿಳಿಸಿದರು.

ವೈಜ್ಞಾನಿಕ ವರದಿಗಳ ಪ್ರಕಾರ ಎಐ ತಂತ್ರಜ್ಞಾನವು ಗರ್ಭಾವಸ್ಥೆಯಲ್ಲಿ ಎದುರಾಗಬಹುದಾದ ‘ಪ್ರಿಕ್ಲಾಂಪ್ಸಿಯಾ’ ಅಂದರೆ ಅಧಿಕ ರಕ್ತದೊತ್ತಡ ಮತ್ತು ಅವಧಿಗೆ ಮುನ್ನ ಹೆರಿಗೆಯಾಗುವ ಅಪಾಯಗಳ ಮುನ್ಸೂಚನೆ ನೀಡಲು ಸಹಾಯ ಮಾಡುತ್ತದೆ ಎಂದರು.

ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರನ್ನು ಅಭಿನಂದಿಸಲಾಯಿತು, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವೈದ್ಯ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಮ್ಮೇಳನದಲ್ಲಿ ೬೬೦ ಜನ ನೋಂದಣಿ ಮಾಡಿಸಿದ್ದರು. ೧೧೨೦ ವೈದ್ಯರು ಭಾಗವಹಿಸಿದ್ದು, ೪೦೦ ಸಂಶೋಧನಾ ಪ್ರಬಂಧಗಳು ಮಂಡನೆಯಾದವು.

ಸಮಾರಂಭದಲ್ಲಿ ಸಮ್ಮೇಳನ ಆಯೋಜನಾ ಸಮಿತಿ ಅಧ್ಯಕ್ಷೆ ಡಾ.ಎಚ್.ಸಿ.ಸವಿತಾ, ಡಾ.ಟಿ.ಆರ್.ಜ್ಯೋತಿ, ಕಾರ್ಯದರ್ಶಿ ಡಾ.ಮನೋಹರ್, ಡಾ.ಸಂಜಯ್‌ಕುಮಾರ್, ಖಜಾಂಚಿ ಡಾ.ಶಿಲ್ಪಾ, ಡಾ.ಮಹೇಂದ್ರ, ಉಪಾಧ್ಯಕ್ಷರಾದ ಡಾ.ಕಾವ್ಯಶ್ರೀ, ಡಾ.ಶ್ರೀಕಲಾ ಹಾಗೂ ಹಿರಿಯ ವೈದ್ಯರಾದ ಡಾ.ಬಿ.ಎನ್.ಪ್ರಭಾವತಿ, ಡಾ.ವಸುಮತಿರಾವ್, ಡಾ.ಉಮಾದೇವಿ, ರಾಜ್ಯ ಸಂಘದ ಡಾ. ಶೋಭಾ. ಎನ್.ಗುಡಿ, ಡಾ.ರಾಜಶ್ರೀ ಪಲ್ಲಡಿ ಸೇರಿದಂತೆ ಎಂಒಜಿಎಸ್ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಹಾಜರಿದ್ದರು.