ಕನ್ನಡಪ್ರಭ ವಾರ್ತೆ ಮಧುಗಿರಿ

ಶಿಕ್ಷಣ ಪಡೆಯಲು ತೊಡಕುಗಳಿದ್ದರೆ ಅದನ್ನುಪರಿಹರಿಸಲು ಹಾಲಪ್ಪ ಫೌಂಡೇಶನ್‌ ನಿಮ್ಮ ಜೊತೆಗಿರುತ್ತದೆ ಎಂದು ಹಾಲಪ್ಪ ಫೌಂಡೇಶನ್ ಅಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದರು.

ತಾಲೂಕಿನ ಮಿಡಿಗೇಶ ಹೋಬಳಿ ಬೇಡತ್ತೂರು ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ನಾಗೇಂದ್ರಪ್ಪ ಅವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಡತನಾಡಿದರು.

ಇಂದಿನ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆಯಲು ಕೀಳರಿಮೆ ತೊರೆಯಿರಿ. ಬಹುತೇಕ ಉನ್ನತ ಹುದ್ದೆಯಲ್ಲಿರುವವರು ಸರ್ಕಾರಿ ಶಾಲೆಯಲ್ಲಿ ಕಲಿತು ಶ್ರಮ ವಹಿಸಿ ಉನ್ನತ ಶಿಕ್ಷಣ ಪಡೆದು ಹಲವು ಉದ್ಯಮಗಳನ್ನು ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಜಿಲ್ಲೆಯ ಡಿಸಿ, ಸಿಇಒ ಹಾಗೂ ಎಸ್ಪಿ ರವರು ಮಾತೃಭಾಷೆ ಸರ್ಕಾರಿ ಶಾಲೆಯಲ್ಲಿ ಅಭ್ಯಾಸ ಮಾಡಿ ಇಂದು ಜಿಲ್ಲೆಯ ಹಿರಿಯ ಅಧಿಕಾರಿಗಳಾಗಿದ್ದಾರೆ. ಶಿಕ್ಷಣ ಎಲ್ಲ ಸಾಧನೆಗೂ ಮೂಲಧಾರವಾದುದು. ನಮ್ಮ ಸರ್ಕಾರ ಪ್ರತಿ ಶಾಲೆಯಲ್ಲೂ ಕನ್ನಡ ದಿನಪತ್ರಿಕೆ ಕಡ್ಡಾಯವಾಗಿ ಓದಬೇಕು ಎಂದು ಆದೇಶ ಮಾಡಿದ್ದು, ಎಲ್ಲರೂ ಪ್ರಚಲಿತ ವಿದ್ಯಾಮಗಳನ್ನು ತಿಳಿಯಲು ದಿನ ಪತ್ರಿಕೆಗಳನ್ನು ಕಡ್ಡಾಯವಾಗಿ ಅಭ್ಯಾಸ ಮಾಡಬೇಕು. ಇದು ನಿಮ್ಮ ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಗೂ ಸಾಮಾನ್ಯ ಜ್ಞಾನಕ್ಕೆ ಅನುಕೂಲವಾಗುತ್ತದೆ. ತಾಲೂಕಿನಲ್ಲಿ ಮಿಡಿಗೇಶಿ ಹೋಬಳಿ ಮಕ್ಕಳು ಎಸ್‌ಎಸ್ಎಲ್ಸಿ ಯಲ್ಲಿ ಕೊನೆಯ ಸ್ಥಾನದಲ್ಲಿದ್ದು ಮುಂದಿನ ಪರೀಕ್ಷೆಯ ವೇಳೆಗೆ ಉತ್ತಮ ಫಲಿತಾಂಶವನ್ನು ತೋರಿಸಬೇಕು. ಅದಕ್ಕಾಗಿ ಮಕ್ಕಳು ಮತ್ತು ಶಿಕ್ಷಕರು ಹೆಚ್ಚಿನ ಶ್ರಮವಹಿಸಬೇಕಿದೆ. ನಾಗೇಂದ್ರಪ್ಪನವರು ಕೂಡ ತುಂಬಾ ನಂಬಿಕಸ್ಥ ಕುಟುಂಬದಿಂದ ಬಂದಿದ್ದು ಇವರ ಶಿಕ್ಷಕ ವೃತ್ತಿಯಲ್ಲಿ ಮಕ್ಕಳಿಗೆ ಗುಣಮಟ್ಟದ ವಿದ್ಯಾದಾನವನ್ನು ಮಾಡಿದ್ದಾರೆ. ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಆಶಿಸಿದ ಅವರು, ಪ್ರತಿಯೊಬ್ಬ ವಿದ್ಯಾರ್ಥಿಗೂ ಶಿಕ್ಷಣದ ವಿಚಾರದಲ್ಲಿ ಯಾವುದೇ ಸಮಸ್ಯೆ ಇದ್ದರೂ ಹಾಲಪ್ಪ ಫೌಂಡೇಶನ್ ಸಂಪರ್ಕಿಸಬಹುದು ಎಂದರು.

ನಿವೃತ್ತಿ ಪಡೆದ ಶಿಕ್ಷಕ ನಾಗೇಂದ್ರಪ್ಪ ಮಾತನಾಡಿ, ಶಾಲೆಯಲ್ಲಿ ಮಕ್ಕಳು ಕಲಿಕೆಗೆ ಉತ್ತಮ ವಾತಾವರಣವನ್ನು ನಿರ್ಮಿಸಿದ ಆತ್ಮ ತೃಪ್ತಿ ನನಗಿದೆ ಪಾಠ ಮಾಡಿದ ಗುರುಗಳ ಮುಂದೆ ನಿವೃತ್ತಿ ಹೊಂದುತ್ತಿರುವುದು ಬದುಕಿನ ಮತ್ತೊಂದು ಸಾರ್ಥಕತೆ ಎಂದು ಭಾವಿಸಿದ್ದೇನೆ. ನನಗೆ ಪಾಠ ಮಾಡಿದ ಗುರುಗಳಿಗೆ ನಾನು ಏನೂ ಕೊಟ್ಟರು ಸಾಲದು ಅದಕ್ಕಾಗಿ ಈ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದ ಸಾರ್ಥಕತೆ ನನಗಿದ್ದು, ಮುಂದಿನ ದಿನಗಳಲ್ಲಿ ಶಿಕ್ಷಣಕ್ಕಾಗಿ ಯಾವುದೇ ರೀತಿಯ ಸಹಾಯ ಮಾಡಲು ನಾನು ಸಿದ್ಧ ಹಾಲಪ್ಪ ಫೌಂಡೇಶನ್ ವತಿಯಿಂದ ಹೋಬಳಿ ಶಾಲೆಗಳಿಗೆ ಹತ್ತಾರು ಪ್ರಯೋಜನವಾಗಲಿದ್ದು, ಅದು ಮುಂದುವರಿಯಲಿ ಎಂದು ಶುಭ ಕೋರಿದರು.


ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ನಾಗೇಂದ್ರಪ್ಪನವರ ಗುರುಗಳಾದ ಎಂ.ವಿ.ವೆಂಕಟರಾಮರೆಡ್ಡಿ, ಗಂಗಾಧರಪ್ಪ, ನಾಗರಾಜಪ್ಪ,ಪ್ರೌಢಶಾಲೆ ಮುಖ್ಯ ಶಿಕ್ಷಕ ಗೋವಿಂದನಾಯ್ಕ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಪುಟ್ಟಲಿಂಗಯ್ಯ, ನಿವೃತ್ತ ಮುಖ್ಯ ಶಿಕ್ಷಕ ತಿಪ್ಪೇಸ್ವಾಮಿ ,ನಿವೃತ್ತ ಆರ್‌ಟಿಓ ಕೃಷ್ಣಾರೆಡ್ಡಿ, ಬಿಇಒ ಕೆ.ಎನ್‌.ಹನುಮಂತರಾಯಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ನರಸೇಗೌಡ, ಎಸ್‌ಡಿಎಂಸಿ ಸದಸ್ಯ ರು ಇತರೆ ಶಿಕ್ಷಕರು ಮಕ್ಕಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.