ಸಾರಾಂಶ
ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದಿಂದ ರಾಜ್ಯದ ಜನಸಾಮಾನ್ಯರು ನೆಮ್ಮದಿಯ ಜೀವನ ನಡೆಸುವಂತಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಕನ್ನಡಪ್ರಭ ವಾರ್ತೆ ಸೊರಬ
ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದಿಂದ ರಾಜ್ಯದ ಜನಸಾಮಾನ್ಯರು ನೆಮ್ಮದಿಯ ಜೀವನ ನಡೆಸುವಂತಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ತಾಲೂಕಿನ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ, ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಅಭಿವೃದ್ಧಿಗೆ ಹಿನ್ನಡೆ ಆಗಲಿದೆ ಎಂದು ವಿರೋಧಿಗಳು ಅಪಪ್ರಚಾರ ಮಾಡುವುದನ್ನು ನಿಲ್ಲಿಸಿದ್ದಾರೆ.
ಬಡವರ ಹಸಿವು, ನಿರುದ್ಯೋಗ ಆಳುವ ಸರ್ಕಾರಕ್ಕೆ ಮನವರಿಕೆಯಾದಾಗ ಮಾತ್ರ ಇಂತಹ ದಿಟ್ಟ ನಿರ್ಧಾರ ಕೈಗೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತಿದೆ ಎಂದರು.
ಮಹಿಳೆಯರು ರಾಜ್ಯದ ಪುಣ್ಯಕ್ಷೇತ್ರಗಳಲ್ಲದೇ ಅವರ ಅನುಕೂಲಕ್ಕೆ ತಕ್ಕಂತೆ ರಾಜ್ಯದಲ್ಲೇ ಪ್ರಯಾಣಿಸಲು ಅನುಕೂಲ ಆಗುವಂತೆ ಶಕ್ತಿ ಯೋಜನೆ ಮಹಿಳೆಯರಿಗೆ ವರದಾನವಾಗಿದೆ. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು ರೈತರು ಮತ್ತು ರೈತರ ಪಂಪ್‌ಸೆಟ್‌ಗಳಿಗೆ ಅನುಕೂಲ ಆಗುವಂತೆ ಉಚಿತ ವಿದ್ಯುತ್ ಸೌಲಭ್ಯವನ್ನು ಒದಗಿಸಿದ್ದರು.
೩೦ ವರ್ಷಗಳ ನಂತರ ಯೋಜನೆ ಅನುಷ್ಠಾನದಲ್ಲಿರುವುದು ಅವರ ದೂರದೃಷ್ಟಿಯ ಪ್ರತೀಕವಾಗಿದೆ. ಇಂತಹ ಯೋಜನೆಗಳ ಅನುಷ್ಠಾನದಿಂದಾಗಿ ರೈತರಲ್ಲಿ ಆರ್ಥಿಕ ಬಲ ಹೆಚ್ಚಾಗಿದೆ ಎಂದು ತಿಳಿಸಿದರು.
ದೇವರಾಜ ಅರಸು, ಬಂಗಾರಪ್ಪ, ಕಾಗೋಡು ತಿಮ್ಮಪ್ಪ ಅವರು ರೈತರನ್ನು ಆರ್ಥಿಕವಾಗಿ ಶಕ್ತಿವಂತ ರನ್ನಾಗಿ ಮಾಡುವ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಭೂಮಿಯ ಹಕ್ಕು ನೀಡಿದ್ದರು. ಬಂಗಾರಪ್ಪ ಅವರ ಹಾದಿಯಲ್ಲಿ ನಡೆಯುವ ನಾನು ಅವರ ಚಿಂತನೆಗಳನ್ನು ಮೈಗೂಡಿಸಿಕೊಂಡು ನಡೆಯುತ್ತಿದ್ದೇನೆ ಎಂದರು.
ಬಂಗಾರಪ್ಪ ಅವರು ಮುಖ್ಯಮಂತ್ರಿ ಆದಾಗ ಜಾರಿಗೊಳಿಸಿದ ಆರಾಧನಾ ಯೋಜನೆಯಿಂದ ಹಲವು ದೇವಾಲಯಗಳ ಜೀರ್ಣೋದ್ಧಾರವಾಗಿದ್ದವು. ಆದರೆ, ಶ್ರೀ ರಾಮನನ್ನು ಬೀದಿಗೆ ತಂದು ನಿಲ್ಲಿಸುವ ಪ್ರಯತ್ನ ನಡೆಯುತ್ತಿವೆ.
ಎಲ್ಲಾ ಶಾಲೆಗಳಲ್ಲಿ ಸಂವಿಧಾನ ಪೂರ್ವಪೀಠಿಕೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ನಾವೆಲ್ಲ ಒಂದು ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಮೂಡಬೇಕು ಎಂದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಗೆ ಸಂದಾಯವಾದ ಮೊಬಲಗು ಬಗ್ಗೆ ಮಾಹಿತಿ ನೀಡಿದರು. ಉಪವಿಭಾಗಾಧಿಕಾರಿ ಡಾ. ಆರ್.ಯತೀಶ್, ತಹಸೀಲ್ದಾರ್ ಹುಸೇನ್ ಸರಾಕವಸ್, ಇಒ ಪ್ರದೀಪ್‌ಕುಮಾರ್, ಕೃಷಿ ನಿರ್ದೇಶಕ ಕೆ.ಜಿ.ಕುಮಾರ್,
ಪುರಸಭಾ ಮುಖ್ಯಾಧಿಕಾರಿ ಟಿ.ಬಾಲಚಂದ್ರ, ಬಿಇಒ ಸತ್ಯನಾರಾಯಣ, ಗಣಪತಿ ಹುಲ್ತಿಕೊಪ್ಪ, ಕೆ.ಪಿ.ರುದ್ರಗೌಡ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತಾ ಜೋತಾಡಿ, ವಿಶಾಲಕ್ಷಮ್ಮ, ತಬಲಿ ಬಂಗಾರಪ್ಪ, ಪುರಸಭಾ ಸದಸ್ಯರಾದ ಅನ್ಸರ್ ಅಹ್ಮದ್, ಪ್ರೇಮಾ, ಶಿವಲಿಂಗೇಗೌಡ, ಹಿರಿಯಣ್ಣ, ರಾಜಶೇಖರ್, ಪುರುಷೋತ್ತಮ್, ನಾಗರಾಜ್ ಚಿಕ್ಕಸವಿ, ತಾರಾ ಶಿವಾನಂದಪ್ಪ, ಎಂ.ಡಿ.ಶೇಖರ್, ಸುನೀಲ್ ಗೌಡ, ಜಗದೀಶ್ ಕುಪ್ಪೆ, ನಾಗರಾಜ್, ರಾಜೇಶ್ವರಿ, ಜಯಶೀಲಗೌಡ, ನೆಹರೂ ಕೊಡಕಣಿ ಮೊದಲಾದವರು ಹಾಜರಿದ್ದರು.
ವಿರೋಧ ಪಕ್ಷಗಳು ನಮ್ಮ ಗ್ಯಾರಂಟಿ ಯೋಜನೆಗಳು ಲೋಕಸಭಾ ಚುನಾವಣೆ ನಂತರ ನಿಲ್ಲಿಸಲಾಗುತ್ತದೆ ಎಂದು ಟೀಕೆಗಳನ್ನು ಮಾಡುತ್ತಿದ್ದಾರೆ. ಅಂತಹ ಊಹಾಪೋಹಗಳಿಗೆ ಜನರು ಕಿವಿಗೊಡುವ ಅಗತ್ಯವಿಲ್ಲ. ಕಮೀಷನ್ ಪಡೆದುಕೊಂಡು ಯೋಜನೆಗಳನ್ನು ಜನರಿಗೆ ನೀಡುತ್ತಿದ್ದಾರೆ. ರಾಜ್ಯದ ಖಜಾನೆ ಖಾಲಿಯಾಗಿದೆ ಎಂದು ಟೀಕೀಸುವ ವಿರೋಧ ಪಕ್ಷದವರು ತಮ್ಮ ನೈತಿಕತೆ ಪ್ರಶ್ನಿಸಿಕೊಳ್ಳಲಿ
- ಮಧು ಬಂಗಾರಪ್ಪ, ಶಿಕ್ಷಣ ಸಚಿವ