ಸಾರಾಂಶ
ಕೊಪ್ಪಳ : ಕುಡಿಯುವ ನೀರು ಸಮಸ್ಯೆ ನೀಗಿಸಲು ಮತ್ತು ರೈತರಿಗೆ ಬರದ ಸಬ್ಸಿಡಿ ಮೊತ್ತ ತಲುಪದೆ ಇದ್ದರೇ ಒದಗಿಸಲು ಸಹಾಯವಾಣಿ ಪ್ರಾರಂಭಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ನಳಿನ್ ಅತುಲ್ ಮನವಿ ಮಾಡಿದರು.
ಕೊಪ್ಪಳ ಡಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರ ಅನುಕೂಲಕ್ಕಾಗಿ ಸಹಾಯವಾಣಿ ಪ್ರಾರಂಭಿಸಲಾಗಿದ್ದು, ಸಲ್ಲಿಕೆಯಾದ ದೂರುಗಳನ್ನು 24 ಗಂಟೆಯೊಳಗೆ ಇತ್ಯರ್ಥ ಮಾಡಲಾಗುತ್ತದೆ ಎಂದರು.
ಜಿಲ್ಲೆಯಲ್ಲಿ ರೈತರಿಗೆ ಇನ್‌ಪುಟ್ ಸಬ್ಸಿಡಿ ಡಿಬಿಟಿ ಮೂಲಕ ಜಮಾ ಆದ ಮಾಹಿತಿಯನ್ನು ಸಂಬಂಧಪಟ್ಟ ಗ್ರಾಪಂ ಕಚೇರಿಯಲ್ಲಿ ಪ್ರಚುರ ಪಡಿಸಲಾಗಿದೆ. ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದ ಹಿನ್ನೆಲೆ ಜಿಲ್ಲೆಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಕುಡಿಯುವ ನೀರಿನ ಮತ್ತು ಮೇವಿನ ಸಮಸ್ಯೆ ಕುರಿತು ಹಾಗೂ ರೈತರಿಗೆ ನೀಡುವ ಇನ್‌ಪುಟ್ ಸಬ್ಸಿಡಿ ಹಣ ಖಾತೆಗೆ ಜಮಾ ಆಗದೇ ಇರುವ ಬಗ್ಗೆ ದೂರುಗಳನ್ನು ಸಲ್ಲಿಸಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ತಾಲೂಕು ಮತ್ತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿ ತೆರೆಯಲಾಗಿದೆ. ಇದುವರೆಗೂ 314 ದೂರುಗಳು ಸ್ವೀಕೃತವಾಗಿದ್ದು, ಸ್ವೀಕೃತವಾದ ದೂರುಗಳಲ್ಲಿ 182 ಪೈಪ್‌ಲೈನ್ ದುರಸ್ತಿ, 91 ಕುಡಿವ ನೀರು ಒದಗಿಸಲು ಮತ್ತು 41 ಮೋಟರ್ ದುರಸ್ತಿ ಮಾಡಿಸುವ ಕುರಿತು ದೂರು ದಾಖಲಾಗಿವೆ. ಅದರಲ್ಲಿ 310 ದೂರನ್ನು ಬಗೆಹರಿಸಲಾಗಿದೆ ಇನ್ನೂ 4 ದೂರು ಬಗೆಹರಿಸಲು ಬಾಕಿ ಇವೆ.
ಜಿಲ್ಲಾಧಿಕಾರಿ ಕಚೇರಿ ಹಾಗೂ ತಾಲೂಕು ಕಚೇರಿಗಳಲ್ಲಿನ ಸಹಾಯವಾಣಿ ಸಂಖ್ಯೆ:
ಜಿಲ್ಲಾಧಿಕಾರಿ ಕಚೇರಿ-7676732001, ತಾಲೂಕು ಕಚೇರಿ, ಕೊಪ್ಪಳ-9380252346, ಯಲಬುರ್ಗಾ-9448833207, ಕುಷ್ಟಗಿ-9845791349, ಕನಕಗಿರಿ-9900433012, ಕುಕನೂರು-8050303495, ಗಂಗಾವತಿ-9740793877, ಕಾರಟಗಿ-9743600343.
ಸ್ಥಳೀಯ ಸಂಸ್ಥೆಗಳ ಸಹಾಯವಾಣಿ:
ಕೊಪ್ಪಳ: 08539-230192, ಭಾಗ್ಯನಗರ: 08539-230243, ಕುಕನೂರು: 8197396725, 8431363187, ಯಲಬುರ್ಗಾ: 9880524225, 9743277571, ಕುಷ್ಟಗಿ: 08536-267041, ತಾವರಗೇರಾ: 990057212, 8971014351, ಕಾರಟಗಿ: 08533-274232, ಕನಕಗಿರಿ: 8951133577, ಗಂಗಾವತಿ: 08533-230240, 8050428081.
ಕೊಪ್ಪಳ ಜಿಲ್ಲೆಯ 7 ತಾಲೂಕುಗಳನ್ನು ಸರ್ಕಾರ ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದ ಹಿನ್ನೆಲೆ ಯಾವುದೇ ರೀತಿಯ ಕುಡಿಯುವ ನೀರಿನ ಮತ್ತು ಮೇವಿನ ಸಮಸ್ಯೆ ಉದ್ಭವಿಸಿದರೆ ತಕ್ಷಣ ಸ್ಪಂದಿಸಲು ತಹಸೀಲ್ದಾರ ಮತ್ತು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಗ್ರಾಮ ಮಟ್ಟದ ಟಾಸ್ಕ್‌ಫೋರ್ಸ್ ಸಮಿತಿ ರಚನೆ ಮಾಡಿಕೊಳ್ಳಲಾಗಿದೆ ಹಾಗೂ ಜಿಲ್ಲೆಯಲ್ಲಿ ಬರಗಾಲ ನಿರ್ವಹಣೆಗಾಗಿ ಅನುದಾನದ ಕೊರತೆ ಇಲ್ಲ ಎಂದರು.
ಜಿಲ್ಲೆಯಲ್ಲಿ ಪ್ರತಿ ಮಂಗಳವಾರ ಮತ್ತು ಬುಧವಾರ ಗ್ರಾಮ ಮಟ್ಟದ ಕಾರ್ಯಪಡೆ ಮತ್ತು ಪ್ರತಿ ಗುರುವಾರ ತಾಲೂಕಾ ಮಟ್ಟದ ಕಾರ್ಯಪಡೆ ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರತಿ ಶುಕ್ರವಾರ (ಜೂಮ್ ವಿ.ಸಿ ಮೂಲಕ) ಎಲ್ಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಆಡಳಿತಾಧಿಕಾರಿಗಳು, ಪಶು ಸಖಿ, ಕೃಷಿ ಸಖಿ ಮತ್ತು ತಾಲೂಕು ಮಟ್ಟದ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಾಪ್ತಾಹಿಕ ಸಭೆ ನಡೆಸಲಾಗುತ್ತಿದೆ. ಜಿಲ್ಲಾಡಳಿತದಿಂದ ಜಿಲ್ಲೆಯ ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಸಮಸ್ಯೆ ಆಗದಂತೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಬರ ನಿರ್ವಹಣೆಗೆ ಕ್ರಮ ವಹಿಸಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆ ಉಪಸ್ಥಿತರಿದ್ದರು.