ಅಕ್ರಮ ಶೆಡ್‌ಗಳನ್ನು ತೆರವುಗೊಳಿಸುವಂತೆ ಹೇಮಗಿರಿ ಗ್ರಾಮಸ್ಥರ ಆಗ್ರಹ

| Published : Jan 01 2024, 01:15 AM IST

ಅಕ್ರಮ ಶೆಡ್‌ಗಳನ್ನು ತೆರವುಗೊಳಿಸುವಂತೆ ಹೇಮಗಿರಿ ಗ್ರಾಮಸ್ಥರ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಕೆ.ಆರ್.ಪೇಟೆ ತಾಲೂಕಿನಲ್ಲಿ ಬರಗಾಲ ಇರುವುದರಿಂದ ಹೇಮಗಿರಿ ಜಾತ್ರೆಗೆ ಬರುವ ರಾಸುಗಳ ಸುಂಕ ಹರಾಜು ಮಾಡುವುದು ಬೇಡ. ಹೇಮಗಿರಿಯಲ್ಲಿ ಕೆಲವರು ಅಕ್ರಮವಾಗಿ ಕಾರ್ಯ ಅಂಗಡಿಗಳನ್ನು ಹಾಕಿಕೊಂಡಿದ್ದು ಈ ಅಂಗಡಿಗಳಲ್ಲಿ ಅಕ್ರಮ ಮಧ್ಯ ಮಾರಾಟ ಸೇರಿದಂತೆ ಹಲವಾರು ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಹೇಮಗಿರಿ ಜಾತ್ರಾ ಪ್ರದೇಶದಲ್ಲಿ ಕೆಲವು ಮೀನುಗಾರ ಕುಟುಂಬಗಳು ಅಕ್ರಮವಾಗಿ ಶೆಡ್ಡುಗಳನ್ನು ಹಾಕಿಕೊಂಡಿದ್ದು ಇದರಿಂದ ರಾಸುಗಳನ್ನು ಕಟ್ಟಲು ಅಡಚಣೆಯಾಗಿದೆ. ಅಕ್ರಮ ಶೆಡ್ಡುಗಳನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು.

ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಸುಪ್ರಸಿದ್ಧ ಹೇಮಗಿರಿಯ ಶ್ರೀಕಲ್ಯಾಣ ವೆಂಕಟರಮಣ ಸ್ವಾಮಿ ಮತ್ತು ಬಿಲ್ಲೇನಹಳ್ಳಿ ಶ್ರೀ ಗವಿರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಮತ್ತು ಅಧಿಕಾರಿಗಳ ಪೂರ್ವಭಾವಿ ಸಭೆ ಶಾಸಕ ಎಚ್.ಟಿ.ಮಂಜು ಅಧ್ಯಕ್ಷತೆಯಲ್ಲಿ ನಡೆಯಿತು.

ಹೇಮಗಿರಿಯಲ್ಲಿ ಕೆಲವರು ಅಕ್ರಮವಾಗಿ ಕಾರ್ಯ ಅಂಗಡಿಗಳನ್ನು ಹಾಕಿಕೊಂಡಿದ್ದು ಈ ಅಂಗಡಿಗಳಲ್ಲಿ ಅಕ್ರಮ ಮಧ್ಯ ಮಾರಾಟ ಸೇರಿದಂತೆ ಹಲವಾರು ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಬೇಕು. ತಾಲೂಕಿನಲ್ಲಿ ಬರಗಾಲ ಇರುವುದರಿಂದ ಜಾತ್ರೆಗೆ ಬರುವ ರಾಸುಗಳ ಸುಂಕ ಹರಾಜು ಮಾಡದಂತೆ ಆಗ್ರಹಪಡಿಸಿದರು.

ಶ್ರೀಕಲ್ಯಾಣ ವೆಂಕಟರಮಣ ಸ್ವಾಮಿ ರಥ ಶಿಥಿಲವಾಗಿದೆ. ಇದನ್ನು ನವೀಕರಣ ಮಾಡುತ್ತಿಲ್ಲ. ಜಾತ್ರೆ ಸಂದರ್ಭದಲ್ಲಿ ಧೂಳು ಏಳದಂತೆ ಕಾಲಕಾಲಕ್ಕೆ ರಸ್ತೆಗೆ ನೀರು ಹಾಕುತ್ತಿಲ್ಲ. ತೇರು ಎಳೆಯಲು ರಸ್ತೆ ಬದಿಯ ಮರದ ಕೊಂಬೆಗಳಿಂದ ಅಡಚಣೆಯಾಗುತ್ತಿದೆ. ರಥೋತ್ಸವಕ್ಕೆ ಅಡಚಣೆಯಾಗಿರುವ ಮರಗಳ ತೆರವಿಗೆ ಅರಣ್ಯ ಇಲಾಖೆ ಸ್ಪಂದಿಸುತ್ತಿಲ್ಲ. ಹೇಮಾವತಿ ನದಿಯಲ್ಲಿ ಜೊಂಡು ಬೆಳೆದಿದ್ದು ತೆಪ್ರೋತ್ಸವಕ್ಕೆ ಅಡ್ಡಿಯಾಗುತ್ತಿದೆ. ನದಿಯನ್ನು ಸ್ವಚ್ಛಗೊಳಿಸಿ ತೆಪ್ರೋತ್ಸವಕ್ಕೆ ಅನುಕೂಲ ಕಲ್ಪಿಸಿಕೊಡುವಂತೆ ಒತ್ತಾಯಿಸಿದರು.

ಶ್ರೀಗವಿರಂಗನಾಥ ದೇವಾಲಯದ ಹುಂಡಿ ವಾರ್ಷಿಕವಾಗಿ ೩೦-೩೫ ಲಕ್ಷಕ್ಕೆ ಹರಾಜು ಆಗುತ್ತಿತ್ತು. ಇದೀಗ ಹರಾಜು ನಿಲ್ಲಿಸಿ ಮುಜರಾಯಿ ಇಲಾಖೆಯೇ ಹುಂಡಿ ನಿರ್ವಹಣೆ ಮಾಡುತ್ತಿದೆ. ಶ್ರೀಗವಿರಂಗನಾಥ ಬಯಲು ದೇವಾಲಯವಾಗಿರುವುದರಿಂದ ಇಲ್ಲಿ ಹುಂಡಿಯ ರಕ್ಷಣೆಗೆ ಸಮಸ್ಯೆಯಿದೆ. ಇಲಾಖೆ ವಹಿಸಿಕೊಂಡ ನಂತರ ದೇವಾಲಯದ ವಾರ್ಷಿಕ ಆದಾಯ ೨೨ ಲಕ್ಷ ರು.ಗೆ ಕುಸಿದಿದೆ. ಭಕ್ತರು ಬರುವ ವೇಳೆಗೆ ಸಕಾಲದಲ್ಲಿ ಹುಂಡಿಯನ್ನು ನಿರ್ದಿಷ್ಟ ಸ್ಥಳದಲ್ಲಿ ಇಲಾಖೆ ಸಿಬ್ಬಂದಿ ಇಡದ ಕಾರಣ ದೇವಾಲಯದ ಆದಾಯದಲ್ಲಿ ಇಳಿಕೆಯಾಗಿದೆ ಎಂದು ಬಿಲ್ಲೇನಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು ದೂರಿದರು.

ರಥೋತ್ಸವಕ್ಕೆ ಬರುವ ಭಕ್ತಾದಿಗಳ ಅನುಕೂಲಕ್ಕೆ ಎರಡು ಪ್ರತ್ಯೇಕ ಕೊಳವೆ ಬಾವಿಕೊರೆಸಬೇಕು. ಮಹಿಳೆಯರಿಗೆ ಸ್ನಾನಗೃಹಗಳ ನಿರ್ಮಾಣ, ಜಾತ್ರೆ ಸಂದರ್ಭದಲ್ಲಿ ವಾಹನಗಳ ಮೂಲಕ ಬರುವ ಭಕ್ತರಿಗೆ ಪಾರ್ಕಿಂಗ್ ಸ್ಥಳ ನಿಗಧಿಪಡಿಸುವಂತೆ ಒತ್ತಾಯಿಸಿದರು.

ಗ್ರಾಮಸ್ಥರ ಎಲ್ಲ ಅಹವಾಲುಗಳನ್ನು ಆಲಿಸಿ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮ ವಹಿಸುವಂತೆ ಸಭೆಯಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದ ಶಾಸಕ ಎಚ್.ಟಿ.ಮಂಜು ಪ್ರಸಕ್ತ ಸಾಲಿನಲ್ಲಿ ಜಾತ್ರೆಯನ್ನು ಮತ್ತಷ್ಟು ವಿಜೃಂಭಣೆಯಿಂದ ಆಚರಿಸಲು ಅಧಿಕಾರಿಗಳಿಗೆ ಮಾರ್ಗಸೂಚಿ ನೀಡಿದರು.

ತಹಸೀಲ್ದಾರ್ ನಿಸರ್ಗಪ್ರಿಯ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಸೀತಾರಾಂ, ಪಶು ಇಲಾಖೆಯ ಡಾ.ದೇವರಾಜು, ಪಿಡಿಒಗಳಾದ ಡಾ.ನರಸಿಂಹರಾಜು, ವಿನೋದ್ ಸೇರಿದಂತೆ ಇತರೆ ಅಧಿಕಾರಿಗಳು, ಗ್ರಾಮ ಮುಖಂಡರಾದ ಬಂಡೀಹೊಳೆ ಅಶೋಕ್, ಮಾದೇಗೌಡ, ಕುಪ್ಪಹಳ್ಳಿ ಶೇಷಾದ್ರಿ ಇತರರಿದ್ದರು.