ಸಾರಾಂಶ
ಕಾರವಾರ: ಉತ್ತರ ಕನ್ನಡ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಅವರ ಪತಿ ಹೇಮಂತ ನಿಂಬಾಳ್ಕರ್ ಐಜಿ ಇದ್ದಾಗ ಪರೇಶ ಮೇಸ್ತಾ ಸಾವಿನ ಪ್ರತಿಭಟನೆಯಲ್ಲಿ ಸಾವಿರಾರು ಅಮಾಯಕರ ಮೇಲೆ ಪ್ರಕರಣ ದಾಖಲಿಸಿದ್ದರು ಎಂದು ಬಿಜೆಪಿ ಮಾಜಿ ವಕ್ತಾರ ನಾಗರಾಜ ನಾಯಕ ಆರೋಪಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ತಾಲೂಕಿನಲ್ಲೇ ೧೧೧ ಪ್ರಕರಣ, ಅಲ್ಲದೇ ಘಟ್ಟದ ಮೇಲೂ ಪ್ರಕರಣ ದಾಖಲಿಸಿದರು. ಜಿಲ್ಲೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಇಷ್ಟೊಂದು ಜನರ ಮೇಲೆ ಪೊಲೀಸ್ ದೂರು ದಾಖಲಾಗಿದೆ. ಈ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಹೊರಗುತ್ತಿಗೆ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಚಿತಾವಣೆ ಆಗುವ ಪೋಸ್ಟರ್ ಮೇಲೆ ಯಾವುದೇ ಪ್ರಕರಣ ಇಲ್ಲ. ಆದರೆ ಅಂದು ಚಿಕ್ಕ ಸಂದೇಶ ಹಾಕಿದ್ದರೂ ಪ್ರಕರಣ ದಾಖಲಿಸಲಾಗಿದೆ. ಗೋಕರ್ಣದಲ್ಲಿ ಇಬ್ಬರು ಹೆಣ್ಣುಮಕ್ಕಳ ಮೇಲೆ ಕೂಡಾ ದೂರು ದಾಖಲಾಗಿದೆ. ಇದಕ್ಕೆಲ್ಲಾ ಅಂದಿನ ಐಜಿಯಾಗಿದ್ದ ಹೇಮಂತ ನಿಂಬಾಳಕರ ಕಾರಣ ಎಂದು ದೂರಿದರು.ಪ್ರಜ್ವಲ ರೇವಣ್ಣ ಪ್ರಕರಣ ಗೊತ್ತಿದ್ದರು ಟಿಕೇಟ್ ನೀಡಿದ್ದಾರೆ ಎಂದು ಕಾಂಗ್ರೆಸಿಗರು ಹೇಳುತ್ತಿದ್ದಾರೆ. ಅದು ಜೆಡಿಎಸ್ ಆಂತರಿಕ ವಿಚಾರವಾಗಿದೆ. ಬಿಜೆಪಿ ನಿರ್ಧಾರ ಮಾಡಿಲ್ಲ. ಪ್ರಜ್ವಲ್ ಅವರಿಂದ ಅನ್ಯಾಯ ಆಗಿದ್ದಲ್ಲಿ ಕ್ಷಮಾರ್ಹ ಅಲ್ಲ. ಕಾನೂನಿನ ಪ್ರಕಾರ ಶಿಕ್ಷೆ ಆಗಬೇಕು. ಸಂತ್ರಸ್ತರ ಪರ ಇದ್ದೇವೆ. ಆದರೆ ಆ ಹೆಣ್ಣುಮಕ್ಕಳ ವಿಡಿಯೋ ಹರಿಬಿಟ್ಟವರು ಯಾರು? ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ ಕೈವಾಡ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ವಿಡಿಯೋ ಹರಿಬಿಟ್ಟಿರುವುದು ತಪ್ಪಲ್ಲವೇ? ಕಾಂಗ್ರೆಸ್‌ನವರಿಗೆ ಹೆಣ್ಣುಮಕ್ಕಳ ಬಗ್ಗೆ ಕನಿಷ್ಠ ಕಾಳಜಿ ಇಲ್ಲ. ಪ್ರಜ್ವಲ ಅವರ ಮಾನಮರ್ಯಾದೆ ತೆಗೆಯಲು ಹೋಗಿ ಸಾವಿರಾರು ಹೆಣ್ಣುಮಕ್ಕಳ ಮರ್ಯಾದೆ ಹೋಗಿಲ್ಲವೇ? ಇದು ಡಿಕೆಶಿ ಪೆನ್‌ಡ್ರೈವ್ ಪ್ರಕರಣವಾಗಿದೆ ಎಂದು ಕುಟುಕಿದರು.
ನಾಗೇಶ ಕುರ್ಡೇಕರ, ನಯನಾ ನೀಲಾವರ ಇದ್ದರು.