ಯಲಬುರ್ಗಾ: ಶಿವಶರಣೆ ಹೇಮರಡ್ಡಿ ‌ಮಲ್ಲಮ್ಮ ಜಯಂತಿಯನ್ನು ಮೇ ೧೦ರಂದು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ತಹಸೀಲ್ದಾರ್ ಪ್ರಕಾಶ ನಾಶಿ ಹೇಳಿದರು.

ಪಟ್ಟಣದ ತಹಸೀಲ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಿವಶರಣೆ ಹೇಮರಡ್ಡಿ‌ ಮಲ್ಲಮ್ಮ ಜಯಂತಿ ಆಚರಣೆ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಯಂತಿಯಂದು ಎಲ್ಲ ಇಲಾಖೆ ಕಚೇರಿಯಲ್ಲಿ ಕಡ್ಡಾಯವಾಗಿ ಮಲ್ಲಮ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಬೇಕು. ಅಲ್ಲದೆ ಜಯಂತಿ ಆಚರಣೆ ವರದಿ ಒಪ್ಪಿಸಬೇಕು ಎಂದರು.

ಕಷ್ಟದಲ್ಲೂ ಎಲ್ಲರ ಒಳಿತನ್ನೇ ಬಯಸಿದ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಅವರ ಜೀವನ ಆದರ್ಶ ಎಲ್ಲ ಮಹಿಳೆಯರಿಗೆ ಮಾದರಿಯಾಗಿದೆ. ಮಹಿಳೆ ಸಹನಾ ಮೂರ್ತಿ. ಭೂಮಿಗೆ ಮಹಿಳೆಯನ್ನು ಹೋಲಿಸಲಾಗುತ್ತದೆ. ಕರುಣಾಮಯಿ ಹೆಣ್ಣು ವಿಶ್ವವನ್ನು ಪೊರೆಯುವ ತಾಯಿಯಂತೆ. ಅಂತಹ ಸ್ವರೂಪಿಯಾಗಿ ಮಲ್ಲಮ್ಮ ಅವತರಿಸಿದ್ದರು. ಸಮಾಜ ಸುಧಾರಣೆಯನ್ನು ಮಾಡುವುದು ಅಷ್ಟು ಸುಲಭವಲ್ಲ. ಅದರಲ್ಲೂ ಮಹಿಳೆ ಸಮಾಜ ಸುಧಾರಣೆ ಮಾಡಲು ಮುಂದುಬರದ ಕಾಲದಲ್ಲಿ ಹೇಮರಡ್ಡಿ ಮಲ್ಲಮ್ಮ ಮಹಿಳೆಯರ ಪ್ರತಿನಿಧಿಯಾಗಿ ನಿಲ್ಲುತ್ತಾರೆ. ಅವರ ಆತ್ಮಬಲವನ್ನು ಎಲ್ಲ ಮಹಿಳೆಯರು ಹೊಂದಬೇಕು ಎಂದು ಸಲಹೆ ನೀಡಿದರು

ಸಮಾಜದ ಅಧ್ಯಕ್ಷ ಸಂಗಪ್ಪ ವಕ್ಕಳದ ಮಾತನಾಡಿ, ಹೇಮರೆಡ್ಡಿ ಮಲ್ಲಮ್ಮ‌ ಜಯಂತಿಯನ್ನು ಕಡ್ಡಾಯವಾಗಿ ಎಲ್ಲ ಇಲಾಖೆಗಳಲ್ಲಿ ಪೂಜೆ ಸಲ್ಲಿಸಿ ಗೌರವ ಸಲ್ಲಿಸಬೇಕು, ಮೇ ೧೦ರ ಬಳಿಕ ಯಲಬುರ್ಗಾ-ಕುಕನೂರು ತಾಲೂಕು ರೆಡ್ಡಿ ಸಮಾಜದ ಸಭೆ ಕರೆದು ಬಳಿಕ ದಿನ ನಿಗದಿ ಮಾಡುತ್ತೇವೆ, ಈ ಸಮಾರಂಭಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ, ತಾಲೂಕಿನ ೩೫ ಗ್ರಾಮಗಳಲ್ಲಿ ರಡ್ಡಿ ಸಮುದಾಯದ ಜನ ವಾಸವಿದ್ದಾರೆ ಎಂದರು.


ಈ ಸಂದರ್ಭ ಅಧಿಕಾರಿಗಳಾದ ಶಶಿಧರ ಸಕ್ರಿ, ಪಿ.ಬಿ. ಕುಂಬಾರ, ಬಸವರಾಜ ಗೊಗೇರಿ, ದೇವರಡ್ಡಿ ಮುಂದಲಮನಿ, ಮುಖಂಡರಾದ ಅರವಿಂದ ಮುಂದಲಮನಿ, ದೇವಪ್ಪ ಅರಕೇರಿ, ಡಾ. ಶಿವನಗೌಡ ದಾನರಡ್ಡಿ, ಅಶೋಕ ಮಾದಿನೂರು, ಅರವಿಂದ ಮುಂದಲಮನಿ, ಬಸವರಡ್ಡಿ‌ ಬೀಡನಾಳ ಸೇರಿದಂತೆ ಇದ್ದರು.