ಹೇಮರಡ್ಡಿ ಮಲ್ಲಮ್ಮ ಅವರ ಆದರ್ಶ ಜೀವನ ನಮಗೆಲ್ಲ ಪ್ರೇರಣೆಯಾಗಿದೆ. ಅವರು ಭಕ್ತಿ, ಸಹನೆ, ತ್ಯಾಗ ಮತ್ತು ಮಾನವೀಯ ಮೌಲ್ಯಗಳ ಪ್ರತಿರೂಪವಾಗಿ ಕನ್ನಡ ಸಂಸ್ಕೃತಿಯಲ್ಲಿ ಗೌರವಿಸಲ್ಪಟ್ಟಿದ್ದಾರೆ.

ಶಿರಹಟ್ಟಿ: ಕಷ್ಟದಲ್ಲೂ ಎಲ್ಲರ ಒಳಿತನ್ನೇ ಬಯಸಿದ ಶಿವಶರಣೆ ಹೇಮರಡ್ಡಿ ಮಲ್ಲಮ್ಮನ ಆದರ್ಶ ಜೀವನ ಎಲ್ಲರಿಗೂ ಮಾದರಿಯಾಗಿದೆ ಎಂದು ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಎಂ.ಕೆ. ಲಮಾಣಿ ತಿಳಿಸಿದರು.ಭಾನುವಾರ ತಹಸೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹೇಮರಡ್ಡಿ ಮಲ್ಲಮ್ಮ ಅವರ ಆದರ್ಶ ಜೀವನ ನಮಗೆಲ್ಲ ಪ್ರೇರಣೆಯಾಗಿದೆ. ಅವರು ಭಕ್ತಿ, ಸಹನೆ, ತ್ಯಾಗ ಮತ್ತು ಮಾನವೀಯ ಮೌಲ್ಯಗಳ ಪ್ರತಿರೂಪವಾಗಿ ಕನ್ನಡ ಸಂಸ್ಕೃತಿಯಲ್ಲಿ ಗೌರವಿಸಲ್ಪಟ್ಟಿದ್ದಾರೆ. ತಮ್ಮ ಜೀವನದಲ್ಲಿ ಎದುರಿಸಿದ ಸಂಕಷ್ಟಗಳ ನಡುವೆಯೂ ಧೈರ್ಯ ಮತ್ತು ಧರ್ಮದ ಮಾರ್ಗವನ್ನು ಅನುಸರಿಸಿದ ಕಾರಣ ಅವರು ಇಂದಿಗೂ ಜನರಿಗೆ ಮಾದರಿಯಾಗಿದ್ದಾರೆ ಎಂದರು.ಹೇಮರಡ್ಡಿ ಮಲ್ಲಮ್ಮ ಅವರು ಸಮಸ್ತ ಸ್ತ್ರೀಕುಲಕ್ಕೆ ಆದರ್ಶ ಮಹಿಳೆಯಾಗಿ ಪರಿಗಣಿಸಲ್ಪಡುತ್ತಾರೆ. ಅವರ ಜೀವನದಲ್ಲಿ ಕಾಣುವ ಪತಿಯ ಭಕ್ತಿ, ಸಹನೆ, ತ್ಯಾಗ, ಧೈರ್ಯ ಮತ್ತು ಆತ್ಮನಿಷ್ಠೆ ಮಹಿಳೆಯರಿಗಷ್ಟೇ ಅಲ್ಲ, ಎಲ್ಲರಿಗೂ ಪ್ರೇರಣೆಯಾಗಿದೆ. ಸಂಕಷ್ಟಗಳ ನಡುವೆಯೂ ಧರ್ಮ ಮತ್ತು ಮೌಲ್ಯಗಳನ್ನು ಕಾಪಾಡಿಕೊಂಡು ಬದುಕಿದ ಅವರ ಜೀವನ ಇಂದಿಗೂ ಮಾದರಿಯಾಗಿದೆ ಎಂದರು.ಸಂಸಾರದಲ್ಲಿದ್ದುಕೊಂಡೆ ಕುಟುಂಬದ ಸದಸ್ಯರ ಕಿರುಕುಳ ಸಹಿಸಿ ಅವರ ಅವಗುಣಗಳನ್ನು ಪ್ರೀತಿ, ಸಹನೆಯಿಂದ ತಿದ್ದಿ, ತೀಡಿ ಅವರನ್ನು ಸರಿದಾರಿಗೆ ತರಬಹುದು ಎಂಬುದನ್ನು ಜಗತ್ತಿಗೆ ತೋರಿಸಿದ ಏಕೈಕ ಮಹಿಳೆ ಹೇಮರಡ್ಡಿ ಮಲ್ಲಮ್ಮ. ಸಮಾಜದ ಒಳಿತಿಗಾಗಿ ಉತ್ತಮ ಸಂದೇಶಗಳನ್ನು ನೀಡಿದ ಸಮಸ್ತ ಸ್ತ್ರೀಕುಲಕ್ಕೆ ಮಾದರಿಯಾಗಿದ್ದಾರೆ. ಅವರ ತತ್ವ, ಸಿದ್ಧಾಂತ ಹಾಗೂ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.ಮುಖಂಡ ಎನ್.ಎನ್. ಗೋಕಾವಿ ಮಾತನಾಡಿ, ರಡ್ಡಿ ಸಮಾಜಕ್ಕೆ ಬಡತನ ನೀಡಬೇಡವೆಂದು ಸಾಕ್ಷಾತ್ ಪರಮಾತ್ಮನಾದ ಮಲ್ಲಿಕಾರ್ಜುನನಲ್ಲಿ ತನ್ನ ಭಕ್ತಿಯಿಂದ ಭಜಿಸಿ ಪರಮಾತ್ಮನಿಗೆ ಅಂಬಲಿಯನ್ನು(ಪ್ರಸಾದ) ನೀಡಿದ ಶರಣೆ ಹೇಮರಡ್ಡಿ ಮಲ್ಲಮ್ಮ ಆದರ್ಶಳಾಗಿದ್ದಾಳೆ. ಸಮಾಜದ ಒಳಿತಿಗಾಗಿ ಶ್ರಮಿಸಿದ ಇವರ ಜೀವನವು ಅವಿಸ್ಮರಣೀಯವಾಗಿದೆ ಎಂದರು.

ಜಿಪಂ ಮಾಜಿ ಸದಸ್ಯ ಸಿ.ಟಿ. ಮುಂಡವಾಡ, ಅಜ್ಜುಗೌಡ್ರ ಪಾಟೀಲ, ಅಪ್ಪಣ್ಣ ಪಾಟೀಲ, ನೋಂದಣಿ ಇಲಾಖೆಯ ಶರಣಪ್ಪ ಪವಾರ, ಬಾಬಾಜಾನ ಕೋಳಿವಾಡ, ವಿನೋದ ಪಾಟೀಲ, ರಮೇಶ ಕಲ್ಲಪ್ಪನವರ ಇತರರು ಇದ್ದರು.