ಹೇಮರಡ್ಡಿ ಮಲ್ಲಮ್ಮನ ಜೀವನವೇ ಒಂದು ತೆರೆದ ಪುಸ್ತಕದಂತಿತ್ತು. ಯಾರಾದರೂ ಉದಾಹರಣೆ ಕೊಡಬೇಕಾದರೆ ಜೀವಿಸಿದರೆ ಹೇಮರಡ್ಡಿ ಮಲ್ಲಮ್ಮನಂತೆ ಜೀವಿಸಬೇಕು ಎನ್ನುವಂತೆ ಬದುಕಿ, ಜೀವಿಸಿ ತೋರಿಸಿಕೊಟ್ಟಿದ್ದಾರೆ. ಅವರು ನುಡಿದಂತೆಯೇ ನಡೆದು ತೋರಿಸಿದರು.
ಮುಂಡರಗಿ: ಹೇಮರಡ್ಡಿ ಮಲ್ಲಮ್ಮನ ವ್ಯಕ್ತಿತ್ವ ಭಾರತೀಯ ಮಹಿಳೆಯರಿಗೆ ಆದರ್ಶವಾಗಿ ನಿಲ್ಲುತ್ತದೆ. ಅವರ ಜೀವನವು ತ್ಯಾಗ, ತಾಳ್ಮೆ, ದೃಢವಾದ ನಂಬಿಕೆಗೆ ಸಂಕೇತವಾಗಿದೆ ಎಂದು ತಾಲೂಕು ರಡ್ಡಿ ಸಮಾಜದ ಅಧ್ಯಕ್ಷ ಡಾ. ಬಿ.ಎಸ್. ಮೇಟಿ ತಿಳಿಸಿದರು.
ಭಾನುವಾರ ಪಟ್ಟಣದ ಹೆಸರೂರು ರಸ್ತೆಯಲ್ಲಿರುವ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಕಲ್ಯಾಣ ಮಂಟಪದ ನಿಯೋಜಿತ ಕಟ್ಟಡದಲ್ಲಿ ರಡ್ಡಿ ಸಮಾಜ ಶೈಕ್ಷಣಿಕ ಹಾಗೂ ಸಮಾಜ ಸೇವಾ ಟ್ರಸ್ಟ್ ಕಮಿಟಿ ವತಿಯಿಂದ ಆಯೋಜಿಸಿದ್ದ ಶಿವಶರಣೆ ಹೇಮರಡ್ಡಿ ಮಲ್ಲಮ್ಮನ 604ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಟ್ಟಣದಲ್ಲಿ ಇಂತದ್ದೊಂದು ದೇವಸ್ಥಾನ ಹಾಗೂ ಕಲ್ಯಾಣಮಂಟಪ ನಿರ್ಮಾಣವಾಗಲು ಸಮಾಜದ ಎಲ್ಲರೂ ತನು, ಮನ, ಧನದಿಂದ ಸಹಾಯ ಸಹಕಾರ ಮಾಡಿದ್ದಾರೆ ಎಂದರು.ಜನಪ್ರತಿನಿಧಿಗಳು ಮತ್ತು ಇತರೆ ಸಮಾಜದ ಗಣ್ಯಮಾನ್ಯರ ಸಹಕಾರ ಹಾಗೂ ಸರ್ಕಾರದ ಅನುದಾನ ನೆರವಿನಿಂದ ಕಲ್ಯಾಣಮಂಟಪದ ಕಾರ್ಯವನ್ನು ಶೀಘ್ರವಾಗಿ ಮುಗಿಸಿ ಮುಂದಿನ ವರ್ಷದ ಪ್ರತಿಭಾ ಪುರಸ್ಕಾರ ನೂತನ ಕಲ್ಯಾಣ ಮಂಟಪದಲ್ಲಿಯೇ ಮಾಡುವುದಾಗಿ ಭರವಸೆ ನೀಡಿದರು.
ಪ್ರೊ. ಎ.ವೈ. ನವಲಗುಂದ ಮಾತನಾಡಿ, ಹೇಮರಡ್ಡಿ ಮಲ್ಲಮ್ಮನ ಜೀವನವೇ ಒಂದು ತೆರೆದ ಪುಸ್ತಕದಂತಿತ್ತು. ಯಾರಾದರೂ ಉದಾಹರಣೆ ಕೊಡಬೇಕಾದರೆ ಜೀವಿಸಿದರೆ ಹೇಮರಡ್ಡಿ ಮಲ್ಲಮ್ಮನಂತೆ ಜೀವಿಸಬೇಕು ಎನ್ನುವಂತೆ ಬದುಕಿ, ಜೀವಿಸಿ ತೋರಿಸಿಕೊಟ್ಟಿದ್ದಾರೆ. ಅವರು ನುಡಿದಂತೆಯೇ ನಡೆದು ತೋರಿಸಿದರು.ಕಷ್ಟ ಸಹಿಷ್ಣತೆಗೆ ಮತ್ತೊಂದು ಹೆಸರೇ ಹೇಮರಡ್ಡಿ ಮಲ್ಲಮ್ಮ. ಮಹಾತ್ಮರು ಕೇವಲ ಪೂಜೆಗೊಳ್ಳುವುದಕ್ಕೆ ಮಾತ್ರ ಸೀಮಿತವಾಗದೇ ನಮಗೆ ಪ್ರೇರಣೆ ನೀಡಲು ಇರಬೇಕು. ಒಂದು ಕುಟುಂಬ ಯಶಸ್ವಿಯಾಗಬೇಕಾದರೆ ಹೇಮರಡ್ಡಿ ಮಲ್ಲಮ್ಮನಷ್ಟು ಸಹನೆ ಇರಬೇಕು. ಅವರ ತತ್ವಾದರ್ಶಗಳು ನಮಗೆಲ್ಲ ಮಾದರಿಯಾಗಬೇಕಾಗಿದೆ ಎಂದರು.
ಜಿಪಂ ಮಾಜಿ ಉಪಾಧ್ಯಕ್ಷ ಶೋಭಾ ಮೇಟಿ ಮಾತನಾಡಿ, ಹೇಮರಡ್ಡಿ ಮಲ್ಲಮನ ಕುರಿತು ಸಂಪೂರ್ಣ ಪ್ರಚಾರ ಮಾಡಿದ ಕೀರ್ತಿ ಗದುಗಿನ ಗಾನಯೋಗಿ ಪಂಚಾಕ್ಷರಿ ಗವಾಯಿಗಳ ನಾಟಕ ಕಂಪನಿಯಿಂದ ಪ್ರದರ್ಶಿಸಿದ ಶಿವಶರಣೆ ಹೇಮರಡ್ಡಿ ಮಲ್ಲಮ್ಮನ ನಾಟಕ ಪ್ರದರ್ಶನವೇ ಪ್ರಮುಖ ಕಾರಣವಾಗಿದೆ. ಸಮಾಜ ಎಂದು ಬಂದಾಗ ಭಿನ್ನಾಭಿಪ್ರಾಯ ಬಿಟ್ಟು ಎಲ್ಲರೂ ಒಂದಾಗಿ ಒಗ್ಗಟ್ಟಾಗಿ ಬಾಳಿ ಬದುಕುವಂತಾಗಬೇಕು. ಮಹಾತ್ಮರನ್ನು, ಶರಣ, ಸಂತ, ಮಹಾಂತರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸದೇ ಎಲ್ಲ ಜಾತಿಯವರೂ ಅವರನ್ನು ಗೌರವಿಸುವಂತಾಗಬೇಕು ಎಂದರು.ಪ್ರೊ. ಬಿ.ಎಫ್. ಈಟಿ, ಬಸವರಾಜ ನವಲಗುಂದ ಸೇರಿದಂತೆ ಅನೇಕರು ಮಾತನಾಡಿದರು. ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯಲ್ಲಿ ಸಾಧನೆ ಮಾಡಿದ ಜಾಫರ್ ಬಚ್ಚೇರಿ ಹಾಗೂ ವೀರೇಶ ಜೋಳದ ಹಾಗೂ ಎಸ್ಎಸ್ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಾಗೂ ಎಂ.ಪಿ. ಶೀರನಹಳ್ಳಿ, ಎಸ್.ಡಿ. ಬಸೇಗೌಡ ಹಾಗೂ ಸೇವಾ ನಿವೃತ್ತಿ ಹೊಂದಿದ ನೌಕರರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅಶೋಕ ಶಿದ್ಲಿಂಗ, ಡಿ.ಡಿ. ಮೋರನಾಳ, ಡಾ. ಅನ್ನದಾನಿ ಮೇಟಿ, ಯರಾಶಿ ವಕೀಲರು, ಬಿ.ಎಸ್. ರಡ್ಡಿ, ಬಾಬಣ್ಣ ಚೆನ್ನಳ್ಳಿ, ವೀರಣ್ಣ ಮೇಟಿ, ಮೂಗನೂರ, ರವಿಗೌಡ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಹನುಮರಡ್ಡಿ ಇಟಗಿ ಸ್ವಾಗತಿಸಿ, ಪ್ರೊ. ಎಸ್.ಆರ್. ಬಸಾಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಕೆ. ರಾಜೂರ ನಿರೂಪಿಸಿ, ವಿಜಯಕುಮಾರ ಬಣಕಾರ ವಂದಿಸಿದರು.