ಕೆಡಿಪಿ ಸಭೆಯ ಲಿಂಕ್ ತಪ್ಪಿಸಿದ ಹೇಮಾವತಿ ಕೆನಾಲ್

| Published : Aug 13 2024, 12:50 AM IST

ಸಾರಾಂಶ

ಕಳೆದ 2 ತಿಂಗಳಿನಿಂದ ಜಿಲ್ಲೆಯಾದ್ಯಂತ ಸಂಚಲನ ಮೂಡಿಸುತ್ತಿರುವ ಹೇಮಾವತಿ ಲಿಂಕ್ ಕೆನಾಲ್ ವಿಷಯ ತುಮಕೂರು ಜಿ.ಪಂ ಕೆಡಿಪಿ ಸಭೆಯಲ್ಲಿ ರಿಂಗಣಿಸಿತು.ಹೇಮಾವತಿ ವಿಷಯಕ್ಕೆ ಸಂಬಂಧಿಸಿದಂತೆ ಜಿ.ಪಂ. ಸಭೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಶಾಸಕರ ನಡುವೆ ಜಟಾಪಟಿ ನಡೆದು ಕೋಲಾಹಲಕ್ಕೆ ಕಾರಣವಾಯಿತು.

ಕನ್ನಡಪ್ರಭ ವಾರ್ತೆ ತುಮಕೂರುಕಳೆದ 2 ತಿಂಗಳಿನಿಂದ ಜಿಲ್ಲೆಯಾದ್ಯಂತ ಸಂಚಲನ ಮೂಡಿಸುತ್ತಿರುವ ಹೇಮಾವತಿ ಲಿಂಕ್ ಕೆನಾಲ್ ವಿಷಯ ತುಮಕೂರು ಜಿ.ಪಂ ಕೆಡಿಪಿ ಸಭೆಯಲ್ಲಿ ರಿಂಗಣಿಸಿತು.ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಹೇಮಾವತಿ ಲಿಂಕ್ ಕೆನಾಲ್ ವಿಚಾರ ರಣಾಂಗಣಕ್ಕೆ ಸಾಕ್ಷಿಯಾಯಿತು. ಹೇಮಾವತಿ ವಿಷಯಕ್ಕೆ ಸಂಬಂಧಿಸಿದಂತೆ ಜಿ.ಪಂ. ಸಭೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಶಾಸಕರ ನಡುವೆ ಜಟಾಪಟಿ ನಡೆದು ಕೋಲಾಹಲಕ್ಕೆ ಕಾರಣವಾಯಿತು. ಕುಣಿಗಲ್ ಕಾಂಗ್ರೆಸ್ ಶಾಸಕ ಡಾ. ರಂಗನಾಥ್ ಮತ್ತು ಬಿಜೆಪಿ, ಜೆಡಿಎಸ್ ಶಾಸಕರ ನಡುವೆ ಹೇಮಾವತಿ ಕೆನಾಲ್ ವಿಷಯಕ್ಕೆ ಆರಂಭದಲ್ಲಿ ವಾಗ್ವಾದ ನಡೆಯಿತು. ಈ ವೇಳೆ ಜೆಡಿಎಸ್ ಹಾಗೂ ಬಿಜೆಪಿ ಶಾಸಕರು ಕೆನಾಲ್ ವಿಷಯಕ್ಕೆ ವ್ಯಾಪಕ ವಿರೋಧ ವ್ಯಕ್ತಪಡಿಸಿದರು. ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ, ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ, ತುಮಕೂರು ನಗರ ಶಾಸಕ ಜ್ಯೋತಿಗಣೇಶ್ ಹೇಮಾವತಿ ನೀರನ್ನು ತೆಗೆದುಕೊಂಡು ಹೋಗುತ್ತಿರುವುದು ಅಕ್ರಮ ಎಂದು ವಾಗ್ದಾಳಿ ನಡೆಸಿದರು. ಆಗ ಮಧ್ಯ ಪ್ರವೇಶಿಸಿದ ಕುಣಿಗಲ್ ಶಾಸಕ ಡಾ. ರಂಗನಾಥ್ ನಾವು ಕುಣಿಗಲ್ ಗೆ ಮಾತ್ರ ನೀರನ್ನು ಒಯ್ಯುತ್ತಿದ್ದೇವೆ, ನಮಗೆ ತೊಂದರೆ ಕೊಡಬೇಡಿ ಎಂದಾಗ ಶಾಸಕರ ನಡುವೆ ಮಾತಿನ ಜಟಾಪಟಿ ನಡೆಯಿತು. ಈ ವೇಳೆ ಮಾತನಾಡಿದ ಗ್ರಾಮಾಂತರ ಶಾಸಕ ಬಿ. ಸುರೇಶಗೌಡ ಅಧಿಕಾರ ಇದೆ ಅಂತಾ ನೀವು ಏನು ಬೇಕು ಅದನ್ನು ಮಾಡುವುದಕ್ಕಾಗುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಅದಕ್ಕೆ ತಿರುಗೇಟು ನೀಡಿದ ಡಾ. ರಂಗನಾಥ್ ನಮ್ಮ ಸರ್ಕಾರರ ಇದೆ, ನಮಗೆ ಏನು ಬೇಕು ಅದನ್ನು ಮಾಡುವುದಾಗಿ ತಿಳಿಸಿ ನೀವು ಹೇಳಿದ ಹಾಗೆಲ್ಲ ಕೇಳುವುದಕ್ಕೆ ಆಗುವುದಿಲ್ಲ ಎಂದರು.

ನೋಟಿಸ್ ನೀಡಲು ಸೂಚನೆ

ತಿಪಟೂರು ಶಾಸಕ ಕೆ . ಷಡಕ್ಷರಿ ಜಿಲ್ಲಾ ಮಟ್ಟದ ಕೆಡಿಪಿ ಸಭೆ ಇರುವ ಬಗ್ಗೆ ‌ಶಾಸಕರಿಗೆ, ಅಧಿಕಾರಿಗಳು ಸರಿಯಾದ ಮಾಹಿತಿ ಕೊಡುತ್ತಿಲ್ಲ ಎಂದು ತರಕರಾರು ತೆಗೆದರು. ಆಗ ಸಚಿವ ಡಾ. ಜಿ. ಪರಮೇಶ್ವರ್ ಅವರು ಅಧಿಕಾರಿಗಳನ್ನು ಯಾಕ್ರೀ ಸಭೆಗೆ ಕರೆಯುವುದಿಲ್ಲವೆಂದು ತರಾಟೆಗೆ ತಗೆದುಕೊಂಡರು. ಅಲ್ಲದೇ ಗೈರು ಹಾಜರಾಗಿರುವ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲು ಜಿ ಪಂ ಸಿಇಓಗೆ ಸೂಚನೆ ನೀಡಿದರು. ಮನೆ ನಿರ್ಮಾ ಣಕ್ಕೆ ಸಂಬಂಧಿಸಿದಂತೆ ಇನ್ನೂ 2010ರ ಅಂಕಿ ಅಂಶಗಳನ್ನೇ ನೀಡಲಾಗುತ್ತಿದೆ. ಇದು ಬದಲಾಗಬೇಕು ಎಂದು ಡಾ ಜಿ.ಪರಮೇಶ್ವರ್ ಹೇಳಿದರು.

ಇಲಾಖೆಗೆ ಮಾಹಿತಿ ಇಲ್ಲ

ತುಮಕೂರು ಗ್ರಾಮಾಂತರ ತಾಲೂಕಿನ 11 ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ 9 ಗ್ರಾಮಗಳಲ್ಲಿ ಕುಡಿಯುವ ನೀರಿನ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಟೆಂಡರ್ ಕರೆದು ಸರಿ ಮಾಡಲು ಏನಾಗಿದೆ ಎಂದು ಶಾಸಕ ಸುರೇಶಗೌಡ ಪ್ರಶ್ನಿಸಿದರು. ಆಗ ಇಂಜಿನಿಯರ್ ಉತ್ತರಿಸಿ ನಾನು ಡ್ಯೂಟಿ ರಿಪೋರ್ಟ್ ಮಾಡಿಕೊಂಡು ಒಂದು ವಾರ ಆಗಿದೆ ಎಂದಾಗ ಆ ಅಧಿಕಾರಿಗೆ ಪರಮೇಶ್ವರ್ ಬಂದು ವಾರವಾದರು ಇಲಾಖೆಗೆ ಬಗ್ಗೆ ನಿಮಗೆ ಮಾಹಿತಿ ಇಲ್ಲ ಅಂದರೆ ಹೇಗೆ ಎಂದರು. ಜಿಲ್ಲಾ ಮಟ್ಟದ ಕೆಡಿಪಿ ಸಭೆಗೆ ಮಾಹಿತಿ ತಾರದ ಅಧಿಕಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ .ಪರಮೇಶ್ವರ್, ಹಾಗೂ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ರವರು ತರಾಟೆಗೆ ತೆಗೆದುಕೊಂಡರು.

ಸಭೆಗೆ ಅನಿರೀಕ್ಷಿತವಾಗಿ ಬಂದ ಮಧು ಬಂಗಾರಪ್ಪ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೆಡಿಪಿ ಸಭೆಗೆ ಅನಿರೀಕ್ಷಿತವಾಗಿ ಬಂದಾಗ ಡಾ ಜಿ ಪರಮೇಶ್ವರ್ ಸ್ವಾಗತಿಸಿದರು. ಜಿ ಪಂ ಕಾರ್ಯ ನಿರ್ವಹಣಾಧಿಕಾರಿ ಪ್ರಭು ಜಿ ಜಿಲ್ಲೆಯ ಶಿಕ್ಷಣ ಇಲಾಖೆಯ ಬಗ್ಗೆ ಮಾಹಿತಿ ನೀಡಿದರು. ಡಾ.ಪರಮೇಶ್ವರ್ ಮತ್ತು ಗೋವಿಂದ ಕಾರಜೋಳ ಮಾತನಾಡಿ ಶಿಕ್ಷಕರ ನೇಮಕಾತಿಯನ್ನು ಮಾಡುವ ಸಂಬಂಧ ಮಧು ಬಂಗಾರಪ್ಪ ಗಮನ ಹರಿಸಬೇಕು ಎಂದರು. ಬಳಿಕ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮೂಲಸೌಕರ್ಯ ಗಳ ಕೊರತೆ ಇದೆ, ಶಿಕ್ಷಕರ ಕೊರತೆಯೂ ಇದೆ. ಅತಿಥಿ ಶಿಕ್ಷಕರನ್ನು ಶಾಲೆ ಪ್ರಾರಂಭವಾದಾಗಲೇ ತೆಗೆದುಕೊಂಡಿದ್ದೇವೆ ಎಂದರು. ಶಿಕ್ಷಕರ ನೇಮಕಾತಿ ಬಗ್ಗೆ ‌ಸಹ ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು ಎಂದರು.

ಕೆಡಿಪಿ ಸಭೆಗೆ ತಡವಾಗಿ ಬಂದ ಶಾಸಕರು

ಸಭೆ ಪ್ರಾರಂಭವಾಗಿ ಒಂದು ಗಂಟೆ ನಂತರ ಬಂದ ಪಾವಗಡ ಶಾಸಕ ಎಚ್ ವಿ ವೆಂಕಟೇಶ ಮತ್ತು ಗುಬ್ಬಿ ಶಾಸಕ ಶ್ರೀನಿವಾಸ ರವರನ್ನು ಉದ್ದೇಶಿಸಿ ಮಾತನಾಡಿದ ಉಸ್ತುವಾರಿ ‌ಸಚಿವ ಡಾ ಜಿ ಪರಮೇಶ್ವರ್ ಸಭೆಗೆ ತಡವಾಗಿ ಬಂದ ಅಧಿಕಾರಿಗಳನ್ನು ಇಷ್ಟೊತ್ತು ಜೋರಾಗಿ ತರಾಟೆ‌ಗೆ ತಗೆದು ಕೊಂಡೆ ನೀವು ಇಬ್ಬರು ಲೇಟ್ ಆಗಿ ಸಭೆಗೆ ಬರುತ್ತಿರಾ ? ನಾನು ನಿಮ್ಮನ್ನು ಈಗ ಏನು ಮಾಡಬೇಕು ಎಂದು ಹಾಸ್ಯ ಚಟಾಕೆ ಹಾರಿಸಿದರು.

ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಇಲಾಖೆಯಲ್ಲಿ ವ್ಯಾಪ್ತಿಗೆ ಬರುವ ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಕ್ರಮ ಜರುಗಿಸಬೇಕು. ಡಿಡಿಪಿಐಗಳ ಮೂಲಕ ಅನುದಾನಿತ ಶಿಕ್ಷಣ ಸಂಸ್ಥೆಗಳು ಶಿಕ್ಷಕರ ನೇಮಕಾತಿ ಫೈಲ್ ಗಳು ಕಳುಹಿಸಿ ಎರಡು ವರ್ಷವಾದರೂ ಅನುಮತಿ‌ ಸಿಗುತ್ತಿಲ್ಲ ಈ ಬಗ್ಗೆ ‌ಶಿಕ್ಷಣ‌ ಸಚಿವರು ಗಮನ ಹರಿಸಬೇಕು ಎಂದು ಪರಮೇಶ್ವರ್ ಕೆಡಿಪಿ ಸಭೆಯಲ್ಲಿ ಶಿಕ್ಷಣ ಸಚಿವರ ಗಮನ ಸೆಳೆದರು.ಸಂಸದ ಗೋವಿಂದ ಕಾರಜೋಳ, ಸಚಿವ ಕೆ ಎನ್ ರಾಜಣ್ಣ, ಶಾಸಕರಾದ ಜಯಚಂದ್ರ, ಶಾಸಕರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಿಸಿ ಮದಿನೇನಿ, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಲ್ಲಾ ಪೂಲೀಸ್ ವರಿಷ್ಠಾಧಿಕಾರಿ ಕೆ ವಿ ಆಶೋಕ ತುಮಕೂರು ಮಹಾನಗರಪಾಲಿಕೆ ಆಯುಕ್ತೆ ಆಶ್ವಿಜ, ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಅಧ್ಯಕ್ಷ ಸುರಾಜ್ ಹೆಗ್ಗಡೆ ,ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ನಿಹಾ.ರವಿಕುಮಾರ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಜರಿದ್ದರು.