ಸಾರಾಂಶ
ಪಟ್ಟಣದಲ್ಲಿ ಕುಡಿವ ನೀರಿನ ಸಮಸ್ಯೆ ತಲೆದೋರುವ ಮುನ್ನವೇ ಸಹಕಾರ ಸಚಿವ ಕೆ.ಎನ್.ರಾಜಣ್ಣ ಮುತುವರ್ಜಿ ವಹಿಸಿದ್ದರಿಂದ ಬಳ್ಳಾಪುರದಿಂದ ಸಿದ್ದಾಪುರ ಕೆರೆಗೆ ಹೇಮಾವತಿ ನದಿ ನೀರು ಹರಿದಿದ್ದು, ನಗರದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.
ಕನ್ನಡಪ್ರಭ ವಾರ್ತೆ ಮಧುಗಿರಿ
ಪಟ್ಟಣದಲ್ಲಿ ಕುಡಿವ ನೀರಿನ ಸಮಸ್ಯೆ ತಲೆದೋರುವ ಮುನ್ನವೇ ಸಹಕಾರ ಸಚಿವ ಕೆ.ಎನ್.ರಾಜಣ್ಣ ಮುತುವರ್ಜಿ ವಹಿಸಿದ್ದರಿಂದ ಬಳ್ಳಾಪುರದಿಂದ ಸಿದ್ದಾಪುರ ಕೆರೆಗೆ ಹೇಮಾವತಿ ನದಿ ನೀರು ಹರಿದಿದ್ದು, ನಗರದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಸಿದ್ದಾಪುರ ಕೆರೆ ನೀರಿಲ್ಲದೆ ಒಣಗಿತ್ತು. ಜನರಿಗೆ ಕುಡಿವ ನೀರಿಗೆ ಮುಂದೇನೂ ಎಂಬ ಪ್ರಶ್ನೆ ಎದುರಾಗಿತ್ತು. ಆದರೆ ಸಹಕಾರ ಸಚಿವ ಕೆ.ಎನ್. ರಾಜಣ್ಣ ಎಚ್ಚೆತ್ತ ಪರಿಣಾಮ ಇಂದು ಸಿದ್ದಾಪುರ ಕೆರೆಗೆ ನೀರು ಹರಿದಿದೆ. ಬಳ್ಳಾಪುರದ ಪಂಪ್ ಹೌಸ್‌ನಲ್ಲಿದ್ದ ಕೋಟ್ಯಂತರ ರು. ಬೆಲೆ ಬಾಳುವ ವಿದ್ಯುತ್ ಪರಿಕರ ಸೇರಿದಂತೆ ಪಂಪ್, ಮೋಟಾರ್‌ಗ ಕಳೆದ ವರ್ಷವೇ ಕಳವಾಗಿದ್ದವು. ಕೆ.ಎನ್.ರಾಜಣ್ಣ ಶಾಸಕರಾದ ನಂತರ ಇದನ್ನು ಗಮನಿಸಿ ಮೊದಲ ಆದ್ಯತೆಯಾಗಿ ಟೆಂಡರ್ ಪ್ರಕ್ರಿಯೆ ಆರಂಭಿಸಿ ಹಾಗೂ ಪರಿವರ್ತಕ ಅಳವಡಿಸಿದ್ದರಿಂದ ನೀರಿಸ ಸಮಸ್ಯೆ ಎದುರಾಗಲಿಲ್ಲ. ಪ್ರಸ್ತುತ ಕೊರಟೆಗೆರೆ ಮತ್ತು ಮಧುಗಿರಿ ಪುರಸಭೆಗಳಿಂದ ಬಳ್ಳಾಪುರದ ಬಳಿ ಕಾವಲುಗಾರನನ್ನು ನೇಮಿಸಲಾಗಿದೆ. ತುಮಕೂರಿನ ಕೈಗಾರಿಕಾ ಪ್ರದೇಶದ ವಂಸತನರಸಾಪುರದ ಬಳಿ, ನಂದಿಹಳ್ಳಿ ಬಳಿ ಪೈಪ್ ಒಡೆದಿದ್ದರಿಂದ ಕಳೆದ ಒಂದು ವಾರದಿಂದ ಹಗಲಿರು ಳೆನ್ನದೆ ಕೆಲಸ ಮಾಡಿದ ಮಧುಗಿರಿ ಪುರಸಭೆ ಸಿಬ್ಬಂದಿ ಕೆರೆಗೆ ನೀರು ಹರಿಸಿದ್ದಾರೆ. ತುಮಕೂರು ಪಾಲಿಗೆ ಬರಬೇಕಾದ ಹೇಮಾವತಿ ನೀರನ್ನು ಹರಿಸಲು ಮಾಜಿ ಸಚಿವ ಎಚ್.ಡಿ.ರೇವಣ್ಣ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಜಿಲ್ಲೆಯ ಪಾಲಿನ ನೀರು ಹರಿಸುವಲ್ಲಿ ಯಶಸ್ಸು ಕಂಡಿದ್ದಾರೆ. ಸಮಯಕ್ಕೆ ಸರಿಯಾಗಿ ಕೆರೆಗೆ ನೀರು ಹರಿಸಲು ಕಾರಣೀಭೂತರಾದ ಸಹಕಾರ ಸಚಿವ ರಾಜಣ್ಣ, ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಹಾಗೂ ಪುರಸಭೆ ಸಿಬ್ಬಂದಿ ಕಾರ್ಯಚರಣೆ ಬಗ್ಗೆ ಪಟ್ಟಣದ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.