ಒಂದೇ ಕಣ್ಣಲ್ಲಿ ಓದಿ ಜಿಲ್ಲೆಗೆ ಪ್ರಥಮ ಬಂದ ಹೇಮಾವತಿ!

| Published : Apr 11 2024, 12:45 AM IST

ಸಾರಾಂಶ

ತನ್ನ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದರೂ ಛಲ ಬಿಡದೇ ಓದಿದ ಈಕೆ ಪಿಯುಸಿ ಪರೀಕ್ಷೆಯಲ್ಲಿ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ.

ವಿಘ್ನೇಶ್ ಎಂ. ಭೂತನಕಾಡು ಕನ್ನಡಪ್ರಭ ವಾರ್ತೆ ಮಡಿಕೇರಿ

ತನ್ನ ಒಂದು ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡಿದ್ದರೂ ಕೂಡ ಛಲ ಬಿಡದೇ ಓದಿದ ಈಕೆ ಪಿಯುಸಿ ಪರೀಕ್ಷೆಯಲ್ಲಿ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸುವ ಮೂಲಕ ವ್ಯಾಸಂಗ ಮಾಡಲು ಹಿಂದೇಟು ಹಾಕುವ ಹಲವರಿಗೆ ಮಾದರಿಯಾಗಿದ್ದಾಳೆ.

ಮಡಿಕೇರಿ ಸಂತ ಜೋಸೆಫರ ಪಿಯು ಕಾಲೇಜಿನ ವಿದ್ಯಾರ್ಥಿನಿ ಹೇಮಾವತಿ ಎಸ್. 574 ಅಂಕ ಪಡೆದು ಕಲಾ ವಿಭಾಗದಲ್ಲಿ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಈಕೆ ಮಡಿಕೇರಿಯ ಮಹದೇವಪೇಟೆಯ ನಿವಾಸಿ ಎಸ್. ಸೆಲ್ವಕುಮಾರ್ - ರಾಜೇಶ್ವರಿ ದಂಪತಿಯ ಪುತ್ರಿ.

ಹೇಮಾವತಿ ಕನ್ನಡ ವಿಷಯದಲ್ಲಿ 97, ಇಂಗ್ಲಿಷ್ ನಲ್ಲಿ 87, ಇತಿಹಾಸ 100, ಅರ್ಥಶಾಸ್ತ್ರ 98, ಸಮಾಜಶಾಸ್ತ್ರ 94 ಹಾಗೂ ರಾಜ್ಯಶಾಸ್ತ್ರ ವಿಷಯದಲ್ಲಿ 98 ಅಂಕವನ್ನು ಗಳಿಸುವ ಮೂಲಕ ಸಾಧನೆ ಮಾಡಿದ್ದಾಳೆ.

ತನ್ನ ನಾಲ್ಕನೇ ವಯಸ್ಸಿನಲ್ಲಿ ಆಕಸ್ಮಿಕವಾಗಿ ಬಸ್ ನ ಮೆಟ್ಟಿಲಿನಿಂದ ಬಿದ್ದಿದ್ದಳು. ನಂತರ ಕಣ್ಣಲ್ಲಿ ಆಗಾಗ್ಗೆ ನೋವು ಕಾಣಿಸಿಕೊಂಡಿತ್ತು. ಇದರಿಂದ ವೈದ್ಯರ ಬಳಿ ತೋರಿಸಿದ ಸಂದರ್ಭ ಶಸ್ತ್ರಚಿಕಿತ್ಸೆ ಮಾಡಿ ತನ್ನ ಒಂದು ಕಣ್ಣನ್ನೇ ಮುಚ್ಚಿಸುವಂತೆ ಮಾಡಲಾಯಿತು. ಅಂದಿನಿಂದಲೂ ಈಗಿನವರೆಗೆ ಒಂದೇ ಕಣ್ಣಿನಲ್ಲಿಯೇ ವ್ಯಾಸಂಗ ಮಾಡುವಂತಹ ಪರಿಸ್ಥಿತಿ ಈಕೆಗೆ ಎದುರಾಗಿತ್ತು.

ಈಕೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲೂ ಕೂಡ ಶೇ.91 ರಷ್ಟು ಫಲಿತಾಂಶ ಪಡೆದು ಸಾಧನೆ ಮಾಡಿದ್ದಳು.

ಕಣ್ಣು ನೋವಿನಲ್ಲೇ ಓದು : ಪ್ರತಿ ದಿನ ಆದ ಪಾಠಗಳನ್ನು ಅಂದೇ ಮನೆಯಲ್ಲಿ ಅಭ್ಯಾಸ ಮಾಡುವ ಹೇಮಾವತಿ, ತನ್ನ ಕಣ್ಣಿನ ನೋವಿನಿಂದಲೇ ಓದುತ್ತಿದ್ದಳು. ಪರೀಕ್ಷೆ ಹತ್ತಿರ ಬಂದ ಸಂದರ್ಭ ಕಾಲೇಜಿನಿಂದ ಮನೆಗೆ ಬಂದು 5ರಿಂದ 7 ಗಂಟೆ ಹಾಗೂ ರಾತ್ರಿ ಊಟ ಆದ ನಂತರ 8ರಿಂದ 11 ಗಂಟೆ ಹಾಗೂ ಬೆಳಗ್ಗೆ 4 ಗಂಟೆಯಿಂದ ಓದುತ್ತಿದ್ದಳು ಎಂಬುದು ರೋಚಕ.

ಪ್ರತಿ ದಿನ ಓದುವ ಸಂದರ್ಭದಲ್ಲಿ ಕಣ್ಣು ಕೆಂಪಾಗುತ್ತಿತ್ತು. ಈ ವೇಳೆ ತುಂಬಾ ನೋವು ಕೂಡ ಆಗುತ್ತಿತ್ತು. ಆಗ ಕಣ್ಣಿಗೆ ಡ್ರಾಪ್ಸ್ ಹಾಕಿಕೊಂಡು ನಂತರ ಓದುತ್ತಿರುತ್ತೇನೆ. ಮತ್ತೆ ಪುನಃ ನೋವಾಗುತ್ತದೆ. ಆದರೂ ಮತ್ತೆ ಓದುತ್ತೇನೆ. ಕಣ್ಣು ನೋವೆಂದು ಎಂದಿಗೂ ನಾನು ಓದುವುದನ್ನು ನಿಲ್ಲಿಸಿಲ್ಲ. ಇದರಿಂದಲೇ ಇಷ್ಟು ಅಂಕ ಪಡೆಯಲು ಸಾಧ್ಯವಾಯಿತು. ನನ್ನ ಕಣ್ಣಿನ ಸಮಸ್ಯೆಗೆ ಪ್ರತಿ ದಿನ ಔಷಧಿಯನ್ನು ತೆಗೆದುಕೊಳ್ಳಬೇಕು. ಅಲ್ಲದೆ ಪ್ರತಿ ತಿಂಗಳು ವೈದ್ಯರ ಬಳಿ ತೆರಳಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಹೇಮಾವತಿ ಬೇಸರದಿಂದ ನುಡಿಯುತ್ತಾಳೆ.

ಪಿಯು ಪರೀಕ್ಷಾ ಫಲಿತಾಂಶದಲ್ಲಿ ಕೊಡಗು ಜಿಲ್ಲೆಗೆ ಪ್ರಥಮ ಬಂದಿರುವುದು ಖುಷಿಯಾಗುತ್ತಿದೆ. ಇನ್ನೂ ಅಂಕ ಬರುತ್ತದೆ ಅಂದುಕೊಂಡಿದ್ದೆ. ಮುಂದೆ ಬಿ.ಎ. ಪದವಿ ತೆಗೆದುಕೊಂಡು ನಂತರ ಐಎಎಸ್ ಆಗುವ ಆಸೆಯಿದೆ. ಕಣ್ಣಿನ ನೋವಿದ್ದರೂ ನಾನು ಎಂದಿಗೂ ಓದುವುದನ್ನು ನಿಲ್ಲಿಸಲಿಲ್ಲ. ಇನ್ನೂ ಓದುತ್ತೇನೆ. ಮನೆಯಲ್ಲಿ ಹಾಗೂ ಕಾಲೇಜಿನಲ್ಲಿ ಎಲ್ಲರೂ ಪ್ರೋತ್ಸಾಹ ನೀಡುತ್ತಿದ್ದರು ಎಂದು ಕಲಾವಿಭಾಗದಲ್ಲಿ ಕೊಡಗಿಗೆ ಪ್ರಥಮ ಪಡೆದ ವಿದ್ಯಾರ್ಥಿನಿ ಎಸ್. ಹೇಮಾವತಿ ಹೇಳಿದರು.