45 ಕೆರೆಗಳಿಗೆ ಎತ್ತಿನಹೊಳೆ ಯೋಜನೆಯಡಿ ಹೇಮೆ ನೀರು: 302 ಕೋಟಿ ರು.ವೆಚ್ಚದ ಅಭಿವೃದ್ಧಿ ಕಾಮಗಾರಿ

| Published : Jul 29 2024, 12:59 AM IST / Updated: Jul 29 2024, 01:05 PM IST

45 ಕೆರೆಗಳಿಗೆ ಎತ್ತಿನಹೊಳೆ ಯೋಜನೆಯಡಿ ಹೇಮೆ ನೀರು: 302 ಕೋಟಿ ರು.ವೆಚ್ಚದ ಅಭಿವೃದ್ಧಿ ಕಾಮಗಾರಿ
Share this Article
  • FB
  • TW
  • Linkdin
  • Email

ಸಾರಾಂಶ

45 ಕೆರೆಗಳಿಗೆ ಎತ್ತಿನಹೊಳೆ ಯೋಜನೆಯಡಿ ನೀರು ತುಂಬಿಸುವ ನಿಟ್ಟಿನಲ್ಲಿ 302 ಕೋಟಿ ರು.ವೆಚ್ಚದ ಅಭಿವೃದ್ಧಿ ಕಾಮಗಾರಿ

 ಮಧುಗಿರಿ : ತಾಲೂಕಿನ 45 ಕೆರೆಗಳಿಗೆ ಎತ್ತಿನಹೊಳೆ ಯೋಜನೆಯಡಿ ನೀರು ತುಂಬಿಸುವ ನಿಟ್ಟಿನಲ್ಲಿ 302 ಕೋಟಿ ರು.ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ತಿಳಿಸಿದರು.

ಮಧುಗಿರಿ ಪಟ್ಟಣಕ್ಕೆ ಕುಡಿವ ನೀರು ಒದಗಿಸುವ ಕಸಬಾ ವ್ಯಾಪ್ತಿಯ ಸಿದ್ಧಾಪುರ ಕೆರೆಗೆ ಹೇಮಾವತಿ ನೀರು ಹರಿದು ಬಂದ ಹಿನ್ನಲೆಯಲ್ಲಿ ಗಂಗಾ ಪೂಜೆ ನೆರವೇರಿಸಿ ಮಾತನಾಡಿದರು.

ಮಧುಗಿರಿ ತಾಲೂಕಿನ 45 ಕೆರೆಗಳಿಗೆ ಎತ್ತಿನಹೊಳೆ ಯೋಜನೆಯಿಂದ ಇನ್ನೆರೆಡು ವರ್ಷಗಳಲ್ಲಿ ನೀರು ತುಂಬಿಸಲಾಗುವುದು. ಹಾಗಾಗಿ ನೀರು ಹರಿಸುವ ಮೊದಲು ಕೆರೆಗಳ ದುರಸ್ಥಿ ಕಾರ್ಯಕ್ಕೆ ರಾಜ್ಯ ಸರ್ಕಾರ 302 ಕೋಟಿ ಮೊತ್ತ ಕಾಮಗಾರಿಗಳಇಗೆ ಅನುಮೋದನೆ ನೀಡಿದೆ ಎಂದರು.

ರಾಜ್ಯದಲ್ಲಿ ಉತ್ತಮ ಮಳೆ ಬೀಳುತ್ತಿರುವ ಪರಿಣಾಮ ಎಲ್ಲ ಜಲಾಶಯಗಳು ತುಂಬಿದ್ದು, ಹೇಮಾವತಿ ಜಲಾಶಯ ಸಹ ಸಂಪೂರ್ಣ ತುಂಬಿ ಹರಿಯುತ್ತಿರುವುದರಿಂದ ಜಿಲ್ಲೆಯ ಎಲ್ಲ ನಾಲೆಗೆ ಹೇಮಾವತಿ ನದಿ ನೀರು ಹರಿಸಲಾಗುತ್ತಿದೆ. ಮಧುಗಿರಿ ಪಟ್ಟಣದ ಜನತೆಗೆ ಕುಡಿಯುವ ನೀರು ಸರಬರಾಜು ಮಾಡಲು ಮಧುಗಿರಿ ಸಮೀಪದ ಸಿದ್ಧಾಪುರ ಕೆರೆಗೆ ಹೇಮಾವತಿ ಜಲಾಶಯದ ನೀರನ್ನು ಪೈಪ್‌ ಲೈನ್‌ ಮೂಲಕ ಹರಿಸಲಾಗುವುದು.ಈ ನೀರು ಡಿಸೆಂಬರ್‌ ಕೊನೆವರೆಗೂ ಹರಿಯಲಿದೆ ಎಂದರು.

ವಂಸತನರಸಾಪುರ ಸಮೀಪ ಸಿದ್ದಾಪುರ ಕೆರೆಗೆ ಹರಿದು ಬರುವ ಹೇಮಾವತಿ ಪೈಪ್ ಲೈನ್‌ ಅನ್ನು ಕೆಐಡಿಬಿ ಅವರು ಒಡೆದು ಹಾಕಿದ್ದರಿಂದ ಸಿದ್ದಾಪುರ ಕೆರೆಗೆ ಹೇಮೆ ನೀರು ಹರಿಸಲು ಸಾಧ್ಯವಾಗಿರಲಿಲ್ಲ. ಇದರ ಬಗ್ಗೆ ಮಧುಗಿರಿ ಪುರಸೆಭೆ ಅಧಿಕಾರಿಗಳು ಮುತುವರ್ಜಿ ವಹಿಸಿ ದುರಸ್ಥಿ ಕಾರ್ಯ ಮಾಡಿದ್ದರ ಫಲವಾಗಿ ನೀರು ಹರಿದು ಬರುತ್ತಿದೆ. ಪ್ರಸ್ತುತ ಒಂದು ಮೋಟಾರ್‌ನಿಂದ ನೀರು ಬರುತ್ತಿದ್ದು ಅತಿ ಶೀಘ್ರದಲ್ಲೇ ಎರಡು ಮೋಟಾರ್‌ಗಳಿಂದ ನೀರು ಹರಿಸಲಾಗುವುದು ಎಂದರು. 

ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಸೀಲ್ದಾರ್‌ ಸಿಬ್ಗತ್‌ವುಲ್ಲಾ, ತಾಪಂಇಓ ಲಕ್ಷ್ಮಣ, ಪುರಸಭೆ ಮುಖ್ಯಾಧಿಕಾರಿ ಸುರೇಶ್‌, ಸದಸ್ಯರಾದ ಸುಜಾತ ಶಂಕರನಾರಾಯಣ್‌, ಮಂಜುನಾಥ್‌ ಆಚಾರ್‌, ಸಾದಿಕ್‌, ಆಲೀಮ್‌, ಅಯೂಬ್‌, ಮಾಜಿ ಎಂಎಲ್‌ಸಿ ವೇಣುಗೋಪಾಲ್‌, ಮಾಜಿ ಅಧ್ಯಕ್ಷರಾದ ಎಂ.ಕೆ.ನಂಜುಂಡರಾಜು, ಎನ್‌.ಗಂಗಣ್ಣ ಸೇರಿದಂತೆ ಅನೇಖರಿದ್ದರು.