ಸಾರಾಂಶ
ಎಚ್.ಎನ್. ಪ್ರಸಾದ್
ಕನ್ನಡಪ್ರಭ ವಾರ್ತೆ ಹಲಗೂರುಇತ್ತ ನಾಯಿಗಳ ಹೆಚ್ಚಳದಿಂದ ರಸ್ತೆ, ಹೆದ್ದಾರಿಗಳಲ್ಲಿ ಸಂಚರಿಸುವ ಸಾರ್ವಜನಿಕರು, ವಾಹನ ಸವಾರರಿಗೆ ತೀವ್ರ ತೊಂದರೆ ಎದುರಾಗಿದೆ. ಅತ್ತ ಕೋತಿಗಳ ಹಾವಳಿಯಿಂದ ನಿವಾಸಿಗಳು, ವ್ಯಾಪಾರಿಗಳು ನೆಮ್ಮದಿ ಬದುಕು ನಡೆಸಲಾಗದೆ ಆತಂಕ ಎದುರಾಗಿದೆ.
ಹಲಗೂರು ವ್ಯಾಪ್ತಿಯಲ್ಲಿ ಕೋತಿಗಳು, ಬೀದಿಗಳಲ್ಲಿ ನಾಯಿಗಳ ಹಿಂಡು ಹಿಂಡಾಗಿ ಓಡಾಡುವುದರಿಂದ ಸಾರ್ವಜನಿಕರು, ನಿವಾಸಿಗಳು, ವ್ಯಾಪಾರಿಗಳು, ವಾಹನ ಸವಾರರಿಗೆ ನಿತ್ಯ ಒಂದಲ್ಲಾ ಒಂದು ರೀತಿಯಲ್ಲಿ ಸಮಸ್ಯೆ ಉಂಟಾಗುತ್ತಿವೆ.ಬೀದಿ ನಾಯಿಗಳ ಹೆಚ್ಚಳದಿಂದ ಪಟ್ಟಣದಲ್ಲಿ ಸಾರ್ವಜನಿಕರು, ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಆತಂಕದಲ್ಲೆ ರಸ್ತೆಯಲ್ಲಿ ಹೋಗುವ ಸ್ಥಿತಿ ಎದುರಾಗಿದೆ. ಇತ್ತೀಚೆಗೆ ಕಾನೂನಿನ ಪ್ರಕಾರ ನಾಯಿಗಳನ್ನು ಸಾಯಿಸುವಂತಿಲ್ಲ. ಇದರಿಂದ ನಾಯಿಗಳ ಸಂತಾನ ದಿನನಿತ್ಯ ಜಾಸ್ತಿಯಾಗುತ್ತಿದೆ.
ಪಾದಚಾರಿಗಳು, ಮಕ್ಕಳಿಗೆ ನಾಯಿ ಕಡಿದಿರುವ ಉದಾಹರಣೆಗಳು ಇವೆ. ಹೆದ್ದಾರಿ, ರಸ್ತೆಗಳಲ್ಲಿ ದ್ವಿಚಕ್ರ ವಾಹನದಲ್ಲಿ ಸಂಚರಿಸುವ ವೇಳೆ ನಾಯಿ ಅಡ್ಡ ಬಂದು ಸವಾರರು ಬಿದ್ದು ಗಾಯಗೊಂಡ, ಸಾವನ್ನಪ್ಪಿದ ಹಲವು ಪ್ರಕರಣಗಳು ನಡೆದಿವೆ. ನಾಯಿ ಸಂತಾನಹರಣ ಚುಚ್ಚುಮದ್ದು ಇದ್ದರೂ ಗ್ರಾಪಂ ಆಗಲಿ, ಜನಪ್ರತಿನಿಧಿಗಳಾಗಲಿ ನಾಯಿಗಳ ಸಂತಾನ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ.ಮುಂಜಾನೆ ಎದ್ದು ಪತ್ರಿಕೆ ಸರಬರಾಜು ಮಾಡುವ ಹುಡುಗರಿಗೂ ಸಹ ನಾಯಿಗಳ ಕಾಟ ಜಾಸ್ತಿಯಾಗಿದೆ. ಮನೆಗಳಿಗೆ ಪತ್ರಿಕೆ ಹಾಕಲು ಹೋದರೆ ನಾಯಿಗಳು ಬೊಗಳುವುದರಿಂದ ಹುಡುಗರು ಹೆದರಿ ವಾಪಸ್ ಬರುವ ಪರಿಸ್ಥಿತಿ ಎದುರಾಗಿದೆ. ಇದರಿಂದ ಪತ್ರಿಕಾ ಏಜೆಂಟರಿಗೂ ತೊಂದರೆಯಾಗುತ್ತಿದೆ.
ಕೋತಿಗಳ ಹಾವಳಿಯಿಂದ ಹಣ್ಣಿನ ಅಂಗಡಿ, ಹಾಲಿನ ವ್ಯಾಪಾರಿಗಳು ಹಾಗೂ ಅಂಚಿನ ಮನೆಯಲ್ಲಿ ವಾಸ ಮಾಡುವವರು ಆತಂಕದಲ್ಲೆ ಬದುಕುವಂತಾಗಿದೆ. ಕೋತಿಗಳ ಗುಂಪು ಮನೆಯ ಅಂಚುಗಳನ್ನು ತೆಗೆಯುವುದು, ಒಡೆದು ಹಾಕುವುದು ಮತ್ತು ಮನೆ ಒಳ ನುಗ್ಗಿ ತಿಂಡಿ ಪದಾರ್ಥಗಳನ್ನು ಕೊಂಡೊಯ್ಯುವುದನ್ನು ಮಾಡುತ್ತಿವೆ.ಹಣ್ಣಿನ ಅಂಗಡಿಗಳಲ್ಲಿ ಬಂದು ಬಾಳೆಹಣ್ಣು ಮತ್ತು ಇತರ ಪದಾರ್ಥಗಳನ್ನು ತೆಗೆದುಕೊಂಡು ಹೋಗುತ್ತಿವೆ. ಮತ್ತು ಹಾಲು ಸರಬರಾಜು ಮಾಡುವವರು ಮನೆ ಕಿಟಕಿಯಲ್ಲಿ ಅಥವಾ ಅಂಗಳದಲ್ಲಿ ಹಾಲು ಪ್ಯಾಕೆಟ್ ಗಳನ್ನು ಇಟ್ಟು ವ್ಯಾಪಾರ ಮಾಡಲಾಗುತ್ತಿಲ್ಲ. ಮನೆ ಕಿಟಕಿ ಅಥವಾ ಬಾಗಿಲ ಹತ್ತಿರ ಹಾಲಿನ ಪ್ಯಾಕೆಟ್ ಇಟ್ಟು ಬಂದರೆ ಕೋತಿಗಳ ಕೈ ಸೇರುತ್ತಿದೆ. ಇದರಿಂದ ಹಾಲು ಪ್ಯಾಕೆಟ್ ಸರಬರಾಜು ಮಾಡುವವರೆಗೂ ಹಾಗೂ ವ್ಯಾಪಾರ ಮಾಡುವವರೆಗೂ ಸಹ ತೊಂದರೆ ಆಗುತ್ತಿದೆ.
ಕೋತಿಗಳು ಆಂಜನೇಯನ ಸ್ವರೂಪ ಎಂದು ಯಾರೂ ಹೊಡೆಯುವುದಕ್ಕೆ ಹೋಗುತ್ತಿಲ್ಲ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಹ ಕೋತಿಗಳ ಓಡಾಟ ಹೆಚ್ಚಾಗಿದೆ. ಆಕಸ್ಮಿಕವಾಗಿ ವಾಹನಗಳಿಗೆ ಸಿಕ್ಕಿ ಮೃತಪಟ್ಟರೆ ಆ ಕೋತಿಯನ್ನು ಸ್ಥಳೀಯರು ಮಣ್ಣು ಮಾಡಿ ಪೂಜೆ ಪುನಸ್ಕಾರಗಳನ್ನು ನಡೆಸುತ್ತಾರೆ. ಅ ಸ್ಥಳದಲ್ಲಿ ಆಂಜನೇಯ ಸ್ವಾಮಿ ಫೋಟೋವನ್ನು ಪೂಜೆ ಮಾಡುತ್ತಾರೆ. ಆದರೆ, ಕೋತಿಗಳಿಂದಾಗುವ ಸಮಸ್ಯೆಗೆ ಪರಿಹಾರ ಹುಡುಕಲು ಯಾರು ಮುಂದಾಗಿಲ್ಲ.ಕೋತಿಗಳ ಹಾವಳಿಯಿಂದ ಅಂಗಡಿಯಲ್ಲಿ ನೆಮ್ಮದಿಯಿಂದ ವ್ಯಾಪಾರ ಮಾಡಲು ಸಾಧ್ಯವಾಗದೆ ದಿನನಿತ್ಯ ಆತಂಕದಲ್ಲೆ ವ್ಯಾಪಾರ ಮಾಡುವಂತಾಗಿದೆ. ಕೋತಿಗಳು ಗುಂಪು ಗುಂಪಾಗಿ ಬಂದು ಹಣ್ಣುಗಳನ್ನು ಹೊತ್ತೊಯ್ಯುತ್ತಿವೆ. ಇದರಿಂದ ನನಗೆ ಸಾಕಷ್ಟು ನಷ್ಟವಾಗಿದೆ. ಆದಷ್ಟು ಬೇಗ ಕೋತಿಗಳ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು.
- ಎಂ.ವೆಂಕಟೇಶ್, ಹಣ್ಣಿನ ಅಂಗಡಿ ವ್ಯಾಪಾರಿಮನೆ ಮನೆಗಳಿಗೆ ಹಾಲು ಹಾಕಲು ಸಾಧ್ಯವಾಗುತ್ತಿಲ್ಲ. ಮನೆ ಬಳಿ ಹಾಲು ಇಟ್ಟರೆ ಕೋತಿಗಳು ಅದನ್ನು ತೆಗೆದುಕೊಂಡು ಹೋಗುತ್ತಿವೆ. ಇದರಿಂದ ಹಾಲು ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ. ಬೀದಿ ನಾಯಿಗಳು ಕೂಡ ರಸ್ತೆಯಲ್ಲೆ ನಿಂತು ಪಾದಚಾರಿಗಳು, ವಾಹನ ಸವಾರರಿಗೆ ತೊಂದರೆ ನೀಡುತ್ತಿವೆ. ಗ್ರಾಪಂ, ಜನಪ್ರತಿನಿಧಿಗಳು, ಕೋತಿ, ನಾಯಿಗಳ ನಿಯಂತ್ರಣಕ್ಕೆ ಮುಂದಾಗಬೇಕು.
- ಎಚ್.ಪಿ.ನಾಗರಾಜು, ನಂದಿನಿ ಹಾಲು ಸರಬರಾಜುದಾರ