ಸಾರಾಂಶ
ಮದ್ದೂರು ಗ್ರಾಮದ ಸುವರ್ಣಾವತಿ ಹಾದು ಹೋಗಿರುವ ಹಳ್ಳದಲ್ಲಿ ನೀರು ತುಂಬಿದ ಹಿನ್ನೆಲೆ ವಿಧಿ ಇಲ್ಲದೆ ಶವಸಂಸ್ಕಾರಕ್ಕಾಗಿ ಹಳ್ಳ ದಾಟಿ ತೆರಳುತ್ತಿರುವುದು.
ಜಿ.ವೀರಭದ್ರನಾಯಕ
ಕನ್ನಡಪ್ರಭ ವಾರ್ತೆ ಯಳಂದೂರುಈ ಭಾಗದಲ್ಲಿನ ವಾಸಿಗಳು ನಿಧನರಾದರೆ ಅವರ ಶವ ತಂದು ಇಲ್ಲಿನ ಸುವರ್ಣಾವತಿ ಹಳ್ಳ ದಾಟಿದ ಬಳಿಕ ಅಂತ್ಯಸಂಸ್ಕಾರ ನೆರವೇರಿಸಬೇಕು ಮಾತ್ರವಲ್ಲ, ಇಲ್ಲಿನ ರೈತರು ಬೆಳೆದ ಬೆಳೆಯನ್ನು ತಮ್ಮ ಜಮೀನುಗಳಿಂದ ಸಾಗಿಸಲು ಸಹಾ ಈ ಹಳ್ಳದ (ಸುವರ್ಣಾವತಿ ನದಿ) ನೀರನ್ನು ಹಾದು ಹೋಗಬೇಕಿದೆ.
ಹೌದು, ಕೊಳ್ಳೇಗಾಲ ಕ್ಷೇತ್ರ ವ್ಯಾಪ್ತಿಯ ಯಳಂದೂರು ತಾಲೂಕಿನ ಮದ್ದೂರು ಗ್ರಾಪಂನಲ್ಲಿ ಈ ಸಮಸ್ಯೆ ಅನೇಕ ದಶಕಗಳಿಂದಲೂ ಇದೆ. ಸುವರ್ಣಾವತಿಯ ನದಿ ನೀರು ಹಳ್ಳದ ಮೂಲಕ ಈ ಭಾಗದಲ್ಲಿ ಹಾದು ಹೋಗಿದ್ದು, ಈ ನದಿಗೆ ಹೊಂದಿಕೊಂಡಂತೆ ಅಕ್ಕ ಪಕ್ಕದ ರೈತರ ನೂರಾರು ಎಕರೆ ಜಮೀನುಗಳಿವೆ. ಕೆಲ ರೈತರಂತೂ ಈ ಜಮೀನಿನ ಬೆಳೆಯನ್ನೆ ನಂಬಿ ಜೀವನ ಕಟ್ಟಿಕೊಳ್ಳುತ್ತಿರುವುದು ಸಹಾ ವಾಸ್ತವ ಸಂಗತಿ. ಇಲ್ಲಿನ ರೈತರು ಹೂ, ತರಕಾರಿ, ಕಬ್ಬು, ಭತ್ತ ಇನ್ನಿತರೆ ಬೆಳೆಗಳನ್ನು ಬೆಳೆಯುತ್ತಾರೆ, ಆದರೆ ಬೆಳೆದ ಬೆಳೆ ಸಾಗಣೆಗೆ ರೈತರು ಹೈರಾಣಾಗುತ್ತಿದ್ದಾರೆ. ಕಾರಣ ಸುವರ್ಣಾವತಿ ನದಿಯ ಕಾಲುವೆ ಅಡ್ಡ ಇರುವುದು, ಈ ಕಾಲುವೆ ದೊಡ್ಡ ಹಳ್ಳದಂತೆ ಹರಿಯುತ್ತಿದ್ದು, ಬೇಸಿಗೆಯಲ್ಲಿ ಹೇಗೊ ದಾಟಬಹುದು, ಮಳೆಗಾಲದಲ್ಲಂತೂ ಇಲ್ಲಿನ ರೈತರ ಪರಿಸ್ಥಿತಿ ಮಾದಪ್ಪನಿಗೆ ಅರಿವಾಗಬೇಕು. ಕೆಲ ರೈತರು ಕಬ್ಬು ಬೆಳೆದು ಸಕಾಲದಲ್ಲಿ ಕಟಾವು ಮಾಡಲಾಗದೆ, ಇತ್ತ ಹಳ್ಳದ ನೀರಿನಲ್ಲಿ ಕಬ್ಬು ಸಾಗಿಸಲು ಶಕ್ತಿ ಇಲ್ಲದೆ ಸಂಕಷ್ಟ ಅನುಭವಿಸಿದ ಅನೇಕ ನಿದರ್ಶನಗಳಿವೆ.ಹಳ್ಳ ದಾಟಿಯೇ ಶವ ಸಂಸ್ಕಾರ ಮಾಡಬೇಕು:
ಗ್ರಾಮದಲ್ಲಿ ಕಳೆದ 2 ದಿನಗಳ ಹಿಂದೆ ಸವಿತಾ ಸಮಾಜದ ಮುಖಂಡರಾದ ಮಹದೇವಶೆಟ್ಟಿ ಅನಾರೋಗ್ಯದ ಹಿನ್ನೆಲೆ ನಿಧನರಾದರು. ಈ ಭಾಗದಲ್ಲಿ ಶವ ಸಂಸ್ಕಾರಕ್ಕಾಗಿ ಸವಿತಾ ಸಮಾಜ ಜಮೀನು ಬಿಟ್ಟಿರುವ ಕಾರಣ, ಜಮೀನಿನಲ್ಲೆ ಅಂತ್ಯಕ್ರಿಯೆಗಾಗಿ ಸುವರ್ಣಾವತಿಯ ಹಳ್ಳದ ನೀರನ್ನು ದಾಟಿಯೇ ಶವಸಂಸ್ಕಾರ ನೆರವೇರಿಸಿದ್ದಾರೆ. ಶವ ಸಂಸ್ಕಾರಕ್ಕೆ ಆಗಮನಿಸಿದ ಮುಖಂಡರು, ಮಹಿಳೆಯರು ವಿಧಿ ಇಲ್ಲದೆ ನೀರನ್ನು ತ್ರಾಸದಿಂದ ಹಾದುಕೊಂಡು ಹೋಗಿ ಶವಸಂಸ್ಕಾರ ನೆರವೇರಿಸಿ ಹಿಂತಿರುಗಿದ್ದಾರೆ. ಈ ಕಥೆ ಇದೇ ಮೊದಲೇನಲ್ಲ, ಅನೇಕ ಬಾರಿ ಈ ರೀತಿ ಜರುಗಿದ ನಿದರ್ಶನಗಳಿವೆ. ಬೇಸಿಗೆ ಕಾಲದಲ್ಲೂ ಹಳ್ಳದಲ್ಲಿ ಹೆಚ್ಚು ನೀರಿದ್ದ ಕಾರಣ ತ್ರಾಸದಿಂದ ಸಾಗಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಇನ್ನು ಮಳೆಗಾದದಲ್ಲಂತೂ ಇಲ್ಲಿನ ವಾಸಿಗಳ ಗೋಳು ಹೇಳತಿರದಾಗಿದೆ. ಹಳ್ಳವೇ ತುಂಬಿದ ಕಾರಣ ಅನ್ಯ ರೈತರು, ಸಮಾಜದ ಮುಖಂಡರ ಸಹಕಾರದೊಂದಿಗೆ ಬೇರೆಡೆ ಅಂತ್ಯಕ್ರಿಯೆ ನಡೆಸಿದ ಉದಾಹರಣೆಗಳು ಇವೆ ಎಂದು ಹೇಳಲಾಗಿದೆ.ಹಲವು ದಶಕಗಳ ಬೇಡಿಕೆಗೆ ಶಾಸಕರು ಸ್ಪಂದಿಸಬೇಕಿದೆ:
ಈ ಭಾಗದಲ್ಲಿ ನೂರಾರು ಎಕರೆ ಜಮೀನು ಹೊಂದಿರುವ ರೈತರು ತಮ್ಮ ಹಲವು ದಶಕಗಳ ಬೇಡಿಕೆಯನ್ನು ಅನೇಕ ಜನಪ್ರತಿನಿಧಿಗಳು, ಸರ್ಕಾರಕ್ಕೆ ಸಲ್ಲಿಸುತ್ತಲೆ ಬಂದಿದ್ದಾರೆ ಸರ್ಕಾರಗಳು ಬದಲಾಗುತ್ತಲೆ ಇವೆ, ಆದರೆ ಇಲ್ಲಿನ ಜನರ, ರೈತರ ಪರಿಸ್ಥಿತಿ ಬದಲಾಗಿಲ್ಲ, ಮನವಿ ಪಡೆದ ಸರ್ಕಾರಗಳು, ಜನಪ್ರತಿನಿಧಿಗಳು ತಮ್ಮ ಇಚ್ಛಾಶಕ್ತಿ ಪ್ರದರ್ಶಿಸದ ಕಾರಣ ಇಲ್ಲಿನ ರೈತರ ಬೇಡಿಕೆಗಳಿಗೆ ಮನ್ನಣೆ ಸಿಕ್ಕಿಲ್ಲ, ಈ ಬಾರಿ ನಮ್ಮ ಸಮಸ್ಯೆಗೆ ಶಾಸಕ ಎ.ಆರ್. ಕೃಷ್ಣಮೂರ್ತಿ ಸ್ಪಂದಿಸುತ್ತಾರೆ ಎಂಬ ಭರವಸೆ ಮೇರೆಗೆ ರೈತರು ಮನವಿ ಸಲ್ಲಿಸಿದ್ದಾರೆ. ಸುವರ್ಣಾವತಿ ಹರಿಯುವ ದೊಡ್ಡ ಹಳ್ಳಕೊಂದು ಸೇತುವೆ ಬೇಕು, ಸೇತುವೆ ನಿರ್ಮಾಣವಾದರೆ ನಮ್ಮಗಳ ಶಾಶ್ವತ ಸಮಸ್ಯೆ ಬಗೆಹರಿಯಲಿದೆ ಎನ್ನುತ್ತಾರೆ ಇಲ್ಲಿನ ರೈತರು.ನೀರು ಕಡಿಮೆಯಾದರೆ ಹಳ್ಳದ ಮಧ್ಯ ಎರಡು ಬೊಂಬಿಟ್ಟು ಸಂಚಾರ:
ಇಲ್ಲಿನ ನಿವಾಸಿಗಳು ತಮ್ಮ ಜಮೀನಿಗೆ ತೆರಳಲೇಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಈ ಹಳ್ಳದಲ್ಲಿನ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಹಳ್ಳದ ಕೆಳ ಭಾಗಕ್ಕೆ ಎರಡು ಬಿದಿರು ಬೊಂಬುಗಳನ್ನು ಅಡ್ಡಲಾಗಿಟ್ಟು ಅದರ ಮೇಲೆ ನಡೆಯುತ್ತಿದ್ದಾರೆ. ಕೆಲವು ಅಧಿಕಾರಿಗಳು ಸಹಾ ಈ ಬಿದಿರು ಬೊಂಬಿನ ಮೇಲೆಯೆ ನಡೆದು ರೈತರ ಬೆಳೆ ಹಾನಿ ಪರಿಹಾರ, ಸೇತುವೆ ನಿರ್ಮಾಣ ಸಮಸ್ಯೆ ನಿವಾರಣೆಗೂ ಸಹಾ ಭೇಟಿ ನೀಡಿದ್ದಾಗಿದೆ. ಆದರೆ ಕಾರ್ಯಗತವಾಗಬೇಕಿದೆ. ಇನ್ನಾದರೂ ಈ ಭಾಗದ ಜನರ ಸಮಸ್ಯೆಗೆ ಸರ್ಕಾರ ಹಾಗೂ ಶಾಸಕ ಕೃಷ್ಣಮೂರ್ತಿ ಸ್ಪಂದಿಸುವಂತಾಗಬೇಕಿದೆ.ನಮ್ಮ ಜನಾಂಗದ ಮುಖಂಡರೊಬ್ಬರು ನಿನ್ನೆ ಅನಾರೋಗ್ಯದಿಂದ ತೀರಿಕೊಂಡರು. ಸಂಸ್ಕಾರಕ್ಕೆ ಇಲ್ಲೆ ಜಮೀನು ಇರುವ ಕಾರಣ, ನಾವು ಈ ಹಳ್ಳ ದಾಟಿ ಬಂದು ತ್ರಾಸದಿಂದ ಶವಸಂಸ್ಕಾರ ನಡೆಸಿದ್ದೇವೆ. ಶಾಸಕ ಕೃಷ್ಣಮೂರ್ತಿ ಅವರಿಗೂ ಸಹಾ ಈ ಹಳ್ಳ ದಾಟಿ ಸರಾಗವಾಗಿ ಸಾಗಲು, ರೈತರ ಅನುಕೂಲಕ್ಕಾಗಿ ಸೇತುವೆ ಬೇಕು ಎಂದು ಮನವಿ ಸಲ್ಲಿಸಿದ್ದೇವೆ, ಅವರು ಈಡೇರಿಸುವ ಭರವಸೆ ಇದೆ.
-ರಾಮಶೆಟ್ಟಿ, ಸವಿತಾ ಸಮಾಜದ ಮುಖಂಡನಮ್ಮ ಜಮೀನಿನಲ್ಲಿ ಬೆಳೆದ ಕಬ್ಬು ಕಟಾವಿಗೆ ಬಂದಿದ್ದರೂ ಸಹಾ ಸಾಗಾಣಿಕೆಗೆ ಅವಕಾಶವಿಲ್ಲದ ಕಾರಣ ಮತ್ತು ಹಳ್ಳದಲ್ಲಿ ಹೆಚ್ಚು ನೀರಿದ್ದ ಕಾರಣ 24 ತಿಂಗಳ ನಂತರ ನಾನು ಕಬ್ಬು ಕಟಾವು ಮಾಡಬೇಕಾಯಿತು. ಈ ಭಾಗದಲ್ಲಿ ನೂರಾರು ಎಕರೆ ರೈತರ ಜಮೀನುಗಳಿವೆ. ಈ ಹಳ್ಳದ ಮಧ್ಯೆ ಸೇತುವೆ ನಿರ್ಮಾಣವಾದರೆ ಈ ಭಾಗದ ರೈತರೆಲ್ಲರಿಗೂ ಅನುಕೂಲವಾಗಲಿದ್ದು ಸರ್ಕಾರ ಈ ಬಗ್ಗೆ ಸ್ಪಂದಿಸಬೇಕು.-ಪುರುಷೋತ್ತಮ್, ಗ್ರಾಪಂ ಮಾಜಿ ಸದಸ್ಯ, ಮದ್ದೂರು