ಸಾರಾಂಶ
ಬೆಳಗಾವಿ: ಬೆಳಗಾವಿಯಲ್ಲಿ ಘೋರ ದುರಂತ ಸಂಭವಿಸಿದ್ದು, ವಿದ್ಯುತ್ ತಂತಿ ರಿಪೇರಿ ಮಾಡುವ ವೇಳೆ ಶಾಕ್ ಹೊಡೆದು ಹೆಸ್ಕಾಂ (ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ) ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಯರಗಟ್ಟಿ ತಾಲೂಕಿನ ಮುಗಳಿಹಾಳ ಎಂಬ ಗ್ರಾಮದಲ್ಲಿ ನಡೆದಿದೆ. ಅಮಾನವೀಯ ಸಂಗತಿಯೆಂದರೆ 5 ಗಂಟೆಗಳ ಕಾಲ ಹೆಸ್ಕಾಂ ಸಿಬ್ಬಂದಿಯ ಮೃತದೇಹ ವಿದ್ಯುತ್ ಕಂಬದಲ್ಲಿ ನೇತಾಡುತ್ತಿದ್ದರೂ ಅಧಿಕಾರಿಗಳಾರು ಇತ್ತ ಸುಳಿದಿರಲಿಲ್ಲ. ಈ ಬಗ್ಗೆ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ.
ಮಾರುತಿ ಅವಲಿ (25) ಮೃತಪಟ್ಟ ಲೈನ್ ಮ್ಯಾನ್. ಮಂಗಳವಾರ ಇವರು ವಿದ್ಯುತ್ ಕಂಬವನ್ನೇರಿ ದುರಸ್ತಿ ಕೆಲಸದಲ್ಲಿ ನಿರತರಾಗಿದ್ದರು. ದುರಸ್ತಿ ಮಾಡುತ್ತಿದ್ದಾಗಲೇ ಏಕಾಏಕಿ ವಿದ್ಯುತ್ ಪ್ರವಹಿಸಿದ್ದು, ಲೈನ್‌ಮ್ಯಾನ್ ಅಲ್ಲಿಯೇ ಅಸುನೀಗಿದ್ದಾರೆ.
ಇವರ ಮೃತದೇಹ ವಿದ್ಯುತ್ ಕಂಬದಲ್ಲಿ ನೇತಾಡುತ್ತಿತ್ತು. ಇವರ ಮೃತದೇಹ ಸುಮಾರು 5 ಗಂಟೆಗಳ ಕಾಲ ನೇತಾಡುತ್ತಿದ್ದರೂ, ಹೆಸ್ಕಾಂನ ಯಾವೊಬ್ಬ ಸಿಬ್ಬಂದಿಯೂ ಸ್ಥಳಕ್ಕೆ ಬರಲಿಲ್ಲ.
ಇದಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸವದತ್ತಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.