ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಜನ್ಮದಿನೋತ್ಸವದ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಹಾಗೂ ಕಿಡ್ನಿ ತಪಾಸಣೆ, ಸಲಹಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿ, ಹೆಂಡದ ಅಂಗಡಿಗೆ ಹೋಗಲು ಧೈರ್ಯವಿರುವವರು ಆಸ್ಪತ್ರೆ ಕಡೆಗೆ ಹೋಗಲು ಹಿಂಜರಿಯುತ್ತಿರುವುದು ವಿಷಾದಕರ ಸಂಗತಿ. ಆರೋಗ್ಯವನ್ನು ನಿರ್ಲಕ್ಷ್ಯ ಮಾಡಿದರೆ ಮುಂದೆ ದೊಡ್ಡ ಸಮಸ್ಯೆ ಎದುರಾಗುತ್ತದೆ. ಸಮಯಕ್ಕೆ ಸರಿಯಾಗಿ ವೈದ್ಯರ ಸಲಹೆ ಪಡೆದು ಚಿಕಿತ್ಸೆ ಪಡೆದರೆ ಅನೇಕ ಗಂಭೀರ ಕಾಯಿಲೆಗಳನ್ನು ತಪ್ಪಿಸಬಹುದು ಎಂದು ಅವರು ಸಾರ್ವಜನಿಕರಿಗೆ ಅರಿವು ಮೂಡಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಆರೋಗ್ಯದಲ್ಲಿ ಸಮಸ್ಯೆ ಇದೆ ಎಂಬುದು ಗೊತ್ತಿದ್ದರೂ ಆಸ್ಪತ್ರೆಗೆ ಹೋಗಲು ಹಿಂಜರಿಯುವ ಮನೋಭಾವವನ್ನು ಜನರು ಬದಲಿಸಿಕೊಳ್ಳಬೇಕು. ಅನಾರೋಗ್ಯವನ್ನು ಮರೆಮಾಚಿಕೊಂಡು ನರಳುವುದಕ್ಕಿಂತ ಆರಂಭಿಕ ಹಂತದಲ್ಲೇ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುವುದೇ ಜಾಣತನ ಎಂದು ಶ್ರೀ ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.ನಗರದ ಎಂ.ಜಿ. ರಸ್ತೆಯ ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಪರಮಪೂಜ್ಯ ಜಗದ್ಗುರು ಪದ್ಮಭೂಷಣ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಜನ್ಮದಿನೋತ್ಸವದ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಹಾಗೂ ಕಿಡ್ನಿ ತಪಾಸಣೆ, ಸಲಹಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿ, ಹೆಂಡದ ಅಂಗಡಿಗೆ ಹೋಗಲು ಧೈರ್ಯವಿರುವವರು ಆಸ್ಪತ್ರೆ ಕಡೆಗೆ ಹೋಗಲು ಹಿಂಜರಿಯುತ್ತಿರುವುದು ವಿಷಾದಕರ ಸಂಗತಿ. ಆರೋಗ್ಯವನ್ನು ನಿರ್ಲಕ್ಷ್ಯ ಮಾಡಿದರೆ ಮುಂದೆ ದೊಡ್ಡ ಸಮಸ್ಯೆ ಎದುರಾಗುತ್ತದೆ. ಸಮಯಕ್ಕೆ ಸರಿಯಾಗಿ ವೈದ್ಯರ ಸಲಹೆ ಪಡೆದು ಚಿಕಿತ್ಸೆ ಪಡೆದರೆ ಅನೇಕ ಗಂಭೀರ ಕಾಯಿಲೆಗಳನ್ನು ತಪ್ಪಿಸಬಹುದು ಎಂದು ಅವರು ಸಾರ್ವಜನಿಕರಿಗೆ ಅರಿವು ಮೂಡಿಸಿದರು.ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ೮೧ನೇ ಜನ್ಮೋತ್ಸವ ಹಾಗೂ ೧೩ನೇ ಸಂಸ್ಕರಣೆಯ ಅಂಗವಾಗಿ ಈ ಶಿಬಿರ ಆಯೋಜಿಸಲಾಗಿದ್ದು, ಆದಿಚುಂಚನಗಿರಿ ಸಂಸ್ಥೆಗಳು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಮಾಡುತ್ತಿರುವ ಸೇವೆ ಅನನ್ಯವಾಗಿದೆ ಎಂದು ಶ್ಲಾಘಿಸಿದರು. ಆದಿಚುಂಚನಗಿರಿ ಸಂಸ್ಥೆಗಳಡಿ ಇಂದು ೧.೬೫ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಅತ್ಯಾಧುನಿಕ ಬಿಜಿಎಸ್ ಆಸ್ಪತ್ರೆಗಳನ್ನು ಸ್ಥಾಪಿಸಲಾಗಿದೆ. ಒಕ್ಕಲಿಗರ ಸಂಘದ ಮೂಲಕ ಶೈಕ್ಷಣಿಕ ಪ್ರೋತ್ಸಾಹ, ಪ್ರತಿಭಾ ಪುರಸ್ಕಾರ, ವೈದ್ಯಕೀಯ ಶಿಕ್ಷಣ ವಿಸ್ತರಣೆ ಸೇರಿದಂತೆ ಹಲವು ಸೇವಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಲಾಯಿತು. ಹಾಸನದಲ್ಲಿ ಹೊಸ ಶಿಕ್ಷಣ ಸಂಸ್ಥೆ ಸ್ಥಾಪನೆಗೂ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.ಶಾಸಕ ಸ್ವರೂಪ್ ಪ್ರಕಾಶ್ ಮಾತನಾಡಿ, ಆದಿಚುಂಚನಗಿರಿ ಮಠವು ಕೇವಲ ಧಾರ್ಮಿಕ ಕೇಂದ್ರವಲ್ಲ, ಸಾಮಾಜಿಕ ಹಾಗೂ ಆರೋಗ್ಯ ಸೇವೆಗಳ ಮಹತ್ತರ ಕೇಂದ್ರವಾಗಿದೆ ಎಂದರು. ಪ್ರತಿವರ್ಷ ಬಡವರು, ರೈತರು ಮತ್ತು ಸಾಮಾನ್ಯ ಜನರಿಗೆ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಈ ಬಾರಿ ನಿಮ್ಹಾನ್ಸ್, ಕಿಮ್ಸ್, ಬಿಜಿಎಸ್ ಸೇರಿದಂತೆ ಪ್ರತಿಷ್ಠಿತ ಆಸ್ಪತ್ರೆಗಳ ಖ್ಯಾತ ವೈದ್ಯರು ಸೇವೆ ಸಲ್ಲಿಸುತ್ತಿರುವುದು ಹಾಸನ ಜಿಲ್ಲೆಗೆ ಹೆಮ್ಮೆಯ ವಿಷಯ ಎಂದು ಹೇಳಿದರು. ಜನರು ಇಂತಹ ಅವಕಾಶಗಳನ್ನು ಕಳೆದುಕೊಳ್ಳದೆ ಸಂಪೂರ್ಣ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು. ಉಚಿತ ಆರೋಗ್ಯ ಶಿಬಿರದ ಬಗ್ಗೆ ನಗರವಲ್ಲದೇ ಹಳ್ಳಿ ಹಳ್ಳಿಯಲ್ಲಿ ಜಾಗೃತಿ ಮೂಡಿಸಿದ ಪ್ರಚಾರದ ಹಿನ್ನಲೆಯಲ್ಲಿ ಶಿಬಿರದ ಸಾವಿರಾರು ನಾಗರಿಕರು ಆರೋಗ್ಯ ತಪಾಸಣೆ, ರಕ್ತದಾನ ಹಾಗೂ ವಿವಿಧ ವೈದ್ಯಕೀಯ ಸಲಹೆಗಳನ್ನು ಪಡೆದುಕೊಂಡು ತೃಪ್ತಿ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಗಂಗಾಧರ್, ನಿರ್ದೇಶಕ ರಘುಗೌಡ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ. ಎಲ್. ಮುದ್ದೇಗೌಡ, ಎಚ್. ಪಿ. ಮೋಹನ್, ಗಂಗಣ್ಣ, ಬಾಗೂರು, ಲಕ್ಷಿಕಾಂತ್, ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷ ಹೆಚ್.ಬಿ. ಮದನ್ ಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.