ತಿರುಪತಿ ಮಾದರಿಯಲ್ಲಿ ಹೈಟೆಕ್ ದಾಸೋಹ ಕಟ್ಟಡ ನಿರ್ಮಾಣ

| Published : Jan 20 2024, 02:00 AM IST

ತಿರುಪತಿ ಮಾದರಿಯಲ್ಲಿ ಹೈಟೆಕ್ ದಾಸೋಹ ಕಟ್ಟಡ ನಿರ್ಮಾಣ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತರಿಗೆ ಅನುಕೂಲ ಕಲ್ಪಿಸಲು ತಿರುಪತಿ ಮಾದರಿಯಲ್ಲಿ ಹೈಟೆಕ್ ದಾಸೋಹ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ಪ್ರಾಧಿಕಾರದ ಉಪಾಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ .ವೆಂಕಟೇಶ್ ರವರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹನೂರು

ರಾಜ್ಯದ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತರಿಗೆ ಅನುಕೂಲ ಕಲ್ಪಿಸಲು ತಿರುಪತಿ ಮಾದರಿಯಲ್ಲಿ ಹೈಟೆಕ್ ದಾಸೋಹ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ಪ್ರಾಧಿಕಾರದ ಉಪಾಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ .ವೆಂಕಟೇಶ್ ರವರು ತಿಳಿಸಿದರು. ಬೆಂಗಳೂರಿನ ವಿಕಾಸಸೌಧದ ಕಚೇರಿ ಆವರಣದಲ್ಲಿ ನಡೆದ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿ ಸಚಿವರು,ಮಲೆ ಮಹದೇಶ್ವರ ಬೆಟ್ಟಕ್ಕೆ ಇತ್ತೀಚಿನ ದಿನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪಾದಯಾತ್ರಿಕರು ಹಾಗೂ ಭಕ್ತರು ಆಗಮಿಸುತ್ತಿದ್ದಾರೆ. ಇವರಿಗೆ ವಿಶ್ರಾಂತಿ ಪಡೆಯಲು 9.5 ಕೋಟಿ ವೆಚ್ಚದಲ್ಲಿ ತಾಳಬೆಟ್ಟ ಹಾಗೂ ಹಳೆ ದಾಸೋಹ ಮುಂಭಾಗ ಶೆಲ್ಟರ್ ನಿರ್ಮಾಣ ಮಾಡಲಾಗುವುದು ಎಂದರು.

ಮಲೆ ಮಾದೇಶ್ವರ ಬೆಟ್ಟದ ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಿರುವ ಒಳಚರಂಡಿ ಕಾಮಗಾರಿಗೆ ಸರ್ಕಾರದ ವತಿಯಿಂದ 13.5 ಕೋಟಿ ಅನುದಾನ ಬಿಡುಗಡೆಯಾಗಲು ಬೇಕಿತ್ತು. ಈ ಬಗ್ಗೆ ಸಚಿವರು ಆರ್ಥಿಕ ಇಲಾಖೆಯ ಉಪ ಕಾರ್ಯದರ್ಶಿಗಳಿಗೆ ಹಾಗೂ ಒಳಚರಂಡಿ ಮಂಡಳಿಯವರಿಗೆ ಶೀಘ್ರವೇ ಅನುದಾನ ನೀಡುವಂತೆ ಸೂಚನೆ ನೀಡಿದರು. ತಾಳಬೆಟ್ಟದಿಂದ ಕತ್ತಿ ಪವಾಡದವರೆಗೆ ನಿರ್ಮಾಣ ಮಾಡುತ್ತಿರುವ ಮೆಟ್ಟಿಲು ಕಾಮಗಾರಿ ಅಪೂರ್ಣಗೊಂಡಿದ್ದು, ಶೀಘ್ರವೇ ಕಾಮಗಾರಿ ಮುಗಿಸುವಂತೆ ಸೂಚನೆ ನೀಡಿ, ಮಾರ್ಗ ಮಧ್ಯದಲ್ಲಿ ಶೌಚಾಲಯ ಹಾಗೂ ತಂಗುದಾಣ ಮಾಡಲು ಅರಣ್ಯ ಇಲಾಖೆಯವರು ತೊಂದರೆ ನೀಡಬಾರದು ಎಂದು ಉಪ ಸಂರಕ್ಷಣಾಧಿಕಾರಿ ಚಂದ್ರಶೇಖರ್ ಪಾಟೀಲ್ ಅವರಿಗೆ ಸೂಚನೆ ನೀಡಿದರು.

ಇನ್ನು ಎಂಎಸ್ಐಎಲ್ ವತಿಯಿಂದ ಒಂದು ಮೆಗಾ ವ್ಯಾಟ್ ವಿದ್ಯುತ್‌ ಉತ್ಪಾದಿಸಲು ಸೋಲಾರ್ ಪ್ರಾಜೆಕ್ಟ್ ಮಾಡಲಾಗಿದ್ದು, ಇನ್ನು 3 ತಿಂಗಳೊಳಗೆ ಈ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದರು.ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಮಾತನಾಡಿ, ಆರಂಬಾಡಿ ಗ್ರಾಮದಲ್ಲಿ ಜುಂಜೇಗೌಡರು ನಿರ್ಮಾಣ ಮಾಡಿರುವ ರಂಗಸ್ವಾಮಿ ದೇವಾಲಯ ಅಳಿವಿನಂಚಿನಲ್ಲಿರುವುದರಿಂದ ಪುರಾತತ್ವ ಇಲಾಖೆ ವತಿಯಿಂದ ಜೀರ್ಣೋದ್ಧಾರ ಮಾಡಲು ಮುಂದಿನ ಬಜೆಟ್ ನಲ್ಲಿ 1 ಕೋಟಿ ನೀಡುವುದಾಗಿ ತಿಳಿಸಿದರು. ಈ ಕಾಮಗಾರಿಗೆ 3 ಕೋಟಿಗೂ ಹೆಚ್ಚು ಹಣ ಬೇಕಾಗಿರುವುದರಿಂದ ಹೆಚ್ಚುವರಿ ಹಣವನ್ನು ಪ್ರಾಧಿಕಾರದಿಂದ ನೀಡಿ ದೇವಾಲಯ ನಿರ್ಮಾಣ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.

108 ಮಲೆ ಮಹದೇಶ್ವರ ಪ್ರತಿಮೆಯ ಒಳ ಆವರಣದಲ್ಲಿ ಲೀಲೆಗಳ ಕಾಮಗಾರಿ ಪ್ರಗತಿಯಲ್ಲಿದ್ದು ಒಂದು ತಿಂಗಳೊಳಗೆ ಪೂರ್ಣಗೊಳಿಸಿ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕು, ಇನ್ನು ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಹದಿಮೂರು ಕಾಮಗಾರಿಗಳಾದ ರಸ್ತೆ, ಶೌಚಾಲಯ ತಡೆಗೋಡೆ ಸೇರಿದಂತೆ ವಿನೂತನ ಮಾದರಿಯಲ್ಲಿ ದೀಪಾಲಂಕರದ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಇದಲ್ಲದೆ ತಾಳುಬೆಟ್ಟದ ಸಮೀಪವಿರುವ ಕಂಬದ ಬೋಳಿ ದೇವಾಲಯ ಹಾಗೂ ಎರಡು ದೇವಾಲಯಗಳನ್ನು ಪ್ರಾಧಿಕಾರದ ವ್ಯಾಪ್ತಿಗೆ ಸೇರಿಸಿಕೊಳ್ಳಲು ಒಪ್ಪಿಗೆ ನೀಡಲಾಗಿದೆ ಎಂದರು. ಸಭೆಯಲ್ಲಿ ಶಾಸಕರುಗಳಾದ ಎ ಆರ್ ಕೃಷ್ಣಮೂರ್ತಿ, ಮಧು ಜಿ ಮಾದೇಗೌಡ, ಡಾ. ತಿಮ್ಮಯ್ಯ, ಮಂಜೇಗೌಡ, ಚಾಮರಾಜನಗರ ಉಸ್ತುವಾರಿ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಮುಜರಾಯಿ ಇಲಾಖೆಯ ಆಯುಕ್ತರು ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಬಸವರಾಜೇಂದ್ರ, ಜಿಲ್ಲಾಧಿಕಾರಿ ಶಿಲ್ಪಾನಾಗ್‌, ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ, ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.