ಬೆಂಗಳೂರು : ತಾಪಮಾನ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಶಾಖಾಘಾತ (ಸನ್‌ ಸ್ಟ್ರೋಕ್‌) ಪ್ರಕರಣಗಳ ನಿರ್ವಹಣೆಗೆ ಜು.31ರವರೆಗೆ ಪ್ರತಿ ಜಿಲ್ಲಾಸ್ಪತ್ರೆಯಲ್ಲಿ 10 ಬೆಡ್, ತಾಲೂಕು ಆಸ್ಪತ್ರೆಗಳಲ್ಲಿ 5 ಬೆಡ್‌ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 2 ಬೆಡ್‌ನ ನಿರ್ವಹಣಾ ಕೊಠಡಿ ಮೀಸಲಿಡುವಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ಬೇಸಿಗೆಯಿಂದಾಗಿ ಅತಿಯಾದ ಶಾಖ

ಬೇಸಿಗೆಯಿಂದಾಗಿ ಅತಿಯಾದ ಶಾಖ, ಬಿಸಿ ಗಾಳಿಯಿಂದಾಗಿ ಸನ್‌ ಸ್ಟ್ರೋಕ್‌ನಂತಹ ಅನಾರೋಗ್ಯ ಸಮಸ್ಯೆ ಉಂಟಾಗುತ್ತಿವೆ. ಇವುಗಳನ್ನು ಸೂಕ್ತವಾಗಿ ನಿರ್ವಹಿಸಿ ಮುಂದಿನ ಅಪಾಯ ಹಾಗೂ ಮರಣ ತಪ್ಪಿಸಲು ಎಲ್ಲಾ ಹಂತದ ಆರೋಗ್ಯ ಸಂಸ್ಥೆಗಳು ಮುನ್ನೆಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

ಸಿಬ್ಬಂದಿಗೆ ತರಬೇತಿ ನೀಡಬೇಕು

ಇದರಲ್ಲಿ ಬೆಡ್‌ಗಳ ಮೀಸಲಿಡುವ ಜತೆಗೆ ಶಾಖ ಆಧಾರಿತ ಅನಾರೋಗ್ಯ (ಎಚ್‌ಆರ್‌ಐ) ನಿರ್ವಹಣೆ ಕುರಿತು ಎಲ್ಲಾ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿಗೆ ತರಬೇತಿ ನೀಡಬೇಕು. ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ಒಆರ್‌ಎಸ್‌ ಕಾರ್ನರ್‌ ಸ್ಥಾಪಿಸಬೇಕು. ಆರೋಗ್ಯ ಸಂಸ್ಥೆಗಳಲ್ಲಿ ಹೀಟ್‌ ಸ್ಟ್ರೋಕ್‌ ನಿರ್ವಹಣೆಗೆ ಕೊಠಡಿಗಳನ್ನು ಸಿದ್ಧಪಡಿಸಿ ಫ್ಯಾನ್‌, ಐಸ್‌ ಕ್ಯೂಬ್ಸ್‌, ಥರ್ಮಾಮೀಟರ್‌ ಸೇರಿ ಅಗತ್ಯ ಸೌಲಭ್ಯ ಒದಗಿಸಬೇಕು. 


ಎಚ್‌ಆರ್‌ಐಗೆ ಸಂಬಂಧಿಸಿದ ದೈನಂದಿನ ವರದಿಯನ್ನು ಎಲ್ಲಾ ಹಂತದ ಆರೋಗ್ಯ ಸಂಸ್ಥೆಗಳು ಐಎಚ್‌ಐಪಿಗೆ ಸಲ್ಲಿಸಬೇಕು. ಈ ಎಲ್ಲಾ ಕ್ರಮ ಕೈಗೊಂಡು ಕಾರ್ಯಗತಗೊಳಿಸುವ ಜತೆಗೆ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಪ್ರಕರಣಗಳನ್ನು ಗುರುತಿಸಿ ಚಿಕಿತ್ಸೆ ನೀಡಲು ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.