ಸಚಿವ ಸಂಪುಟ ವಿಸ್ತರಣೆಯಲ್ಲಿ ಮಂತ್ರಿ ಸ್ಥಾನದಿಂದ ವಂಚಿತರಾದ ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಸೇರಿದಂತೆ ಹಲವು ಶಾಸಕರಲ್ಲಿ ಭುಗಿಲೆದ್ದಿರುವ ಅಸಮಾಧಾನವನ್ನು ಪಕ್ಷದ ಹೈಕಮಾಂಡ್ ಶೀಘ್ರ ಬಗೆಹರಿಸಲಿದೆ. ಸಚಿವ ಸಂಪುಟದಲ್ಲಿ ಮಹಿಳೆಯರ ಕೋಟಾದಲ್ಲಿ ಯಾರನ್ನು ಮಂತ್ರಿ ಮಾಡಬೇಕು ಎನ್ನುವುದು ತೀರ್ಮಾನವಾಗಿಲ್ಲ.
ಕನ್ನಡ ಪ್ರಭ ವಾರ್ತೆ ಮದ್ದೂರು
ಸಚಿವ ಸಂಪುಟ ವಿಸ್ತರಣೆಯಲ್ಲಿ ಮಂತ್ರಿ ಸ್ಥಾನದಿಂದ ವಂಚಿತರಾದ ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಸೇರಿದಂತೆ ಹಲವು ಶಾಸಕರಲ್ಲಿ ಭುಗಿಲೆದ್ದಿರುವ ಅಸಮಾಧಾನವನ್ನು ಪಕ್ಷದ ಹೈಕಮಾಂಡ್ ಶೀಘ್ರ ಬಗೆಹರಿಸಲಿದೆ ಎಂದು ಶಾಸಕ ಕೆ.ಎಂ.ಉದಯ್ ವಿಶ್ವಾಸ ವ್ಯಕ್ತಪಡಿಸಿದರು.ನಗರಸಭೆ ವ್ಯಾಪ್ತಿಯ ಬೆಂಗಳೂರು ಮೈಸೂರು ಹಳೇ ರಸ್ತೆಯಲ್ಲಿ ಸೋಮನಹಳ್ಳಿ ತಿಮ್ಮದಾಸ್ ಹೋಟೆಲ್ ವೃತ್ತದಿಂದ ರುದ್ರಾಕ್ಷಿ ಪುರ ಗ್ರಾಮದವರೆಗೆ ಲೋಕೋಪಯೋಗಿ ಇಲಾಖೆ 67 ಲಕ್ಷ ರು. ವೆಚ್ಚದಲ್ಲಿ ರಸ್ತೆ ವಿಭಜಕದ ಮಧ್ಯೆ ಅಳವಡಿಸುವ ಬೀದಿ ದೀಪ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಸಂಪುಟ ವಿಸ್ತರಣೆ ನಂತರ ಸಚಿವ ಸ್ಥಾನ ಸಿಗದ ಹಲವು ಶಾಸಕರಲ್ಲಿ ಅಸಮಾಧಾನವಿದೆ. ಈ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೈಕಮಾಂಡ್ ಜೊತೆ ಚರ್ಚೆ ನಡೆಸಿದ ನಂತರ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲಿದ್ದಾರೆ ಎಂದು ತಿಳಿಸಿದರು. ಸಚಿವ ಸಂಪುಟದಲ್ಲಿ ಮಹಿಳೆಯರ ಕೋಟಾದಲ್ಲಿ ಯಾರನ್ನು ಮಂತ್ರಿ ಮಾಡಬೇಕು ಎನ್ನುವುದು ತೀರ್ಮಾನವಾಗಿಲ್ಲ. ಮುಂದಿನ ಒಂದೆರಡು ದಿನಗಳಲ್ಲಿ ಈ ಸಮಸ್ಯೆಗೂ ಪರಿಹಾರ ಸಿಗಲಿದೆ ಎಂದರು. ಮಾಜಿ ಸಿಎಂ ಸಿದ್ದರಾಮಯ್ಯ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಯಾದ ನಂತರ ವಿಪಕ್ಷ ನಾಯಕನಾಗಿ, ಮುಖ್ಯಮಂತ್ರಿಯಾಗಿ ದೀರ್ಘಾವಧಿ ಕಾರ್ಯನಿರ್ವಹಿಸಿದ್ದಾರೆ. ಈಗಲೂ ಸಹ ಅವರ ಮಾರ್ಗದರ್ಶನದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಿದೆ ಸ್ಪಷ್ಟಪಡಿಸಿದರು.ಈ ವೇಳೆ ಮನ್ಮುಲ್ ನಿರ್ದೇಶಕ ಎಂ.ಕೆ.ಹರೀಶ್ ಬಾಬು, ಜಿಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ಗ್ರಾಪಂ ಮಾಜಿ ಅಧ್ಯಕ್ಷ ಸಿ.ಟಿ..ಶಂಕರ್, ಉದ್ಯಮಿ ಸಿಪಾಯಿಶ್ರೀನಿವಾಸ್, ಲೋಕೋಪಯೋಗಿ ಇಲಾಖೆ ಎಇಇ ರಾಜೇಶ್, ಎಲೆಕ್ಟ್ರಿಕಲ್ ಎಇಇ ಸುಜಾತ ಹಲವರು ಇದ್ದರು.