ಸಾರಾಂಶ
ಹುಬ್ಬಳ್ಳಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದಲ್ಲಿ ಹೈಕಮಾಂಡ್ ಪಾತ್ರವೂ ಇದೆ. ಹೀಗಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೈಕಮಾಂಡ್ ಸಮರ್ಥಿಸಿಕೊಳ್ಳುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.
ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಭ್ರಷ್ಟಾಚಾರದಲ್ಲಿ ಸುರ್ಜೆವಾಲಾ ಮತ್ತು ವೇಣುಗೋಪಾಲ ಸಹ ಪಾಲುದಾರರು. ಹೀಗಾಗಿಯೇ ಇವರೆಲ್ಲ ಮುಖ್ಯಮಂತ್ರಿಗಳನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಮಿತಿಮೀರಿದ ಭ್ರಷ್ಟಾಚಾರ ಹಾಗೂ ದುರಾಡಳಿತ ನಡೆಯುತ್ತಿದೆ. ಅದಕ್ಕೆ ಹೈಕಮಾಂಡ್ ಸಂಪೂರ್ಣ ಸಹಕಾರ ನೀಡುತ್ತಿದೆ ಎಂದು ದೂರಿದರು.ಮೊದಲು ರಾಜೀನಾಮೆ ನೀಡಲಿ
ಸರ್ಕಾರದಲ್ಲಿ ಇದ್ದುಕೊಂಡು ಹೋರಾಟ ಮಾಡುವುದರ ಅರ್ಥವೇನು? ಹೋರಾಟ ಮಾಡುವುದೇನಿದ್ದರೂ ವಿರೋಧ ಪಕ್ಷದವರ ಕೆಲಸವಾಗಿದೆ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಮತ್ತು ದೇವರಾಜ ಅರಸು ಹೆಸರು ಹೇಳಿಕೊಂಡು ಸಿದ್ದರಾಮಯ್ಯ ಬಚಾವಾಗಲು ನೋಡುತ್ತಿದ್ದಾರೆ. ತಮ್ಮ ಸ್ಥಾನ ಹೋಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಜಾತಿ ಲೇಪನ ಮಾಡುತ್ತಿದ್ದಾರೆ. ಕೂಡಲೇ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿ ಎಂದರು.ಯಾವುದೇ ಮುಂದಾಲೋಚನೆ ಇಲ್ಲದೆ ಕಾಂಗ್ರೆಸ್ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆ. ಇದರಿಂದಾಗಿ ರಾಜ್ಯದಲ್ಲಿ ಅಯೋಮಯ ಸ್ಥಿತಿ ನಿರ್ಮಾಣವಾಗಿದೆ. ಹತ್ಯೆ ಮತ್ತು ಆತ್ಮಹತ್ಯೆ ರಾಜ್ಯ ಸರ್ಕಾರದ ಪ್ರಮುಖ ಕೊಡುಗೆಯಾಗಿವೆ ಎಂದರು.
ಮುಖ ತೋರಿಸಲು ಆಗುತ್ತಿಲ್ಲರಾಜ್ಯದಲ್ಲಿ ಬರ ಬಂದಾಗಲೂ ಸರ್ಕಾರ ಅದನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಿಲ್ಲ. ಸದ್ಯ ನೆರೆ ಪ್ರವಾಹ ಬಂದಾಗಲೂ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಬಿದ್ದ ಮನೆಗಳಿಗೆ ಸೂಕ್ತ ಪರಿಹಾರ ದೊರೆಯುತ್ತಿಲ್ಲ. ಈಚೆಗೆ ಸುರಿದ ನಿರಂತರ ಮಳೆಯಿಂದಾಗಿ ರಾಜ್ಯದ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಕಾಂಗ್ರೆಸ್ ಶಾಸಕರು ತಮ್ಮ ಕ್ಷೇತ್ರದ ಜನರಿಗೆ ಮುಖ ತೋರಿಸಲಾರದ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ನನಗೆ ಮಾಹಿತಿಯಿಲ್ಲಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ರಮೇಶ ಜಾರಕಿಹೋಳಿ ಅವರು ನಡೆಸಿದ ಗುಪ್ತ ಸಭೆಯ ಕುರಿತು ಪ್ರತಿಕ್ರಿಯೆ ನೀಡಿದ ಜೋಶಿ, ಸಭೆಯ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಹಾಗೇನಾದರೂ ಪ್ರತ್ಯೇಕ ಸಭೆಗಳು ನಡೆದಿದ್ದರೆ ಅದರ ಬಗ್ಗೆ ರಾಜ್ಯ ಉಸ್ತುವಾರಿಗಳು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರು ನೋಡಿಕೊಳ್ಳುತ್ತಾರೆ ಎಂದು ಉತ್ತರಿಸಿದರು.
ಡ್ಯಾಂ: ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಿ
ಹುಬ್ಬಳ್ಳಿ: ಮಳೆಯಿಂದ ನೀರಿನ ರಭಸಕ್ಕೆ ತುಂಗಭದ್ರಾ ಡ್ಯಾಂನ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿರುವುದು ದುರ್ದೈವದ ಸಂಗತಿ. ಅಧಿಕಾರಿಗಳು ಡ್ಯಾಂ ಸರಿಯಾಗಿ ನಿರ್ವಹಣೆ ಮಾಡದೆ ಇರುವುದು ಈ ಘಟನೆಗೆ ಕಾರಣವಾಗಿದೆ. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಒತ್ತಾಯಿಸಿದರು.