ಅತ್ಯಾಚಾರ ಆರೋಪಿ ಜಾಮೀನು ರದ್ದುಗೊಳಿಸಿದ ಹೈಕೋರ್ಟ್
KannadaprabhaNewsNetwork | Published : Oct 15 2023, 12:45 AM IST
ಅತ್ಯಾಚಾರ ಆರೋಪಿ ಜಾಮೀನು ರದ್ದುಗೊಳಿಸಿದ ಹೈಕೋರ್ಟ್
ಸಾರಾಂಶ
ವಿವಾಹವಾಗುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ ಆರೋಪದ ಮೇಲೆ ಅಧೀನ ನ್ಯಾಯಾಲಯಕ್ಕೆ ಶರಣಾಗಿ ಜಾಮೀನು ಪಡೆದಿದ್ದ ಸಮಾಜ ಕಲ್ಯಾಣ ಇಲಾಖೆ ಮೇಲ್ವಿಚಾರಕನ ಜಾಮೀನನ್ನು ಹೈಕೋರ್ಟ್ ರದ್ದುಪಡಿಸಿ ಆದೇಶ ಹೊರಡಿಸಿದೆ.
ಮದ್ದೂರು: ವಿವಾಹವಾಗುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ ಆರೋಪದ ಮೇಲೆ ಅಧೀನ ನ್ಯಾಯಾಲಯಕ್ಕೆ ಶರಣಾಗಿ ಜಾಮೀನು ಪಡೆದಿದ್ದ ಸಮಾಜ ಕಲ್ಯಾಣ ಇಲಾಖೆ ಮೇಲ್ವಿಚಾರಕನ ಜಾಮೀನನ್ನು ಹೈಕೋರ್ಟ್ ರದ್ದುಪಡಿಸಿ ಆದೇಶ ಹೊರಡಿಸಿದೆ. ನ್ಯಾಯಾಮೂರ್ತಿ ಎಸ್ .ವಿಶ್ವಜಿತ್ ಶೆಟ್ಟಿ ನೇತೃತ್ವದ ಏಕ ಸದಸ್ಯ ಪೀಠ ಆರೋಪಿಯ ಜಾಮೀನು ರದ್ದು ಮಾಡಿ ಈ ಕೂಡಲೇ ನ್ಯಾಯಾಲಯದ ಮುಂದೆ ಶರಣಾಗುವಂತೆ ಸೂಚನೆ ನೀಡಿದೆ. ತಾಲೂಕಿನ ಕೊಪ್ಪ ಹೋಬಳಿ ಬೆಕ್ಕಳಲೆ ಗ್ರಾಮದ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ವಿದ್ಯಾರ್ಥಿ ನಿಲಯದಲ್ಲಿ ಈ ಹಿಂದೆ ವಾರ್ಡನ್ ಆಗಿದ್ದ ಪ್ರಸ್ತುತ ಕನಕಪುರ ವಿದ್ಯಾರ್ಥಿ ನಿಲಯದಲ್ಲಿ ಕೆಲಸ ಮಾಡುತ್ತಿದ್ದ ಬಿ.ಕೆ.ಸತೀಶ್ ಅಪ್ರಾಪ್ತೆಯನ್ನು ವಿವಾಹವಾಗುವುದಾಗಿ ನಂಬಿಸಿ ನಿರಂತರವಾಗಿ ಅತ್ಯಾಚಾರ ನಡೆಸಿದ ನಂತರ ನಿಶ್ಚಿತಾರ್ಥ ಮಾಡಿಕೊಂಡು ತಲೆಮರೆಸಿಕೊಂಡಿದ್ದನು. ನಂತರ ಜಿಲ್ಲಾ ಪೋಕ್ಸೋ ನ್ಯಾಯಾಲಯದಲ್ಲಿ ಜಾಮೀನು ಪಡೆದುಕೊಂಡಿದ್ದನು. ಈತನ ಜಾಮೀನು ಅರ್ಜಿ ಪ್ರಶ್ನಿಸಿ ಸಂತ್ರಸ್ತ ಯುವತಿ ತಮ್ಮ ಪರ ವಕೀಲರ ಮೂಲಕ ಹೈಕೋರ್ಟ್ ಗೆ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿ ಕೋರ್ಟ್ ಕುರಿತು ಸಂಬಂಧಪಟ್ಟವರಿಗೆ ನೋಟಿಸ್ ನೀಡಿ ಅಗತ್ಯ ಕ್ರಮ ಕೈಗೊಳ್ಳಬೇಕು. ಅಲ್ಲದೇ ಪ್ರಾಸಿಕ್ಯೂಷನ್‌ಗೂ, ಸಂತ್ರಸ್ತರಿಗೆ ಪ್ರಕರಣದ ಹಿಂಬರಹ ಸಲ್ಲಿಸಬೇಕು ಎಂದು ಸೂಚನೆ ನೀಡಿದೆ. ಯುವತಿ ದೂರಿನ ಹಿನ್ನೆಲೆ ಎಫ್‌ಐಆರ್ ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಬಿ.ಕೆ.ಸತೀಶ್ ನ್ಯಾಯಾಲಯದ ಎದುರು ಶರಣಾಗಿ ಬಂಧನಕ್ಕೆ ಒಳಗಾಗಿದ್ದ. ಜಿಲ್ಲಾ ಮತ್ತು ಹೈಕೋರ್ಟ್ ನ್ಯಾಯಾಲಯದಲ್ಲೂ ಜಾಮೀನು ಅರ್ಜಿ ತಿರಸ್ಕೃತಗೊಂಡಿತ್ತು. ಕಳೆದ 2022 ಡಿ.30 ರಂದು ಮತ್ತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದಾಗ ಜಿಲ್ಲಾ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ನಂತರ ಕೆಲಸದಿಂದ ಅಮಾನತ್ತುಗೊಂಡ ಸತೀಶ್ ಸಮಾಜ ಕಲ್ಯಾಣ ಇಲಾಖೆ ಹಿರಿಯ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ರಾಮನಗರ ಜಿಲ್ಲೆ ಕನಕಪುರ ಸಮಾಜ ಕಲ್ಯಾಣ ಇಲಾಖೆಯಲ್ಲಿ ಮತ್ತೆ ವಾರ್ಡನ್ ಆಗಿ ಕೆಲಸ ಮಾಡುತ್ತಿದ್ದನು.