ಸ್ಮಾರ್ಟ್‌ ಮೀಟರ್‌ : ಮಾರ್ಗಸೂಚಿಗೆ ತಡೆ

| N/A | Published : May 02 2025, 01:34 AM IST / Updated: May 02 2025, 11:30 AM IST

ಸಾರಾಂಶ

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಪಿ.ಎಂ. ಹರೀಶ್‌ ಎಂಬುವವರಿಗೆ ಸೀಮಿತವಾಗಿ ಸ್ಮಾರ್ಟ್‌ ಮೀಟರ್‌ ಅಳವಡಿಕೆ ಮತ್ತು ಆ ಕುರಿತ ಮಾರ್ಗಸೂಚಿಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

 ಬೆಂಗಳೂರು :  ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಪಿ.ಎಂ. ಹರೀಶ್‌ ಎಂಬುವವರಿಗೆ ಸೀಮಿತವಾಗಿ ಸ್ಮಾರ್ಟ್‌ ಮೀಟರ್‌ ಅಳವಡಿಕೆ ಮತ್ತು ಆ ಕುರಿತ ಮಾರ್ಗಸೂಚಿಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

ಸ್ಮಾರ್ಟ್‌ ಮೀಟರ್‌ ಅಳವಡಿಕೆ ಸಂಬಂಧ 2025ರ ಫೆಬ್ರವರಿ 13ರಂದು ಬೆಸ್ಕಾಂ ಹೊರಡಿಸಿರುವ ಮಾರ್ಗಸೂಚಿ ರದ್ದುಪಡಿಸಬೇಕು ಮತ್ತು ಸ್ಮಾರ್ಟ್‌ ಮೀಟರ್‌ ಅಥವಾ ಎಲೆಕ್ಟ್ರೋಸ್ಟ್ಯಾಟಿಕ್‌ ಎನರ್ಜಿ ಮೀಟರ್‌ ಅಳವಡಿಸಿಕೊಳ್ಳಲು ತಮಗೆ ಅನುಮತಿಸಲು ಬೆಸ್ಕಾಂಗೆ ನಿರ್ದೇಶಿಸಬೇಕು ಎಂದು ಕೋರಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಪಿ.ಎಂ.ಹರೀಶ್‌ ಹೈಕೋರ್ಟ್‌ಗೆ ತರಕಾರು ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯನ್ನು ಪರಿಗಣಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠವು ಅರ್ಜಿದಾರರಿಗೆ ಸೀಮಿತವಾಗಿ ಬೆಸ್ಕಾಂ ಮಾರ್ಗಸೂಚಿಗೆ ಮತ್ತು ಸ್ಮಾರ್ಟ್‌ ಮೀಟರ್‌ ಅಳವಡಿಕೆ ಕಡ್ಡಾಯಗೊಳಿಸಿರುವುದಕ್ಕೆ ತಡೆ ನೀಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಸ್ಮಾರ್ಟ್‌ ಮೀಟರ್‌ ಅಳವಡಿಕೆ ಕಡ್ಡಾಯಗೊಳಿಸುವುದರಿಂದ ಸಾರ್ವಜನಿಕ ಬೊಕ್ಕಸಕ್ಕೆ ₹15 ಸಾವಿರ ಕೋಟಿ ನಷ್ಟವಾಗಲಿದೆ. ₹900 ಮೌಲ್ಯದ ಸ್ಮಾರ್ಟ್‌ ಮೀಟರ್‌ಗೆ ₹14 ಸಾವಿರ ಪಾವತಿಸಬೇಕಿದೆ. ಮಾರ್ಗಸೂಚಿಯು ಸಹ ನ್ಯಾಯಸಮ್ಮತವಾಗಿಲ್ಲ. ಬೆಸ್ಕಾಂ ಕಾಯ್ದೆಗೆ ತದ್ವಿರುದ್ದವಾಗಿದೆ ಎಂದು ನ್ಯಾಯಪೀಠದ ಗಮನಕ್ಕೆ ಬಂದರು.

ಅದನ್ನು ಪರಿಗಣಿಸಿದ ನ್ಯಾಯಪೀಠ, ಮಾರ್ಗಸೂಚಿಯನ್ನು ಸಂಪೂರ್ಣವಾಗಿ ತಡೆದರೆ ಎಲ್ಲರಿಗೂ ಅನ್ವಯಿಸುತ್ತದೆ. ಆಗ ವಿದ್ಯುತ್‌ ಸ್ಮಾರ್ಟ್‌ ಮೀಟರ್ ಅಳವಡಿಕೆ ಕಡ್ಡಾಯವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ (ವಿಭಾಗೀಯ ಪೀಠದಲ್ಲಿ ವಿಚಾರಣೆ ಹಂತದಲ್ಲಿರುವ ಅರ್ಜಿ) ಹಸ್ತಕ್ಷೇಪ ಮಾಡಿದಂತಾಗುತ್ತದೆ. ಆದ್ದರಿಂದ ಅರ್ಜಿದಾರರಿಗೆ ಅನ್ವಯಿಸಿ ಸ್ಮಾರ್ಟ್‌ ಮೀಟರ್‌ ಅಳವಡಿಕೆ ಮತ್ತು ಮಾರ್ಗಸೂಚಿಗೆ ತಡೆ ನೀಡಲಾಗುತ್ತಿದೆ ಎಂದು ಮಧ್ಯಂತರ ಆದೇಶ ಮಾಡಿ ಅರ್ಜಿ ವಿಚಾರಣೆಯನ್ನು ಜೂ. 6ಕ್ಕೆ ಮುಂದೂಡಿತು.