ನಾಳೆ, ನಾಡಿದ್ದು ನಂಜರಾಜ ಬಹದ್ದೂರ್‌ ಛತ್ರದಲ್ಲಿ ಹಲಸಿನ ಹಬ್ಬ

| Published : May 02 2025, 01:34 AM IST

ಸಾರಾಂಶ

ಲಸಿನ ಮಹತ್ವ ಸಾರುವ ಮೇಳದಲ್ಲಿ, ಕೆಂಪು, ಹಳದಿ ಮತ್ತು ಬಿಳಿ ಹಲಸಿನ ತಳಿ ಹಣ್ಣುಗಳು ತಿನ್ನಲು ಸಿಗಲಿವೆ.

ಕನ್ನಡಪ್ರಭ ವಾರ್ತೆ ಮೈಸೂರುಹಲಸಿನ ಮಹತ್ವವನ್ನು ಗ್ರಾಹಕರಿಗೆ ಮತ್ತು ರೈತರಿಗೆ ತಿಳಿಸಿಕೊಡುವ ಉದ್ದೇಶದಿಂದ ಸಹಜ ಸಮೃದ್ದ ಮತ್ತು ರೋಟರಿ ಕ್ಲಬ್ ಮೈಸೂರು ಪಶ್ಚಿಮ ಜೊತೆಗೂಡಿ ಮೇ 3 ಮತ್ತು 4 ರಂದು ಹಲಸಿನ ಹಬ್ಬವನ್ನು ನಗರದ ನಂಜರಾಜ ಬಹದ್ದೂರು ಛತ್ರದಲ್ಲಿ ಏರ್ಪಡಿಸಿದೆ. ಹಲಸಿನ ಮಹತ್ವ ಸಾರುವ ಮೇಳದಲ್ಲಿ, ಕೆಂಪು, ಹಳದಿ ಮತ್ತು ಬಿಳಿ ಹಲಸಿನ ತಳಿ ಹಣ್ಣುಗಳು ತಿನ್ನಲು ಸಿಗಲಿವೆ. ಹಲಸಿನ ಐಸ್ ಕ್ರೀಂ, ಚಿಪ್ಸ, ಚಾಕೋಲೇಟ್, ಹಪ್ಪಳ, ಹಲ್ವ, ಕಬಾಬ್,ಹೋಳಿಗೆ, ವಡೆ, ದೋಸೆ , ಪಲ್ಯ , ಬಿರಿಯಾನಿಯ ಮಳಿಗೆಗಳು ಬರಲಿವೆ. ಹಲಸಿನ ಮೌಲ್ಯವರ್ಧಿತ ಪದಾರ್ಥಗಳು, ಮತ್ತು ಹಲಸು ಹಚ್ಚುವ ಯಂತ್ರ ಸಿಗಲಿದೆ. ಕೆಂಪು ಹಲಸು, ಬಿಳಿ ಹಲಸು, ಕೊಡಗಿನ ರುದ್ರಾಕ್ಷಿ ಹಲಸುಹೆಗ್ಗಡದೇವನಕೋಟೆ, ಕೊಳ್ಳೇಗಾಲ, ಪಿರಿಯಾಪಟ್ಟಣ, ಕೆ.ಆರ್. ಪೇಟೆ, ತುಮಕೂರು, ಹಾವೇರಿ ಮತ್ತು ಶಿವಮೊಗ್ಗ ಭಾಗದ ಹಲಸಿನ ಬೆಳೆಗಾರರು ಗುಣಮಟ್ಟದ ಹಲಸಿನ ಹಣ್ಣುಗಳನ್ನು ಮಾರಾಟಕ್ಕೆ ತರಲಿದ್ದಾರೆ. ಚೇಳೂರಿನ ಕೆಂಪು ಹಲಸು, ನಾಗರಹೊಳೆ ಕಾಡಿನ ಬಿಳಿ ಹಲಸು ಮತ್ತು ಕೊಡಗಿನ ರುದ್ರಾಕ್ಷಿ ಹಲಸು ಸವಿಯಲು ಸಿಗಲಿದೆ.

ಹಲಸಿನ ವೈವಿಧ್ಯದ ಪ್ರದರ್ಶನ ಏರ್ಪಾಡಾಗಿದೆ. ಕರ್ನಾಟಕ, ಕೇರಳ, ಮಲೇಶಿಯ, ವಿಯಟ್ನಾನಂ, ಥಾಯ್ ಲ್ಯಾಂಡಿನ ಹೆಸರಾಂತ ಹಲಸಿನ ತಳಿಗಳ ಕಾಯಿ ಮತ್ತು ಹಣ್ಣು ಪ್ರದರ್ಶನಕ್ಕೆ ಬರಲಿದೆ. ಶನಿವಾರ 11ಕ್ಕೆ ರೈತರಿಗಾಗಿ ಹಲಸಿನ ಸಾಗುವಳಿ ಮತ್ತು ಮಾರುಕಟ್ಟೆ ಕುರಿತು ತರಬೇತಿ ಕಾರ್ಯಕ್ರಮವಿದೆ. ಹಲಸಿನ ತಜ್ಞರು ಮಾಹಿತಿ ನೀಡಲಿದ್ದಾರೆ. ಹಲಸಿನ ತಳಿಯ ಗಿಡಗಳು ಮಾರಾಟಕ್ಕೆಡೆಂಗ್ ಸೂರ್ಯ, ರುದ್ರಾಕ್ಷಿ ಬಕ್ಕೆ, ತೂಬಗೆರೆ, ಬೈರಸಂದ್ರ, ಸರ್ವ ಋತು, ಲಾಲ್ ಬಾಗ್ ಮಧುರ, ಥಾಯ್ ರೆಡ್, ವಿಯಟ್ನಾಂ ಸೂಪರ್ ಹರ್ಲಿ, ಗಮ್ ಲೆಸ್, ನಾಗಚಂದ್ರ, ರಾಮಚಂದ್ರ ಮೊದಲಾದ 25ಕ್ಕೂ ಹೆಚ್ಚಿನ ಜನಪ್ರಿಯ ಹಲಸಿನ ತಳಿಯ ಗಿಡಗಳು ಮಾರಾಟಕ್ಕೆ ಲಭ್ಯವಿರುತ್ತವೆ. ಇಡೀ ದೇಶದಲ್ಲೇ ಮೊದಲ ಬಾರಿಗೆ, ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕು ಪ್ರಾಧಿಕಾರದಲ್ಲಿ ನೊಂದಣಿಯಾಗಿರುವ ಕೆಂಪು ಹಲಸಿನ ತಳಿಗಳಾದ ಸಿದ್ಧು ಮತ್ತು ಶಂಕರ ಹಲಸಿನ ಗಿಡಗಳು ಮಾರಾಟಕ್ಕೆ ಬರುತ್ತಿವೆ. ಮಾರುಕಟ್ಟೆಯಲ್ಲಿ ಈ ಜಾತಿಯ ತಲಾ ಹಣ್ಣಿಗೆ ಒಂದು ಸಾವಿರ ರೂಪಾಯಿ ಬೆಲೆ ಇದೆ!.ಉತ್ತರ ಭಾರತದಲ್ಲಿ ಜ್ಯೂಸ್ ಬಿಲ್ವ ಹೆಸರುವಾಸಿ. ನಾವು ದೇವರ ಪೂಜೆಗೆ ಬಳಸುವ ಬಿಲ್ವ ಪತ್ರೆ ಗಿಡದ ದೊಡ್ಡ ಕಾಯಿಯ ತಳಿಗಳು ಮೇಳಕ್ಕೆ ಬರುತ್ತಿವೆ. ಬಿಲ್ವ ಜ್ಯೂಸ್ ರುಚಿ ನೋಡಲು ಮತ್ತು ಜ್ಯೂಸ್ ಬಿಲ್ವ ಗಿಡಗಳು ಕೊಳ್ಳಲು ಸಿಗಲಿವೆ.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕವಿ ಮತ್ತು ಹಲಸು ಬೆಳೆಗಾರ ಕೃಷ್ಣಮೂರ್ತಿ ಬಿಳಿಗೆರೆಯವರು ಹಲಸಿನ ಹಬ್ಬವನ್ನು ಉದ್ಘಾಟಿಸಲಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ವಿಜೇತ ರೈತ ಶಿವನಾಪುರದ ರಮೇಶ್, ರೋಟರಿ ಕ್ಲಬ್ ಮೈಸೂರು ಪಶ್ಚಿಮದ ಅಧ್ಯಕ್ಷರಾದ ನಾಗೇಶ್ ಎಂ ಎಲ್ ಮತ್ತು ಕಾರ್ಯದರ್ಶಿ ದೇವರಾಜು ಎಂ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಶನಿವಾರ ಸಂಜೆ ಹಲಸು ಎತ್ತುವ ಮತ್ತು ಹಲಸಿನ ತೂಕ ಊಹಿಸುವ ಸ್ಫರ್ಧೆ ಇರಲಿದೆ. ಭಾನುವಾರದಂದು ಮಧ್ಯಾಹ್ನ 2 ಘಂಟೆಗೆ ಹಲಸಿನ ಹಣ್ಣು ತಿನ್ನುವ ಸ್ಪರ್ಧೆ ಏರ್ಪಡಿಸಲಾಗಿದೆ. ನಿಗದಿತ ಸಮಯದಲ್ಲಿ ಹೆಚ್ಚು ಹಲಸಿನ ಹಣ್ಣಿನ ತೊಳೆ ತಿಂದವರನ್ನು ವಿಜೇತರಾಗಿ ಘೋಷಿಸಿ, ಬಹುಮಾನ ನೀಡಲಾಗುತ್ತದೆ.

ಮಕ್ಕಳು ಮತ್ತು ಹಿರಿಯರಿಗಾಗಿ ಮನೆಯಲ್ಲಿ ಹಲಸಿನ ಚಿತ್ರ ಬರೆಯಿರಿ: ಮೇಳಕ್ಕೆ ತಂದು ಪ್ರದರ್ಶಿಸಿ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ. ಆಸಕ್ತರು ಶನಿವಾರ ಮಧ್ಯಾಹ್ನ 2 ಘಂಟೆಗೆ ಚಿತ್ರಗಳನ್ನು ಮೇಳಕ್ಕೆ ತರಬೇಕು.

ಕರ್ನಾಟಕದ ವಿವಿದ ಭಾಗಗಳಿಂದ ಬರುವ ಗ್ರಾಮೀಣ ಉದ್ದಿಮೆದಾರರು, ರೈತ ಕಂಪನಿಗಳು , ರೈತ ಮತ್ತು ಮಹಿಳಾ ಗುಂಪುಗಳು ಹಲಸಿನ ಮೌಲ್ಯವರ್ಧಿತ ಪದಾರ್ಥಗಳು, ಸಿರಿಧಾನ್ಯ, ಸಾವಯವ ಉತ್ಪನ್ನಗಳು ಮತ್ತು ಕರಕುಶಲ ವಸ್ತುಗಳನ್ನು ಮಾರಾಟಕ್ಕೆ ತರಲಿದ್ದಾರೆ. ಮುಂಗಾರಿಗೆ ಬಿತ್ತಲು ತರಕಾರಿ ಬೀಜ, ದೇಸಿ ಭತ್ತ ಮತ್ತು ಸಿರಿಧಾನ್ಯಗಳು ಮೇಳದಲ್ಲಿ ಲಭ್ಯವಿವೆ.

ಹೆಚ್ಚಿನ ವಿವರಗಳಿಗೆ ಸುಹಾಸ್ 9482115495/ ಹರೀಷ್ -9036463651 ಸಂಪರ್ಕಿಸಿ