ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಕಾರ್ಮಿಕರು ಸಿಡಿದೇಳುವ ಮೊದಲೇ ಕೈಗಾರಿಕಾ ನ್ಯಾಯಾಧೀಕರಣದ (ಕಾರ್ಮಿಕ ನ್ಯಾಯಾಲಯ) ಬೆಂಗಳೂರು ಪೀಠದ (ಪ್ರಿಸೈಡಿಂಗ್ ಆಫೀಸರ್) ಮುಖ್ಯಸ್ಥರ ಹುದ್ದೆಯ ಭರ್ತಿಗೆ ಕ್ರಮ ಜರುಗಿಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಕಟುವಾಗಿ ಸೂಚಿಸಿದೆ.ಕಳೆದ ಮೂರು ವರ್ಷಗಳಿಂದ ಖಾಲಿಯಿರುವ ಕೇಂದ್ರ ಸರ್ಕಾರದ ಕೈಗಾರಿಕಾ ನ್ಯಾಯಾಧಿಕರಣದ ಬೆಂಗಳೂರು ಪೀಠದ ಮುಖ್ಯಸ್ಥರ ಹುದ್ದೆ ಭರ್ತಿ ಮಾಡಲು ನಿರ್ದೇಶಿಸುವಂತೆ ಕೋರಿ ಕೈಗಾರಿಕಾ ಕಾನೂನು ಅಭ್ಯಾಸಕಾರರ ವೇದಿಕೆ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಪೀಠ ಈ ಸೂಚನೆ ನೀಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ನ್ಯಾಯಾಧೀಕರಣದ ಮುಖ್ಯಸ್ಥರ ಹುದ್ದೆ ಕಳೆದ ಮೂರು ವರ್ಷಗಳಿಂದ ಖಾಲಿಯಿದೆ. ಆ ಹುದ್ದೆ ಭರ್ತಿ ಮಾಡಲು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಈ ಹಿಂದೆಯೇ ನಿರ್ದೇಶಿಸಿದೆ. ಆದರೂ ಈವರೆಗೆ ನೇಮಕ ಮಾಡಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು.ಕೇಂದ್ರ ಸರ್ಕಾರದ ಪರ ವಕೀಲ ಎ.ವಿ. ನಿಶಾಂತ್ ಹಾಜರಾಗಿ, ಮುಖ್ಯಸ್ಥರ ಹುದ್ದೆ ನೇಮಕಾತಿ ವಿಳಂಬ ವಿಚಾರದಲ್ಲಿ ಸಕಾರಾತ್ಮಕ ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯದಲ್ಲಿ 10 ಲಕ್ಷ ರು. ಠೇವಣಿ ಇಡಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ 2023ರ ಅ.25ರಂದು ಆದೇಶಿಸಿತ್ತು. ಆ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಹೈಕೋರ್ಟ್ ಆದೇಶವನ್ನು ಸರ್ವೋಚ್ಛ ನ್ಯಾಯಾಲಯ ರದ್ದುಗೊಳಿಸಿದೆ. ಜತೆಗೆ, ಮುಖ್ಯಸ್ಥರ ನೇಮಕಾತಿಗೆ ಜೂ.30ರವರೆಗೆ ಕಾಲಾವಕಾಶ ನೀಡಿದೆ ಎಂದು ತಿಳಿಸಿ, ಆ ಕುರಿತ ದಾಖಲೆಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.
ಅದನ್ನು ಪರಿಗಣಿಸಿದ ನ್ಯಾಯಪೀಠ, ಮುಖ್ಯಸ್ಥರ ಹುದ್ದೆ ನೇಮಕಾತಿಗೆ ಸುಪ್ರೀಂ ಕೋರ್ಟ್ ಜೂನ್ 30ರವರೆಗೆ ಕಾಲಾವಕಾಶ ನೀಡಿರುವ ಹಿನ್ನೆಲೆಯಲ್ಲಿ ಈ ಅರ್ಜಿ ವಿಚಾರಣೆ ಮುಂದುವರಿಸುವ ಅಗತ್ಯ ಕಂಡು ಬರುತ್ತಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ಇತ್ಯರ್ಥಪಡಿಸಿತು.ಈ ವೇಳೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರು, ಮುಖ್ಯಸ್ಥರ ನೇಮಕಾತಿ ವಿಳಂಬ ಮಾಡುತ್ತಿರುವುದು ಸರಿಯಲ್ಲ. ಇದರಿಂದ ಕಾರ್ಮಿಕ ವರ್ಗದವರು ತೊಂದರೆ ಎದುರಿಸಬೇಕಾಗಿದೆ. ಕಾರ್ಮಿಕರು ಇನ್ನೆಷ್ಟು ದಿನ ಕಾಯಬೇಕು? ಕಾಯುವಿಕೆಗೂ ಒಂದು ಕಾಲಮಿತಿ ಇರುತ್ತದೆ. ಕಾರ್ಮಿಕರು ರಸ್ತೆಯಲ್ಲಿ ನಿಂತು ಸಿಡಿದೇಳುವ ಮುನ್ನ ಪೀಠದ ಮುಖ್ಯಸ್ಥರನ್ನು ನೇಮಕ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ತೀಕ್ಷ್ಣವಾಗಿ ಹೇಳಿದರು.