ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಆಗ್ರಹಿಸಿ ಬಿಜೆಪಿ ಪ್ರತಿಭಟನೆ

| Published : Sep 25 2024, 12:52 AM IST

ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಆಗ್ರಹಿಸಿ ಬಿಜೆಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು

ಕನ್ನಡಪ್ರಭ ವಾರ್ತೆ ಮೈಸೂರು

ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ವಿರುದ್ಧ ಹೈಕೋರ್ಟ್ ತನಿಖೆಗೆ ಆದೇಶಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷದ ಕಚೇರಿ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟಿಸಿದರು.

ಈ ವೇಳೆ ವಿಧಾನಪರಿಷತ್ ವಿರೋಧ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಮುಡಾ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಿಂದ ಮೈಸೂರಿಗೆ ನಾವು ಪಾದಯಾತ್ರೆ ಬಂದಾಗ ಸಿಎಂಗೆ ತಿದ್ದಿಕೊಳ್ಳುವ ಅವಕಾಶ ಇತ್ತು. ಅಲ್ಲದೆ, ರಾಜ್ಯಪಾಲರು ಕೊಟ್ಟ ಆದೇಶದ ವಿರುದ್ದ ಕೋರ್ಟ್ ಮೆಟ್ಟಿಲು ಏರಿದರು. ರಾಜಭವನ ಬಿಜೆಪಿ ಕಚೇರಿ ಎಂದು ಆಪಾದಿಸಿದರು. ಆದರೀಗ ನ್ಯಾಯಾಲಯದ ತೀರ್ಪು ಬಂದಿದೆ. ಈಗ ಕಾಂಗ್ರೆಸ್ ಭ್ರಷ್ಟಾಚಾರ ಬೆಳಕಿದೆ ಬಂದಿದ್ದು, ಮುಖ್ಯಮಂತ್ರಿ ಕಾನೂನು ಚೌಕಟ್ಟಿನಲ್ಲಿ ರಾಜೀನಾಮೆ ಕೊಡುವ ಪರಿಸ್ಥಿತಿ ಬಂದಿದೆ ಎಂದರು.

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದವರು, ನಾವೆಲ್ಲರೂ ಅವರನ್ನು ವಿರೋಧಿಸುತ್ತಿಲ್ಲ. ರಾಜ್ಯಪಾಲರ ಆದೇಶ ಪಾಲಿಸಿ ರಾಜೀನಾಮೆ ಕೊಟ್ಟಿದ್ದರೆ, ಈ ಪ್ರಸಂಗ ಬರುತ್ತಿರಲಿಲ್ಲ. ರಾಜೀನಾಮೆ ಕೊಟ್ಟು ಪ್ರಾಸಿಕ್ಯೂಷನ್ ಎದುರಿಸಿ ಮತ್ತೆ ಸಿಎಂ ಆದರೆ ನಾವು ಸ್ವಾಗತಿಸುತ್ತೇವೆ. ನಿಮ್ಮ ಪಕ್ಷದ ಹೈಕಮಾಂಡ್ ನಿಮ್ಮ ಬೆನ್ನ ಹಿಂದೆ ಇದ್ದರೂ, ಕೋರ್ಟ್ ಆದೇಶ ಬದಲಾಗುವುದಿಲ್ಲ. ನ್ಯಾಯಾಲಯಕ್ಕೆ ಎಲ್ಲರೂ ತಲೆಬಾಗಬೇಕು ಎಂದು ಅವರು ಆಗ್ರಹಿಸಿದರು.

ಮಾಜಿ ಸಚಿವ ಎನ್. ಮಹೇಶ್ ಮಾತನಾಡಿ, ಕಾಂಗ್ರೆಸ್ ಭ್ರಷ್ಟಾಚಾರಗಳ ವಿರುದ್ಧ ಅಹೋರಾತ್ರಿ ಧರಣಿ ಮಾಡಿದ್ದೇವೆ. ಹೋರಾಟದ ಫಲವಾಗಿ ನ್ಯಾಯಾಲಯದಿಂದ ಸರಿಯಾದ ತೀರ್ಪು ಬಂದಿದೆ. ನೈತಿಕತೆ ಇದ್ದರೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯಪಾಲರು ಪೂರ್ವಗ್ರಹ ಪೀಡಿತರಾಗಿ ಪ್ರಾಸಿಕ್ಯೂಷನ್‌ ಗೆ ಅನುಮತಿ ಕೊಟ್ಟಿದ್ದರೆ ಈ ತೀರ್ಪು ಬರುತ್ತಿರಲಿಲ್ಲ. ನ್ಯಾಯಾಲಯದ ಆದೇಶಕ್ಕೆ ತಲೆ ಬಾಗಬೇಕು. ಕೋರ್ಟ್ ಸಂವಿಧಾನದ ಪರವಾಗಿದೆ. ನೀವು ವಕೀಲರಾಗಿದ್ದವರು ತೀರ್ಪನ್ನು ಗೌರವಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ವಿಚಾರಣೆ ಎದುರಿಸಿ ಎಂದು ಅವರು ಆಗ್ರಹಿಸಿದರು.

ಶಾಸಕ ಟಿ.ಎಸ್. ಶ್ರೀವತ್ಸ, ಮಾಜಿ ಶಾಸಕರಾದ ಸಿ.ಎಸ್. ನಿರಂಜನ್‌ ಕುಮಾರ್, ಎಲ್. ನಾಗೇಂದ್ರ, ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಮಾಜಿ ಮೇಯರ್ ಶಿವಕುಮಾರ್, ಮಾಜಿ ಉಪ ಮೇಯರ್ ಶೈಲೇಂದ್ರ, ಮುಖಂಡರಾದ ಕೇಬಲ್ ಮಹೇಶ್, ಜೋಗಿ ಮಂಜು, ಗಿರಿಧರ್, ಎಸ್. ಮಹೇದವಯ್ಯ ಮೊದಲಾದವರು ಇದ್ದರು.