ಸಾರಾಂಶ
ಬೆಂಗಳೂರು : ಸರಿಯಾದ ಸಮಯಕ್ಕೆ ಚಿತ್ರ ಪ್ರದರ್ಶನ ಮಾಡದಕ್ಕೆ ಪಿವಿಆರ್ ಸಿನಿಮಾಸ್‌ಗೆ ₹1 ಲಕ್ಷ ದಂಡ ನಿರ್ದೇಶಿಸಿದ್ದ ಬೆಂಗಳೂರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಆಯೋಗದ ಆದೇಶ ಪ್ರಶ್ನಿಸಿ ಭಾರತೀಯ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಆದೇಶ ಮಾಡಿದೆ.
ಬೆಂಗಳೂರಿನ ಅಭಿಷೇಕ್ ಕಳೆದ ಡಿ.26ರಂದು ಸಂಜೆ 4.05ಕ್ಕೆ ಬೆಂಗಳೂರಿನ ಪಿವಿಆರ್-ಐನಾಕ್ಸ್‌ನಲ್ಲಿ ‘ಶ್ಯಾಮ್ ಬಹದ್ದೂರ್’ ಚಿತ್ರವನ್ನು ವೀಕ್ಷಿಸಲು ಮೂರು ಟಿಕೆಟ್ ಖರೀದಿಸಿ, ₹825.66 ಪಾವತಿಸಿದ್ದರು. ಸಿನಿಮಾ 4.05ಕ್ಕೆ ಆರಂಭವಾಗಬೇಕಾದ ಜಾಹೀರಾತುಗಳ ಪ್ರದರ್ಶನದಿಂದ 25 ನಿಮಿಷ ಸಿನಿಮಾ ಪ್ರದರ್ಶನ ತಡವಾಗಿತ್ತು.
ಇದರಿಂದ ಗ್ರಾಹಕರ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿ, ಟಿಕೆಟ್‌ನಲ್ಲಿ ನಮೂದಿಸಿದಂತೆ ಚಿತ್ರವು ಸಂಜೆ 4.05ಕ್ಕೆ ಆರಂಭವಾಗಿ, 6.30ಕ್ಕೆ ಸಿನಿಮಾ ಮುಗಿಯಬೇಕಿತ್ತು. ಆದರೆ, 4.28ರವರೆಗೆ ಸರಣಿ ಜಾಹೀರಾತು ಪ್ರದರ್ಶನ ಮಾಡಿದ್ದರಿಂದ ಸಿನಿಮಾ ಪ್ರದರ್ಶನ ಆರಂಭವು 25 ನಿಮಿಷ ತಡವಾಯಿತು. ಇದರಿಂದ ನಾನು ಸರಿಯಾದ ಸಮಯಕ್ಕೆ ಕಚೇರಿಗೆ ಹೋಗಲು ಸಾಧ್ಯವಾಗಲಿಲ್ಲ ಹಾಗೂ ನನಗೆ ಮಾನಸಿಕ ಯಾತನೆ ಉಂಟಾಯಿತು ಎಂದು ಆಕ್ಷೇಪಿಸಿದ್ದರು.
ದೂರನ್ನು ಪುರಸ್ಕರಿಸಿದ್ದ ಗ್ರಾಹಕರ ಆಯೋಗ ದೂರುದಾರ ಅಭಿಷೇಕ್‌ಗೆ ₹20 ಸಾವಿರ ಮತ್ತು ವ್ಯಾಜ್ಯ ಖರ್ಚಿಗಾಗಿ ₹8 ಸಾವಿರ ನೀಡಬೇಕು ಎಂದು ಪಿವಿಆರ್ ಆಡಳಿತ ಮಂಡಳಿಗೆ ಆದೇಶಿಸಿತ್ತು. ಅಲ್ಲದೆ, ₹1 ಲಕ್ಷ ದಂಡ ವಿಧಿಸಿ ಅದನ್ನು ಗ್ರಾಹಕ ಕಲ್ಯಾಣ ನಿಧಿಗೆ ಪಾವತಿಸಲು ಸೂಚಿಸಿತ್ತು.ಈ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿರುವ ಭಾರತೀಯ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್, ಗ್ರಾಹಕರ ಆಯೋಗದ ಆದೇಶವನ್ನು ಮುಂದಿಟ್ಟುಕೊಂಡು ಕೆಲ ಕಿಡಿಗೇಡಿಗಳು ಈಗಾಗಲೇ ನಮಗೆ ತೊಂದರೆ ಉಂಟು ಮಾಡುವ ಕೆಲಸ ಆರಂಭಿಸಿದ್ದಾರೆ. ಮೇಲಾಗಿ ತನ್ನ ವ್ಯಾಪ್ತಿ ಮೀರಿ ಆಯೋಗ ಆದೇಶ ಹೊರಡಿಸಿದೆ ಎಂದು ಆಕ್ಷೇಪಿಸಿದರು.
ಈ ವಾದ ಒಪ್ಪಿದ ಹೈಕೋರ್ಟ್, ಗ್ರಾಹಕರ ಆಯೋಗ ಪ್ರಕರಣದಲ್ಲಿ ಮೂಲ ದೂರದಾರರ ಮನವಿ ಸ್ವೀಕರಿಸಿ ಚಲನಚಿತ್ರ ಪ್ರದರ್ಶನವನ್ನು ಹೇಗೆ ನಡೆಸಬೇಕು ಎಂದು ಚರ್ಚಿಸಿದೆ. ಚಿತ್ರದ ಸಮಯದಲ್ಲಿ ಜಾಹೀರಾತು ಪ್ರದರ್ಶನ ಮಾಡಬಾರದು ಎಂದು ಚಿತ್ರಮಂದಿರಗಳಿಗೆ ನಿರ್ದೇಶಿಸಿದೆ. ಅಂದರೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ಮಾದರಿಯಲ್ಲಿ ಗ್ರಾಹಕನ ದೂರಿನ ವಿಚಾರಣೆ ನಡೆಸಿ ಆದೇಶ ಮಾಡಿದೆ. ಇದು ನ್ಯಾಯಸಮ್ಮತವಾಗಿಲ್ಲ ಹಾಗೂ ಆಯೋಗವು ತನ್ನ ವ್ಯಾಪ್ತಿ ಮೀರಿ ಪ್ರಕರಣದಲ್ಲಿ ಎಲ್ಲ ನಿರ್ದೇಶನ ಹೊರಡಿಸಿದೆ ಎಂಬುದು ಮೇಲ್ನೋಟಕ್ಕೆ ತಿಳಿದುಬರುತ್ತಿದೆ. ಆದ್ದರಿಂದ ಆಯೋಗದ ಆದೇಶಕ್ಕೆ ತಡೆಯಾಜ್ಞೆ ನೀಡಲಾಗುತ್ತಿದೆ ಎಂದು ಆದೇಶಿಸಿತು.
)
;Resize=(128,128))
;Resize=(128,128))
;Resize=(128,128))