ಸಾರಾಂಶ
ಗದಗ: ಬೆಳಗಾವಿ ಲಾಠಿ ಚಾರ್ಜ್ ಘಟನೆ ಬಳಿಕ ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಹೋರಾಟಗಾರರ ವಿರುದ್ಧ ವಿಧಿಸಿದ್ದ ತಡೆಯಾಜ್ಞೆಯನ್ನು ವಜಾಗೊಳಿಸುವ ಮೂಲಕ ಕರ್ನಾಟಕ ಹೈಕೋರ್ಟ್, ಸಮುದಾಯದ ಹೋರಾಟಕ್ಕೆ ನೈತಿಕ ಬಲ ತುಂಬಿದೆ. ಈ ತೀರ್ಪು ಕಾಂಗ್ರೆಸ್ ಸರ್ಕಾರಕ್ಕೆ ಮುಖಭಂಗವಾಗಿದೆ ಎಂದು ಸಮಾಜದ ಯುವ ಘಟಕದ ಅಧ್ಯಕ್ಷ ಅಯ್ಯಪ್ಪ ಅಂಗಡಿ ಹೇಳಿದರು. ಅವರು ಸೋಮವಾರ ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ, ನಗರದ ವೀರರಾಣಿ ಕಿತ್ತೂರು ಚೆನ್ನಮ್ಮ ಸರ್ಕಲ್ ಬಳಿ ಪಂಚಮಸಾಲಿ ಸಮುದಾಯದ ವತಿಯಿಂದ ಆಯೋಜಿಸಲಾಗಿದ್ದ ವಿಜಯೋತ್ಸವದಲ್ಲಿ ಅವರು ಮಾತನಾಡಿದರು.ಪಂಚಮಸಾಲಿ ಸಮುದಾಯವು 2ಎ ಮೀಸಲಾತಿಗಾಗಿ ತೀವ್ರ ಹೋರಾಟ ನಡೆಸುತ್ತಿದೆ. ಈ ಹೋರಾಟದ ಭಾಗವಾಗಿ ಬೆಳಗಾವಿಯಲ್ಲಿ ನಡೆದ ಪ್ರತಿಭಟನೆಯ ವೇಳೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು. ಇದರ ಬೆನ್ನಲ್ಲೇ, ಹೋರಾಟಗಾರರ ವಿರುದ್ಧ ತಡೆಯಾಜ್ಞೆ ನೀಡುವಂತೆ ಸರ್ಕಾರ ಅರ್ಜಿ ಸಲ್ಲಿಸಿತ್ತು. ಆದರೆ, ಹೈಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿದ್ದು, ಪಂಚಮಸಾಲಿ ಹೋರಾಟಗಾರರಿಗೆ ದೊಡ್ಡ ಗೆಲುವು ಸಿಕ್ಕಂತಾಗಿದೆ. ಈ ತೀರ್ಪು ಸಮುದಾಯದ ಹೋರಾಟಕ್ಕೆ ಮತ್ತಷ್ಟು ಶಕ್ತಿ ನೀಡಿದೆ ಎಂದರು.ಜಯ ಮೃತ್ಯುಂಜಯ ಸ್ವಾಮೀಜಿಯವರು ಹಾಗೂ ಎಲ್‌ಪಿಎಪಿ ವಕೀಲರ ಸಂಘ, ರಾಜ್ಯ ಪಂಚಮಸಾಲಿ ಸಮಾಜದ ಮುಖಂಡರು ಮತ್ತು ಕಾರ್ಯಕರ್ತರು ವೀರರಾಣಿ ಚೆನ್ನಮ್ಮಾಜೀಗೆ ಹೂವಿನ ಮಾಲೆ ಹಾಕಿ ಗೌರವ ಸಲ್ಲಿಸಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.ಉಪಾಧ್ಯಕ್ಷ ಬಸವರಾಜ ಗಡ್ಡೆಪ್ಪನವರ, ನಿಂಗಪ್ಪ ಹುಗ್ಗಿ, ಕೆ.ವಿ.ಗದುಗಿನ, ಚನ್ನವೀರಪ್ಪ ಮಳಗಿ, ನಗರಸಭೆ ಸದಸ್ಯ ಮಹಾಂತೇಶ ನಲವಡಿ, ರಾಮನಗೌಡ ದಾನಪ್ಪಗೌಡ್ರ, ಶಿವರಾಜಗೌಡ ಹಿರೇಮನಿಪಾಟೀಲ, ಗ್ರಾಮೀಣ ಅಧ್ಯಕ್ಷ ಮಂಜುನಾಥ ಗುಡದೂರ, ರಾಜು ಜಕ್ಕನಗೌಡ್ರ, ಚೇತನ ಅಬ್ಬಿಗೇರಿ, ಚಂದ್ರು ಪಾಟೀಲ್, ಪ್ರಶಾಂತ ನೇರಗಲ್ಲ, ಬಾಣದ, ರಾಜು ರೊಟ್ಟಿ, ಸಂಗಮೇಶ ಗೊಂದಿ, ನಿಂಗನಗೌಡ ಮಾಲಿಪಾಟೀಲ, ಸಂತೋಷ ಕೊಪ್ಪದ, ಶರಣಪ್ಪ ಮರಿಗೌಡ್ರ, ಅಶೋಕ ತೋಟದ ಸೇರಿದಂತೆ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.