ಕಾಂಗ್ರೆಸ್ ಕಚೇರಿ ಮುಂದೆ ಕೈ ಕಾರ್ಯಕರ್ತರ ಹೈ ಡ್ರಾಮ

| Published : Feb 29 2024, 02:04 AM IST

ಕಾಂಗ್ರೆಸ್ ಕಚೇರಿ ಮುಂದೆ ಕೈ ಕಾರ್ಯಕರ್ತರ ಹೈ ಡ್ರಾಮ
Share this Article
  • FB
  • TW
  • Linkdin
  • Email

ಸಾರಾಂಶ

ವಿಧಾನಸಭೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಹಿನ್ನೆಲೆ ಬುಧವಾರ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂಭಾಗ ನಾಟಕೀಯ ಬೆಳವಣಿಗೆಯೊಂದು ನಡೆದಿದ್ದು ಕಾಂಗ್ರೆಸ್ ಕಚೇರಿಗೆ ನುಗ್ಗಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರ ಕೈ ಮುಖಂಡರು ಹಿಮ್ಮೆಟ್ಟಿಸಿದರು. ಸಕಾಲದಲ್ಲಿ ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಬಿಜೆಪಿಯಿಂದ ಕಾಂಗ್ರೆಸ್ ಕಚೇರಿಗೆ ನುಗ್ಗುವ ಯತ್ನ; ತಡೆದು ಹಿಮ್ಮೆಟ್ಟಿಸಿದ ಕೈ ಕಾರ್ಯಕರ್ತರುಕನ್ನಡಪ್ರಭವಾರ್ತ, ಚಿತ್ರದುರ್ಗ

ವಿಧಾನಸಭೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಹಿನ್ನೆಲೆ ಬುಧವಾರ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂಭಾಗ ನಾಟಕೀಯ ಬೆಳವಣಿಗೆಯೊಂದು ನಡೆದಿದ್ದು ಕಾಂಗ್ರೆಸ್ ಕಚೇರಿಗೆ ನುಗ್ಗಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರ ಕೈ ಮುಖಂಡರು ಹಿಮ್ಮೆಟ್ಟಿಸಿದರು. ಸಕಾಲದಲ್ಲಿ ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ವಿಧಾನಸೌಧದಲ್ಲಿ ನಡೆದ ರಾಜ್ಯಸಭೆ ಚುನಾವಣೆಯ ನಂತರ ಡಾ.ಸೈಯದ್ ನಾಸಿರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿರುವುದನ್ನು ಪ್ರತಿಭಟಿಸಿ ಬಿಜೆಪಿ ಕಾರ್ಯಕರ್ತರು ಬುಧವಾರ ಕಾಂಗ್ರೆಸ್ ಕಚೇರಿ ಮುತ್ತಿಗೆ ಹಾಕುವ ದಿಡೀರ್ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಬಿಜೆಪಿಯ ಈ ನಡೆ ಅಷ್ಟಾಗಿ ಕಾಂಗ್ರೆಸ್ ಕಾರ್ಯಕರ್ತರ ಅರಿವಿಗೆ ಬಂದಿರಲಿಲ್ಲ. ಮಧ್ಯಾಹ್ನ ಹನ್ನೆರೆಡು ಗಂಟೆ ಸುಮಾರಿಗೆ ಒನಕೆ ಓಬವ್ವ ವೃತ್ತಕ್ಕೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಸಮೀಪದಲ್ಲಿಯೇ ಇದ್ದ ಕಾಂಗ್ರೆಸ್ ಕಚೇರಿಗೆ ನುಗ್ಗಲು ಯತ್ನಿಸಿದರು. ವಿಷಯ ತಿಳಿದ ಪೊಲೀಸರು ಬಿಜೆಪಿ ಆಸೆಗಳಿಗೆ ಆಸ್ಪದ ನೀಡಿಲ್ಲ. ಬಿಜೆಪಿ ಮಹಿಳಾ ಘಟಕದ ಕಾರ್ಯಕರ್ತರು ಕಾಂಗ್ರೆಸ್ ಕಚೇರಿಗೆ ನುಗ್ಗುವ ಯತ್ನದ ಮುಂಚೂಣಿಯಲ್ಲಿದ್ದುದು ವಿಶೇಷವಾಗಿತ್ತು. ಮಹಿಳಾ ಪೊಲೀಸರು ಸ್ಶಳಕ್ಕೆ ಆಗಮಿಸಿ ಬಿಜೆಪಿ ಕಾರ್ಯಕರ್ತರ ಹಿಮ್ಮೆಟ್ಟಿಸಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷದ ಮುಖಂಡರು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿ ತಿರುಗೇಟು ನೀಡಿದರು.ಪೊಲೀಸರು ಅಡ್ಡಗಟ್ಟಿದ ಬಗ್ಗೆ ಆಕ್ರೋಶಕೊಂಡ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗುವುದನ್ನು ಮತ್ತಷ್ಟು ತೀವ್ರಗೊಳಿಸಿದರು. ಪಾಕಿಸ್ತಾನಿಯರು ವಿಧಾನಸೌಧ ಒಳಗೆ ಬಿಟ್ಟುಕೊಂಡ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ. ಕಾಂಗ್ರಸ್ ಪಕ್ಷ ಈ ರೀತಿಯಾದ ಹಲವಾರು ವಿಷ ಜಂತುಗಳನ್ನು ಸಾಕಿಕೊಂಡಿದೆ. ಸೈಯದ್ ನಾಸೀರ್ ಹುಸೇನ್ ರವರ ಹಿಂದೆ ಇರುವ ಬೆಂಬಲಿಗರು ಪಾಕಿಸ್ತಾನಿ ಬೆಂಬಲಿತ ಉಗ್ರರೇ ಆಗಿದ್ದಾರೆ ಎಂದು ದೂರಿದರು.

ಪ್ರತಿಯಾಗಿ ಕಾಂಗ್ರೆಸ್ ಕಾರ್ಯಕರ್ತರು ಕೂಡಾ ಭಾರತ್ ಮಾತಾ ಕೀ ಜೈ, ಕೋಮುವಾದಿ, ಮನುವಾದಿ ಬಿಜೆಪಿಗೆ ಧಿಕ್ಕಾರ ಎಂದು ಕೂಗಿದರು. ಈ ವೇಳೆ ಎರಡೂ ಕಡೆಗಳಲ್ಲೂ ಪ್ರತಿಭಟನೆ ತಾರಕ್ಕೇರಿತು. ಗಾಂಧೀಜಿಯವರನ್ನು ಕೊಂದ ಗೋಡ್ಸೆ ವಂಶದವರು ನೀವು, ಭಯೋತ್ಸಾದಕರನ್ನು ಕಂದಹಾರನಲ್ಲಿ ಬಿಡುಗಡೆ ಮಾಡಿದವರು ನೀವು, ಪಾಕಿಸ್ತಾನದ ಪ್ರಧಾನ ಮಂತ್ರಿ ನಿವಾಸಕ್ಕೆ ಹೋಗಿ ಆಹಾರವನ್ನು ಸೇವನೆ ಮಾಡಿದವರು ನಾವಾ ಎಂದು ಪ್ರತಿ ಮಾತಿನ ದಾಳಿ ನಡೆಸಿದರು

ಒಂದು ಹಂತದಲ್ಲಿ ಪ್ರತಿಭಟನೆ ಬೀದಿ ಜಗಳದಂತಾಯಿತು. ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಹರಸಾಹಸ ಮಾಡಿದರು. ಈ ವೇಳೆ ಬಿಜೆಪಿ ಯುವಮೋರ್ಚಾ ರಾಜ್ಯ ಕಾರ್ಯದರ್ಶಿ ಭಾರ್ಗವಿ ದ್ರಾವಿಡ್ ಆಯತಪ್ಪಿ ಕೆಳಗೆ ಬಿದ್ದು ಎಚ್ಚರ ತಪ್ಪಿದರು. ಆನಂತರ ಪೊಲೀರರು ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು.

ಬಿಜೆಪಿ ಮುಖಂಡರಾದ ನರೇಂದ್ರ ಹೊನ್ನಾಳ್, ದಗ್ಗೆ ಶಿವಪ್ರಕಾಶ್, ತಿಪ್ಪೇಸ್ವಾಮಿ, ಯುವಮೋರ್ಚಾ ಮಂಡಲ ಅಧ್ಯಕ್ಷ ರಾಮು, ನವೀನ್, ವೀಣಾ, ಶೀಲಾ, ಶೈಲಜಾ ರೆಡ್ಡಿ, ಪವನ, ಪರಶುರಾಮ್, ಪಲ್ಲವಿ ಪ್ರಸನ್ನ, ರವಿ ಪೈಲೆಟ್, ಪ್ರಭು ಬಿಜೆಪಿಯ ಪ್ರತಿಭಟನೆ ಪಾಳೆಯದಲ್ಲಿದ್ದರು.

ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಹಾಲಸ್ವಾಮಿ, ಜಿಪಂ ಮಾಜಿ ಸದಸ್ಯ ಪ್ರಕಾಶ್ ಮೂರ್ತಿ ಹಿಂದುಳಿದ ಘಟಕದ ಜಿಲ್ಲಾಧ್ಯಕ್ಷ ಎನ್.ಡಿ. ಕುಮಾರ್, ಮುದಸಿರ್, ನೇತಾಜಿ. ಲಕ್ಷ್ಮೀಕಾಂತ ಪ್ರತಿರೋಧವೊಡ್ಡಿದ ಕಾಂಗ್ರೆಸ್ ಗುಂಪಿನಲ್ಲಿದ್ದರು. ಅರ್ಧ ಗಂಟೆ ಒಳಗೆ ಹೈಡ್ರಾಮ ಮುಗಿದು ಎಲ್ಲರೂ ತಮ್ಮ ನಿವಾಸಗಳಿಗೆ ತೆರಳಿದರು.

-----OOOO-------

ಕಾಂಗ್ರೆಸ್ ಕಚೇರಿಗೆ ನುಗ್ಗಲು ಯತ್ನಿಸಿದ ಬಿಜೆಪಿ ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ಭಾರ್ಗವಿ ಡ್ರಾವಿಡ್ ಎಚ್ಚರದಪ್ಪಿ ಬಿದ್ದಾಗ ಮಹಿಳಾ ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದರು.-----OOOO-------

-28 ಸಿಟಿಡಿ8