ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಭಾರೀ ಹೆಚ್ಚಳ ಆಗಿರುವುದು ಗಮನಕ್ಕೆ ಬಂದಿದೆ. ಜನರಿಗೆ ಹೊರೆಯಾಗದಂತೆ ಆಸ್ತಿ ತೆರಿಗೆ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಭರವಸೆ ನೀಡಿದ್ದಾರೆ.ಸಾರ್ವಜನಿಕರ ಕುಂದುಕೊರತೆ ಆಲಿಸುವ ಫೋನ್- ಇನ್ ಕಾರ್ಯಕ್ರಮದಲ್ಲಿ ಬಿಜೈನ ರಿಚರ್ಡ್ ಎಂಬವರು ಆಸ್ತಿ ತೆರಿಗೆ ಶೇ.70ರಷ್ಟು ಏರಿಕೆ ಆಗಿರುವ ಕುರಿತು ಗಮನ ಸೆಳೆದರು. ಪ್ರತಿಕ್ರಿಯಿಸಿದ ಮೇಯರ್, ಪಾಲಿಕೆಯ ಕಳೆದ ಸಾಮಾನ್ಯ ಸಭೆಯಲ್ಲಿ ಆಸ್ತಿಗಳ ಹಳೆ ಸರ್ಕಾರಿ ಮೌಲ್ಯದ ಮೇಲೆ ಶೇ.3ರಷ್ಟು ಹೆಚ್ಚಳ ಮಾಡಿ ನಿರ್ಣಯ ಕೈಗೊಳ್ಳಲಾಗಿತ್ತು. ಈ ನಡುವೆ 2023ರ ಅಕ್ಟೋಬರ್‌ನಲ್ಲಿ ರಾಜ್ಯ ಸರ್ಕಾರದ ಪರಿಷ್ಕೃತ ಮಾರ್ಗಸೂಚಿ ಅನ್ವಯ ಪಾಲಿಕೆ ಆಯುಕ್ತರು ಆಸ್ತಿ ತೆರಿಗೆ ಅನ್ವಯಿಸಿದ್ದಾರೆ. ಇದರಿಂದಾಗಿ ಮಹಾನಗರದಲ್ಲಿರುವ ಖಾಲಿ ಜಾಗಗಳೂ ಸೇರಿದಂತೆ ಅನೇಕರಿಗೆ ಆಸ್ತಿ ತೆರಿಗೆ ದುಪ್ಪಟ್ಟರಷ್ಟು ಬಂದಿದೆ. ಇದನ್ನು ಸರಿದೂಗಿಸಲು ಕಳೆದ ಸಾಮಾನ್ಯ ಸಭೆಯ ನಿರ್ಣಯದ ಸ್ಥಿರೀಕರಣ ಗುರುವಾರ (ಫೆ.29ರಂದು) ನಡೆಯುವ ಸಾಮಾನ್ಯ ಸಭೆಗೆ ಬರಲಿದೆ. ಜನರಿಗೆ ಹೊರೆಯಾಗದಂತೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಒಳಚರಂಡಿ ದೂರುಗಳೇ ಹೆಚ್ಚು:
ಫೋನ್ ಇನ್ ಕಾರ್ಯಕ್ರಮದಲ್ಲಿ ಸುಮಾರು 26 ಕರೆಗಳು ಬಂದಿದ್ದು, ಹೆಚ್ಚಿನ ಕರೆಗಳು ಒಳಚರಂಡಿ ಅವ್ಯವಸ್ಥೆಯ ಕುರಿತಾಗಿದ್ದವು. ಅತ್ತಾವರ ನ್ಯೂ ರೋಡ್‌ನಲ್ಲಿ ಒಳಚರಂಡಿ ಕಾಮಗಾರಿಗೆ ರಸ್ತೆ ಅಗೆದು ಹಾಗೇ ಬಿಟ್ಟಿದ್ದರಿಂದ ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆಯಾಗಿದೆ. ಈ ರಸ್ತೆಗೆ ಕೂಡಲೆ ಡಾಂಬರು ಹಾಕಿ ಎಂದು ಸ್ಥಳೀಯರಾದ ಉದಯಕುಮಾರ್ ಮನವಿ ಮಾಡಿದರು.ಒಳಚರಂಡಿ ಸಮಸ್ಯೆಯಿಂದಾಗಿ ಅಶೋಕನಗರದ ತನ್ನ ಮನೆಯಲ್ಲಿ ತ್ಯಾಜ್ಯನೀರು ಉಕ್ಕಿ ತೀವ್ರ ಸಮಸ್ಯೆಯಾಗಿದೆ. ಅಧಿಕಾರಿಗಳಿಗೆ ತಿಳಿಸಿದರೂ ಪರಿಹಾರವಾಗಿಲ್ಲ ಎಂದು ಸಿರಿಲ್ ಪಿಂಟೊ ಅಳಲು ತೋಡಿಕೊಂಡರು. ಕೂಡಲೆ ಈ ಸಮಸ್ಯೆ ಪರಿಹಾರ ಮಾಡುವಂತೆ ಅಧಿಕಾರಿಗಳಿಗೆ ಮೇಯರ್ ಸೂಚಿಸಿದರು.
ಬೊಕ್ಕಪಟ್ಣದ ಶಾಲೆ ಹಿಂದೆ 60 ವರ್ಷ ಹಿಂದಿನ ಡ್ರೈನೇಜ್ ವ್ಯವಸ್ಥೆಯಿದ್ದು, ಇಡೀ ವಠಾರದಲ್ಲಿ ತೀವ್ರ ಸಮಸ್ಯೆಯಾಗಿದೆ. ಇಲ್ಲಿಗೆ ಒಳಚರಂಡಿ ಕಾಮಗಾರಿ ಮಂಜೂರಾಗಿ ಟೆಂಡರ್ ಆಗಿದ್ದರೂ ಕೆಲಸ ಆರಂಭಿಸಿಲ್ಲ. ಚುನಾವಣೆ ಘೋಷಣೆಯಾದ ಬಳಿಕ ಕಾಮಗಾರಿ ನಡೆಯಲ್ಲ. ಹಾಗಾಗಿ ಕೂಡಲೆ ಆರಂಭಿಸುವಂತೆ ಡಿ.ಎಸ್. ಬಾಳಿಗಾ ಒತ್ತಾಯಿಸಿದರು. ಶೀಘ್ರ ಆರಂಭಿಸುವಂತೆ ಮೇಯರ್ ಭರವಸೆ ನೀಡಿದರು. ನಂದಿಗುಡ್ಡೆಯಲ್ಲಿ 20 ಮನೆಗಳಿಗೆ ಒಳಚರಂಡಿ ಸಂಪರ್ಕ ಕಲ್ಪಿಸಿಲ್ಲ ಎಂದು ಅಲ್ಲಿನ ನಿವಾಸಿಗಳು ದೂರು ಹೇಳಿಕೊಂಡರು. ಇನ್ನೂ ಹಲವರು ಒಳಚರಂಡಿ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದರು.ರಸ್ತೆ ಸಮಸ್ಯೆ:ಜಪ್ಪು ಮಹಾಕಾಳಿಪಡ್ಪುವಿನಲ್ಲಿ ರಸ್ತೆಗೆ ಜಲ್ಲಿ ಹಾಕಿ ಡಾಂಬರಿಕರಣ ಇನ್ನೂ ಆರಂಭವಾಗಿಲ್ಲ ಎಂದು ಸ್ಥಳೀಯ ಗಫೂರ್ ದೂರು ಹೇಳಿದರು. ಕರಾವಳಿ ಸರ್ಕಲ್ ಬಳಿ ರಸ್ತೆ ಹೊಂಡ ಗುಂಡಿಗಳಿಂದ ತುಂಬಿದ್ದು ಸರಿಪಡಿಸುವಂತೆ ಜಿ.ಕೆ. ಭಟ್, ಚಿಲಿಂಬಿ ಕೋಟೆಕಣಿ ರಸ್ತೆ ರಿಪೇರಿ ಮಾಡುವಂತೆ ಜಯಕೃಷ್ಣ ಮನವಿ ಮಾಡಿದರು. ಶೀಘ್ರ ಕೆಲಸ ಆರಂಭಿಸುವುದಾಗಿ ಮೇಯರ್ ಭರವಸೆ ನೀಡಿದರು.
ಬ್ಯಾನರ್ ವಿರುದ್ಧ ಕಟ್ಟುನಿಟ್ಟು:ನಗರದ ಹಲವೆಡೆ ಬೇಕಾಬಿಟ್ಟಿ ಬಂಟಿಂಗ್ಸ್ ಬ್ಯಾನರ್‌ಗಳನ್ನು ಹಾಕುತ್ತಿರುವುದರಿಂದ ಅಪಘಾತಗಳು ಸಂಭವಿಸುತ್ತಿವೆ ಎಂದು ಕೊಟ್ಟಾರಚೌಕಿಯ ಜಯಕೃಷ್ಣ ಗಮನ ಸೆಳೆದರು. ಪ್ರತಿಕ್ರಿಯಿಸಿದ ಮೇಯರ್, ಅನೇಕ ಕಡೆಗಳಲ್ಲಿ ಫುಟ್ಪಾತ್‌ಗಳಲ್ಲಿ ಬ್ಯಾನರ್ ಅಳವಡಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಯಾರೇ ಪ್ರಭಾವಿಗಳಿದ್ದರೂ ರಾಜಿ ಇಲ್ಲ ಎಂದರು.ನೀರಿನ ಬಿಲ್ ಕೊಟ್ಟಿದ್ದಕ್ಕೆ ಥ್ಯಾಂಕ್ಸ್!
ಐದಾರು ತಿಂಗಳಿನಿಂದ ನೀರಿನ ಬಿಲ್ ಬಾರದಿರುವ ಕುರಿತು ಕಳೆದ ಫೋನ್ ಇನ್ ಕಾರ್ಯಕ್ರಮದಲ್ಲಿ ತಿಳಿಸಿದ್ದೆ. ಅದಾಗಿ ಒಂದೇ ಗಂಟೆಯಲ್ಲಿ ಅಧಿಕಾರಿಗಳು ಬಂದು ಬಿಲ್ ನೀಡಿದ್ದಾರೆ ಎಂದು ಮೇರಿಹಿಲ್‌ನ ವಿನ್ಸೆಂಟ್ ಧನ್ಯವಾದ ತಿಳಿಸಿದರು.ಶ್ರೀನಿವಾಸ್ ಮಲ್ಯ ಮನೆಗೆ 40 ಸಾವಿರ ಆಸ್ತಿ ತೆರಿಗೆ!ಪರಿಷ್ಕೃತ ಮಾರ್ಗದರ್ಶಿ ಮೌಲ್ಯದ ಆಧಾರದ ಮೇಲೆ ಆಸ್ತಿ ತೆರಿಗೆ ಹೆಚ್ಚಿಸಿದ ಕಾರಣ ದಕ್ಷಿಣ ಕನ್ನಡದ ಶಿಲ್ಪಿ ಎಂದೇ ಹೆಸರಾಗಿರುವ ದಿ.ಶ್ರೀನಿವಾಸ ಮಲ್ಯರ ಮಂಗಳೂರಿನ ಮನೆಗೆ 40 ಸಾವಿರ ರು. ಆಸ್ತಿ ತೆರಿಗೆ ಬಂದಿದೆ. ಮಲ್ಯರ ಮನೆಯಲ್ಲಿ ಪ್ರಸ್ತುತ ಅವರ ಸಹೋದರ ವಾಸವಾಗಿದ್ದಾರೆ. ಕಳೆದ ವರ್ಷ ಅವರಿಗೆ ಕೇವಲ 8476 ರು. ಆಸ್ತಿ ತೆರಿಗೆ ಬಂದಿತ್ತು. ಈ ವರ್ಷ ಹೆಚ್ಚಳವಾದ ಕುರಿತು ಅವರು ಮೇಯರ್‌ಗೆ ಮನವಿ ಸಲ್ಲಿಸಿದ್ದಾರೆ.