ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡಿ: ಗಾಳೆಪ್ಪ

| Published : Feb 29 2024, 02:04 AM IST

ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡಿ: ಗಾಳೆಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ರೈತರ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸದೇ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಗಾಳೆಪ್ಪ ಆಗ್ರಹಿಸಿದರು.

ಹೊಸಪೇಟೆ: ರಾಜ್ಯದ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ(ವಾಸುದೇವ ಮೇಟಿ ಬಣ) ವತಿಯಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿ ವಿಜಯನಗರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿಪತ್ರ ರವಾನಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ರೈತರನ್ನುದ್ದೇಶಿಸಿ ರೈತ ಸಂಘದ ಜಿಲ್ಲಾಧ್ಯಕ್ಷ ಸಿ.ಎ. ಗಾಳೆಪ್ಪ ಮಾತನಾಡಿ, ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದೆ. ಆದರೂ ಕೇಂದ್ರ ಸರ್ಕಾರ ಇದುವರೆಗೆ ಬಿಡಿಗಾಸು ಪರಿಹಾರ ಬಿಡುಗಡೆ ಮಾಡಿಲ್ಲ. ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ರೈತರ ಬೇಡಿಕೆಗಳನ್ನು ಈಡೇರಿಸಬೇಕಾದ ಸರ್ಕಾರ ಅವರ ಬೇಡಿಕೆಗಳನ್ನು ಈಡೇರಿಸದೇ ಮೀನಮೇಷ ಎಣಿಸುತ್ತಿದೆ ಎಂದು ದೂರಿದರು.

ತುಂಗಭದ್ರಾ ಜಲಾಶಯದಲ್ಲಿ ಹೂಳು ಪರಿಹಾರಕ್ಕಾಗಿ ಕೊಪ್ಪಳದ ನವಲಿ ಬಳಿ ಸಮನಾಂತರ ಜಲಾಶಯ ನಿರ್ಮಾಣಕ್ಕೆ ₹15600 ಕೋಟಿ ಮೊತ್ತದ ಅಂದಾಜು ಯೋಜನಾ ವರದಿ ಬಂದಿದೆ. ಕೇಂದ್ರ ಸರ್ಕಾರ ಈ ಯೋಜನೆಯನ್ನೂ ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಬೇಕು. ರೈತರ ಸಂಕಷ್ಟಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಬೇಕು. ರಾಜ್ಯದ ರೈತರ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸದೇ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

ಬೇಡಿಕೆಗಳು: ಹೊಸಪೇಟೆಯಲ್ಲಿ ಕೂಡಲೇ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡಬೇಕು. ರಾಯ, ಬಸವ ಕಾಲುವೆಗಳನ್ನು ಸ್ವಚ್ಛಗೊಳಿಸಬೇಕು. ಡಾ. ಎಂ.ಎಸ್‌. ಸ್ವಾಮಿನಾಥನ್‌ ಆಯೋಗದ ವರದಿ ಅನ್ವಯ ರೈತರ ಬೆಳೆಗಳಿಗೆ ಬೆಲೆ ನಿಗದಿಗೊಳಿಸಬೇಕು. ಈಗಾಗಲೇ ಹರ್ಯಾಣ, ಪಂಜಾಬ್‌ ಸೇರಿದಂತೆ ದೇಶದ ವಿವಿಧ ಭಾಗದ ರೈತರು ಹೋರಾಟ ನಡೆಸುತ್ತಿದ್ದಾರೆ. ರೈತರ ಬೇಡಿಕೆಯಂತೆ ಕೂಡಲೇ ಕೇಂದ್ರ ಸರ್ಕಾರ ಬೆಲೆ ನಿಗದಿಗೊಳಿಸಬೇಕು. ಹೊಸಪೇಟೆಯ ಮರಿಯಮ್ಮನಹಳ್ಳಿ ಹೋಬಳಿ ಭಾಗದಲ್ಲಿ ದೇವದಾಸಿಯರು ಇದ್ದು, ಇವರ ಬೇಡಿಕೆಯನ್ನು ಸರ್ಕಾರ ಪರಿಗಣಿಸಿ ನಿವೇಶನ, ಮನೆ ನಿರ್ಮಿಸಿಕೊಡಬೇಕು. ಈ ಬಡ ಮಹಿಳೆಯರ ಕಲ್ಯಾಣಕ್ಕಾಗಿ ಯೋಜನೆ ರೂಪಿಸಿ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಬಸಪ್ಪ, ಮಹೇಶ್, ರಾಜಾಹುಲಿ, ಹನುಮಂತ, ವೆಂಕಟೇಶ್, ಶಿವಣ್ಣ, ಮಂಜುನಾಥ್, ಸರಳಾ ಕಾವ್ಯ ಮತ್ತಿತರರಿದ್ದರು.