ಸಾರಾಂಶ
ವಿ. ಬಾಡಗ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ । ಚಾಂಪಿಯನ್ ಪಟ್ಟಕ್ಕಾಗಿ ಇಂದು ಹಣಾಹಣಿ
ಕನ್ನಡಪ್ರಭ ವಾರ್ತೆ ಪೊನ್ನಂಪೇಟೆಬಿಟ್ಟಂಗಾಲ ಸಮೀಪದ ವಿ. ಬಾಡಗದ ಹೈಫ್ಲೈಯರ್ಸ್ ಸಂಸ್ಥೆಯ ವತಿಯಿಂದ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಬಿಟ್ಟಂಗಾಲ, ಬಿ. ಶೆಟ್ಟಿಗೇರಿ ಮತ್ತು ಹಾತೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಐನ್‌ಮನೆಗಳನ್ನು ಹೊಂದಿರುವ ಕೊಡವ ಮನೆತನಗಳ ನಡುವಿನ 3ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಹೈಫ್ಲೈಯರ್ಸ್ ಕಪ್-2024ರ ಸೋಮವಾರ ನಡೆದ ಸೆಮಿಫೈನಲ್‌ನಲ್ಲಿ ಮುರುವಂಡ ಮತ್ತು ಚೇಂದಂಡ ತಂಡಗಳು ಗೆದ್ದು ಫೈನಲ್ ಪ್ರವೇಶಿಸಿದೆ.
ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಕಪ್ ಗೆದ್ದಿದ್ದ ಚೇಂದಿರ ಮತ್ತು ರನ್ನರ್ ಅಪ್ ಕೊಂಗಂಡ ತಂಡಗಳು ಈಗಾಗಲೇ ಪಂದ್ಯಾವಳಿಯಿಂದ ಹೊರಬಿದ್ದಿದ್ದು, ಈ ಬಾರಿ ಹೊಸ ಚಾಂಪಿಯನ್ ತಂಡ ಹೊರಹೊಮ್ಮಲಿದೆ. ಮುರುವಂಡ ಮತ್ತು ಚೇಂದಂಡ ತಂಡಗಳು ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದೆ. ಬಹುತೇಕ ಯುವ ಆಟಗಾರರನ್ನೇ ಹೊಂದಿರುವ ಈ ಎರಡೂ ತಂಡಗಳು ಇಂದು (ಮಂಗಳವಾರ) ನಡೆಯಲಿರುವ ಫೈನಲ್ ಪಂದ್ಯದಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ಹೋರಾಟ ನಡೆಸಲಿದೆ.ಪ್ರಥಮ ಸೆಮಿಫೈನಲ್ ಪಂದ್ಯದಲ್ಲಿ ಮರುವಂಡ ತಂಡವು ತೀತಮಾಡ ತಂಡವನ್ನು 2-1 ಗೋಲುಗಳಿಂದ ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು. ಆರಂಭದಲ್ಲೇ ಬಿರುಸಿನ ಆಟಕ್ಕೆ ಒತ್ತು ನೀಡಿದ ಮುರುವಂಡ ತಂಡದ ಆಟಗಾರರು, ಎದುರಾಳಿಯ ‘ಡಿ’ ಆವರಣದೊಳಗೆ ನಿರಂತರವಾಗಿ ನುಗ್ಗಿದರು. ಪದೇಪದೆ ಪೆನಾಲ್ಟಿ ಕಾರ್ನರ್ ಅವಕಾಶ ದೊರೆಯುತ್ತಿದ್ದರೂ ಎದುರಾಳಿ ತಂಡದ ಆಟಗಾರರ ರಕ್ಷಣಾತ್ಮಕ ಪ್ರಯತ್ನದಿಂದಾಗಿ ಗೋಲುಗಳಿಸುವಲ್ಲಿ ವಿಫಲವಾಯಿತು. ಪಂದ್ಯದ 2ನೇ ಕ್ವಾರ್ಟರ್ ಅವಧಿಯ 29ನೇ ನಿಮಿಷದಲ್ಲಿ ತೀತಮಾಡ ತಂಡಕ್ಕೆ ದೊರೆತ ಪೆನಾಲ್ಟಿ ಸ್ಟ್ರೋಕ್ ಅನ್ನು ಗೋಲಾಗಿ ಪರಿವರ್ತಿಸುವಲ್ಲಿ ತಂಡದ ಅತಿಥಿ ಆಟಗಾರ ಅಚ್ಚಯ್ಯ ಯಶಸ್ವಿಯಾದರಲ್ಲದೆ, ತಂಡದ ಖಾತೆ ತೆರೆದರು. ಇದರಿಂದಾಗಿ ಮತ್ತೆ ಬಿರುಸಿನ ಆಟ ಮುಂದುವರಿಸಿದ ಮುರುವಂಡ ತಂಡದ ಅತಿಥಿ ಆಟಗಾರ ವಿಪುಲ್ ಉತ್ತಪ್ಪ 3ನೇ ಕ್ವಾರ್ಟರ್ ಅವಧಿಯ 32ನೇ ನಿಮಿಷದಲ್ಲಿ ತಂಡಕ್ಕೆ ದೊರೆತ ಪೆನಾಲ್ಟಿ ಕಾರ್ನರನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರಲ್ಲದೆ, ಗೋಲಿನ ಅಂತರವನ್ನು ಸಮವಾಗಿಸಿದರು.ಇದರಿಂದ ಮತ್ತಷ್ಟು ಉತ್ಸುಕರಾದ ಮುರುವಂಡ ತಂಡದ ಆಟಗಾರರು ಉತ್ತಮ ಪಾಸ್‌ಗಳ ಮೂಲಕ ಆಟದ ವೇಗವನ್ನು ಹೆಚ್ಚಿಸಿದರು. ಪಂದ್ಯದ 4ನೇ ಕ್ವಾರ್ಟರ್ ಅವಧಿಯ 57ನೇ ನಿಮಿಷದಲ್ಲಿ ಮುರುವಂಡ ತಂಡದ ಅತಿಥಿ ಆಟಗಾರ ವಿಪುಲ್ ಉತ್ತಪ್ಪ ಮಿಂಚಿನ ಫೀಲ್ಡ್ ಗೋಲು ಬಾರಿಸಿ ತಂಡವನ್ನು ವಿಜಯದಡಕ್ಕೆ ಸೇರಿಸಿದರು. ಅಲ್ಲದೆ ತಂಡದ ವಿಜಯದಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ನಂತರ ಗೋಲುಗಳಿಸುವ ಯತ್ನದೊಂದಿಗೆ ಸಂಘಟಿತ ಆಟಕ್ಕೆ ಒತ್ತು ನೀಡಿದ ತೀತಮಾಡ ತಂಡದ ಪ್ರಯತ್ನ ಕೊನೆಗೂ ಕೈಗೂಡಲಿಲ್ಲ. ವಿಜೇತ ಮುರುವಂಡ ತಂಡಕ್ಕೆ 14 ಪೆನಾಲ್ಟಿ ಕಾರ್ನರ್ ದೊರೆತರೆ, ತೀತಮಾಡ ತಂಡಕ್ಕೆ ಯಾವುದೇ ಪೆನಾಲ್ಟಿ ಕಾರ್ನರ್ ದೊರೆಯಲಿಲ್ಲ.
2ನೇ ಸೆಮಿಫೈನಲ್ ಪಂದ್ಯದಲ್ಲಿ ಚೇಂದಂಡ ತಂಡ ಚಂದುರ ತಂಡ ಶೂಟೌಟ್‌ನಲ್ಲಿ 4-2 ಗೋಲುಗಳಿಂದ ಮಣಿಸಿ ಅಂತಿಮ ಹಣಾಹಣಿಗೆ ಪ್ರವೇಶಿಸಿತು. ಉತ್ತಮ ಅತಿಥಿ ಆಟಗಾರರನ್ನು ಹೊಂದಿದ್ದ ಉಭಯ ತಂಡಗಳು ಆರಂಭದಿಂದಲೇ ಸಮಬಲದ ಹೋರಾಟ ನಡೆಸುತ್ತಿತ್ತು. ಚಂದುರ ತಂಡದ ಅತಿಥಿ ಆಟಗಾರ ದರ್ಶನ್ ಉತ್ತಮ ಪಾಸೊಂದನ್ನು ಸಮರ್ಥವಾಗಿ ಬಳಸಿಕೊಂಡು ಪಂದ್ಯ ಆರಂಭಗೊಂಡ 19ನೇ ನಿಮಿಷದಲ್ಲೇ ಫೀಲ್ಡ್ ಗೋಲೊಂದನ್ನು ದಾಖಲಿಸಿ ತಂಡದ ಖಾತೆ ತೆರೆದರು. ನಂತರ ಚೇಂದಂಡ ತಂಡ ಎದುರಾಳಿ ತಂಡದ ‘ಡಿ’ ಆವರಣದೊಳಗೆ ಹಲವು ಬಾರಿ ದಾಳಿ ನಡೆಸಿದರೂ, ಆ ಎಲ್ಲ ಪ್ರಯತ್ನಗಳನ್ನು ಚಂದುರ ತಂಡದ ಆಟಗಾರರು ವಿಫಲಗೊಳಿಸಿದರು. ಸಂಘಟಿತ ಪ್ರಯತ್ನಗಳಿಗೆ ಒತ್ತು ನೀಡಿ ಆಟ ಬಿರುಸುಗೊಳಿಸಿದ ಚೇಂದಂಡ ತಂಡದ ಆಟಗಾರ ಬೋಪಣ್ಣ, 4ನೇ ಕ್ವಾಟರ್ ಅವಧಿಯ 59ನೇ ಫೀಲ್ಡ್ ಗೋಲನ್ನು ಬಾರಿಸಿ ಪಂದ್ಯವನ್ನು ಸಮಬಲಗೊಳಿಸಿದರು. ಇದರಿಂದಾಗಿ ಪಂದ್ಯ ಅಂತ್ಯಗೊಂಡ ಸಮಯದಲ್ಲಿ ಉಭಯ ತಂಡಗಳು ತಲಾ ಒಂದು ಗೋಲು ಗಳಿಸಿದ್ದರಿಂದ ವಿಜಯ ನಿರ್ಣಯಕ್ಕಾಗಿ ಶೂಟ್ ಔಟ್ ಅಳವಡಿಸಲಾಯಿತು. ಈ ವೇಳೆ ಚೇಂದಂಡ ತಂಡದ ಪರ 3 ಗೋಲು ಮತ್ತು ಚಂದುರ ತಂಡದ ಪರ ಏಕೈಕ ಗೋಲು ದಾಖಲಾಯಿತು. ವಿಜೇತ ತಂಡದ ಪರವಾಗಿ ಮೋಕ್ಷಿತ್, ಅಮೋಘ್ ಮತ್ತು ಬೋಪಣ್ಣ ಗೋಲು ಬಾರಿಸಿದರೆ, ಪರಾಜಿತ ತಂಡದ ಪರವಾಗಿ ಗ್ಯಾನ್ ಗೋಲು ದಾಖಲಿಸಿದರು.ವಿ. ಬಾಡಗ ಹೈಪ್ಲೈಯರ್ಸ್ ಸಂಸ್ಥೆಯ ಅಧ್ಯಕ್ಷ ಅಮ್ಮಣಿಚಂಡ ರಂಜು ಪೂಣಚ್ಚ, ಸಂಸ್ಥೆಯ ಸಲಹಾ ಸಮಿತಿ ಅಧ್ಯಕ್ಷ ಮಳವಂಡ ಗಿರೀಶ್ ಮುದ್ದಯ್ಯ ಅವರ ನೇತೃತ್ವದ ಹೈ ಫ್ಲೈಯರ್ಸ್ ಪದಾಧಿಕಾರಿಗಳ ತಂಡ ಪಂದ್ಯಾವಳಿಯ ಉಸ್ತುವಾರಿ ವಹಿಸಿಕೊಂಡಿದ್ದರು. ಅಮ್ಮಣಿಚಂಡ ರೋಹಿತ್ ಮತ್ತು ವಿನೋದ್ ವೀಕ್ಷಕ ವಿವರಣೆ ನೀಡಿದರು. ಸೆಮಿಫೈನಲ್ ಪಂದ್ಯದ ವಿಶೇಷವಾಗಿ ಉಳುವಂಗಡ ಲೋಹಿತ್ ಭೀಮಯ್ಯ ಅವರಿಂದ ಕೊಡವ ತಂದ್-ಬೆಂದ್ ಯೋಜನೆಯಡಿ ವಧು-ವರರ ನೋಂದಣಿ ಕಾರ್ಯವನ್ನು ಕೈಗೊಳ್ಳಲಾಯಿತು.
ಪಂದ್ಯಾವಳಿ ನಿರ್ದೇಶಕರಾದ ಕುಪ್ಪಂಡ ದಿಲನ್ ಬೋಪಣ್ಣ ಅವರ ನೇತೃತ್ವದಲ್ಲಿ ತೀರ್ಪುಗಾರರಾದ ಚಂದಪ್ಪಂಡ ಆಕಾಶ್, ಚೈಯಂಡ ಅಪ್ಪಚ್ಚು, ಕರವಂಡ ಅಪ್ಪಣ್ಣ, ಚೋಯಮಾಡಂಡ ಚಂಗಪ್ಪ, ಅಪ್ಪಚೆಟ್ಟೋಳಂಡ ಅಯ್ಯಪ್ಪ, ಸಣ್ಣುವಂಡ ನಂಜಪ್ಪ, ಪಟ್ರಪಂಡ ಮಂದಣ್ಣ, ಬೊಳ್ಳಚಂಡ ನಾಣಯ್ಯ, ಅನ್ನಾಡಿಯಂಡ ಪೊನ್ನಣ್ಣ ಮೊದಲಾದವರು ತಾಂತ್ರಿಕ ಸಮಿತಿಯಲ್ಲಿ ಕಾರ್ಯನಿರ್ವಹಿಸಿದರು.* ಪಂದ್ಯಾವಳಿಗೆ ಇಂದು ತೆರೆ
ಕಳೆದ ಶುಕ್ರವಾರದಿಂದ ಆರಂಭಗೊಂಡ ವಿ.ಬಾಡಗ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಗೆ ಮಂಗಳವಾರ (ಇಂದು) ತೆರೆ ಬೀಳಲಿದೆ. ಮಧ್ಯಾಹ್ನ 2.30ಕ್ಕೆ ಫೈನಲ್ ಪಂದ್ಯ ನಡೆಯಲಿದ್ದು, ಇದಕ್ಕೂ ಮೊದಲು ಬೆಳಗ್ಗೆ 11 ಗಂಟೆಗೆ ಪಂದ್ಯಾವಳಿಯ ತೃತೀಯ ಸ್ಥಾನದ ಪ್ರಶಸ್ತಿಗಾಗಿ ಸೆಮಿ ಫೈನಲ್‌ನಲ್ಲಿ ಪರಾಭವಗೊಂಡ ಚಂದುರ ಮತ್ತು ತೀತಮಾಡ ಕುಟುಂಬ ತಂಡಗಳ ನಡುವೆ ಪಂದ್ಯ ಜರುಗಲಿದೆ.ವಿ. ಬಾಡಗ ಹೈಪ್ಲೈಯರ್ಸ್ ಸಂಸ್ಥೆಯ ಅಧ್ಯಕ್ಷ ಅಮ್ಮಣಿಚಂಡ ರಂಜು ಪೂಣಚ್ಚ ಅಧ್ಯಕ್ಷತೆಯಲ್ಲಿ ನಡೆಯಲಿರುವ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಿಧಾನ ಪರಿಷತ್ ಸದಸ್ಯರಾದ ಎಂ.ಪಿ. ಸುಜಾ ಕುಶಾಲಪ್ಪ, ಫೈರ್ ಪ್ರೊ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ನಂಬುಡುಮಾಡ ಎಸ್. ನರೇಂದ್ರ, ಉದ್ಯಮಿ ಮುಂಡಂಡ ವರುಣ್ ಗಣಪತಿ, ಕೊಡಗು ಹೋಟೆಲ್ಸ್, ರೆಸ್ಟೋರೆಂಟ್ಸ್ ಮತ್ತು ರೆಸಾರ್ಟ್ ಮಾಲೀಕರ ಸಂಘ ಅಧ್ಯಕ್ಷ ಕುಂಡ್ಯೂಳಂಡ ದಿನೇಶ್ ಕಾರ್ಯಪ್ಪ, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕೆ. ಬೋಪಣ್ಣ, ಕಾಫಿ ಬೆಳೆಗಾರರಾದ ಚೇಮಿರ ಪ್ರಕಾಶ್ ಪೂವಯ್ಯ, ಮಳವಂಡ ಬೋಜಮ್ಮ ಅಚ್ಚಪ್ಪ, ಕೊಂಗಂಡ ಕಿಶೋರ್ ಕಾವೇರಪ್ಪ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಪಂದ್ಯಾವಳಿಯ ಸಮಾರೋಪ ಕಾರ್ಯಕ್ರಮದ ಅಂಗವಾಗಿ ವಿ. ಬಾಡಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಕೆ.ಸಿ. ಗೀತಾಂಜಲಿ, ಇದೇ ಶಾಲೆಯ ಸಹ ಶಿಕ್ಷಕಿ ಮಳವಂಡ ಶೈಲ ಕಾವೇರಮ್ಮ, ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಉಪನ್ಯಾಸಕಿ ಮುಲ್ಲೇಂಗಡ ರೇವತಿ ಪೂವಯ್ಯ ಹಾಗೂ ಹೆಸರಾಂತ ಅಥ್ಲೆಟ್ ಮುರುವಂಡ ಸ್ಪೂರ್ತಿ ಸೀತಮ್ಮ ಅವರನ್ನು ಹೈಫ್ಲೈಯರ್ಸ್ ಸಂಸ್ಥೆಯ ಪರವಾಗಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಅಮ್ಮಣಿಚಂಡ ರಂಜು ಪೂಣಚ್ಚ ತಿಳಿಸಿದ್ದಾರೆ.
ವಿಶೇಷವಾಗಿ ಪಂದ್ಯಾವಳಿಯ ವಿನ್ನರ್ಸ್, ರನ್ನರ್ಸ್ ಮತ್ತು ತೃತೀಯ ಸ್ಥಾನ ವಿಜೇತ ತಂಡಗಳಿಗೆ ನಗದು ಬಹುಮಾನದೊಂದಿಗೆ ಕಳೆದ ಬಾರಿಯಂತೆ ಶುದ್ಧ ಬೆಳ್ಳಿಯ ಟ್ರೋಫಿಗಳನ್ನು ನೀಡಿ ಗೌರವಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಅವರು ಮಾಹಿತಿ ನೀಡಿದ್ದಾರೆ.