ಸಾರಾಂಶ
ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳ, ರಾಯಚೂರು, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯ ರೈತರ ಜೀವ ನಾಡಿಯಾದ ತುಂಗಭದ್ರಾ ಜಲಾಶಯಕ್ಕೆ 1670 ಸಾವಿರ ಕ್ಯುಸೆಕ್ಸ್ ನೀರು ಹರಿದು ಬಂದಿದೆ.
ರೈತರಲ್ಲಿ ಸಂತಸ । ಈ ವರ್ಷ ಜಲಾಶಯದಲ್ಲಿ 1.4 ಟಿಎಂಸಿ ನೀರಿನ ಕೊರತೆ
ಎಸ್. ನಾರಾಯಣಕನ್ನಡಪ್ರಭ ವಾರ್ತೆ ಮುನಿರಾಬಾದ
ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳ, ರಾಯಚೂರು, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯ ರೈತರ ಜೀವ ನಾಡಿಯಾದ ತುಂಗಭದ್ರಾ ಜಲಾಶಯಕ್ಕೆ 1670 ಸಾವಿರ ಕ್ಯುಸೆಕ್ಸ್ ನೀರು ಹರಿದು ಬಂದಿದೆ.ಇದು ಪ್ರಸಕ್ತ ಸಾಲಿನಲ್ಲಿ ತುಂಗಭದ್ರಾ ಜಲಾಶಯಕ್ಕೆ ಹರಿದು ಬಂದ ಅತ್ಯಧಿಕ ಪ್ರಮಾಣದ ನೀರು. ಜಲಾಶಯದ ಇಂದಿನ ನೀರಿನ ಮಟ್ಟವು 1578 ಅಡಿಗಳಿದ್ದು, ಜಲಾಶಯದಲ್ಲಿ 3.63 ಟಿಎಂಸಿಯಷ್ಟು ನೀರು ಶೇಖರಣೆಯಾಗಿದೆ. ಕಳೆದ ವರ್ಷ ಇದೇ ದಿನದಂದು ತುಂಗಭದ್ರಾ ಜಲಾಶಯಕ್ಕೆ ಒಳಹರಿವು 723 ಕ್ಯುಸೆಕ್ಸ್ ನೀರು ಇತ್ತು ಹಾಗೂ ಜಲಾಶಯದಲ್ಲಿ 5 ಟಿಎಂಸಿಯಷ್ಟು ನೀರು ಶೇಖರಣೆಯಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಲಾಶಯದಲ್ಲಿ 1.4 ಟಿಎಂಸಿ ನೀರಿನ ಕೊರತೆ ಇದೆ.
ಜೂ. 1ರಿಂದ ಒಳಹರಿವು ಪ್ರಾರಂಭವಾಗಿದ್ದು, ಜಲಾಶಯಕ್ಕೆ 360 ಕ್ಯುಸೆಕ್ಸ್ ನೀರು ಹರಿದು ಬಂತು, ಜೂ. 2ರಂದು ಜಲಾಶಯಕ್ಕೆ 450 ಕ್ಯುಸೆಕ್ಸ್, ಜೂ. 3ರಂದು 710 ಕ್ಯುಸೆಕ್ಸ್, ಜೂ. 4ರಂದು ಜಲಾಶಯಕ್ಕೆ 620 ಕ್ಯುಸೆಕ್ಸ್, ಜೂ. 5ರಂದು ಜಲಾಶಯಕ್ಕೆ 430 ಕ್ಯುಸೆಕ್ಸ್ ನೀರು ಹರಿದು ಬಂದಿದೆ.ಶೂನ್ಯ ಒಳಹರಿವು ದಾಖಲೆ:
ಪ್ರಸಕ್ತ ಸಾಲಿನಲ್ಲಿ ಮೇ ತಿಂಗಳಲ್ಲಿ ತುಂಗಭದ್ರಾ ಜಲಾಶಯಕ್ಕೆ 1 ಹನಿ ನೀರು ಹರಿದು ಬಂದಿರುವುದಿಲ್ಲ. ಇದು ಈ ಜಲಾಶಯದ ಇತಿಹಾಸದಲ್ಲಿಯೇ ಒಂದು ದಾಖಲಾಗಿದೆ. ಸಾಮಾನ್ಯವಾಗಿ ಮೇ ತಿಂಗಳಲ್ಲಿ ತುಂಗಭದ್ರಾ ಜಲಾಶಯಕ್ಕೆ ಮೇ ತಿಂಗಳಲ್ಲಿ ಅಲ್ಪ ಸ್ವಲ್ಪ ನೀರು ಹರಿದು ಬರುತ್ತಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ಜಲಾಶಯದಲ್ಲಿ ಮೊದಲ ಬಾರಿಗೆ ಶೂನ್ಯ ಒಳಹರಿವು ದಾಖಲಾಗಿತ್ತು. ಇದು ರೈತರಲ್ಲಿ ಆತಂಕ ಮೂಡಿಸಿತ್ತು. ಈಗ ಒಳಹರಿವು ಪ್ರಾರಂಭವಾಗಿದ್ದು, ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿದೆ.ಅತ್ಯಧಿಕ ಒಳಹರಿವು ದಾಖಲೆ:
ತುಂಗಭದ್ರಾ ಜಲಾಶಯದ ಇತಿಹಾಸದಲ್ಲಿ 2020-21ನೇ ಸಾಲಿನ ಮೇ ತಿಂಗಳಲ್ಲಿ 1,33,000 ಲಕ್ಷ ಕ್ಯುಸೆಕ್ಸ್ (12 ಟಿಎಂಸಿ) ಯಷ್ಟು ನೀರು ಹರಿದು ಬಂದಿತ್ತು.ತುಂಗಭದ್ರಾ ಜಲಾಶಯದ ಕೊಪ್ಪಳ ಅಚ್ಚುಕಟ್ಟು ಪ್ರದೇಶದಲ್ಲಿ ಹಲವಾರು ದಿನಗಳಿಂದ ಮಳೆಯಾದ ಹಿನ್ನೆಲೆಯಲ್ಲಿ ಜೂನ್ ತಿಂಗಳಲ್ಲಿ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿದೆ ಎನ್ನಲಾಗಿದೆ.
ಮಲೆನಾಡು ಅದರಲ್ಲೂ ವಿಶೇಷವಾಗಿ ಶಿವಮೊಗ್ಗ ಮತ್ತು ಶೃಂಗೇರಿ ಭಾಗದಲ್ಲಿ ವ್ಯಾಪಕವಾಗಿ ಮಳೆಯಾದರೆ ತುಂಗಭದ್ರಾ ಜಲಾಶಯಕ್ಕೆ ಹರಿದು ಬರುವ ನೀರಿನ ಒಳಹರಿವಿನ ಪ್ರಮಾಣ ವ್ಯಾಪಕವಾಗಿ ಏರಿಕೆಯಾಗಲಿದೆ ಎಂದು ನೀರಾವರಿ ಇಲಾಖೆಯ ಅಧಿಕಾರಿಗಳು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.